ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊದಲು ಬೆಂಬಲ ಗಳಿಸಿ, ನಂತರ ರಾಜ್ಯಪಾಲರನ್ನು ಭೇಟಿ ಮಾಡಿ: ವಿಜಯ್ ವಿರುದ್ಧ ಕಿಡಿಕಾರಿದ ಡಿಎಂಕೆ

ತಮಿಳುನಾಡಿನಲ್ಲಿ ಸರ್ಕಾರ ರಚನೆ ವಿಚಾರವಾಗಿ ಟಿವಿಕೆ ಮುಖ್ಯಸ್ಥ ವಿಜಯ್ ರಾಜಕೀಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುಮತದ ಕೊರತೆಯ ನಡುವೆಯೇ ರಾಜ್ಯಪಾಲರನ್ನು ಭೇಟಿ ಮಾಡಿದ ವಿಜಯ್ ನಡೆಗೆ ಡಿಎಂಕೆ ತೀವ್ರ ಟೀಕೆ ವ್ಯಕ್ತಪಡಿಸಿದೆ. ಎಎಂಎಂಕೆ ಬೆಂಬಲ ಪತ್ರದ ವಿವಾದ ಮತ್ತಷ್ಟು ರಾಜಕೀಯ ಗೊಂದಲಕ್ಕೆ ಕಾರಣವಾಗಿದ್ದು, ಈಗ ತಮಿಳುನಾಡಿನ ಮುಂದಿನ ರಾಜಕೀಯ ಬೆಳವಣಿಗೆಗಳತ್ತ ಎಲ್ಲರ ಗಮನ ಹರಿದಿದೆ.

ತಮಿಳುನಾಡಿನಲ್ಲಿ ಮುಂದುವರಿದ ರಾಜಕೀಯ ಹೈಡ್ರಾಮ

ಸ್ಟಾಲಿನ್‌ ಮತ್ತು ವಿಜಯ್ (ಸಂಗ್ರಹ ಚಿತ್ರ) -

Profile
Sushmitha Jain May 9, 2026 3:08 PM

ಚೆನ್ನೈ: ತಮಿಳುನಾಡು (Tamil Nadu) ರಾಜಕಾರಣದಲ್ಲಿ (Politics) ಹೈಡ್ರಾಮ ಮುಂದುವರಿದಿದ್ದು, ನಟ-ರಾಜಕಾರಣಿ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ (Vijay) ಅವರ ರಾಜಕೀಯ ನಡೆಯನ್ನು ಡಿಎಂಕೆ (DMK) ತೀವ್ರವಾಗಿ ಟೀಕಿಸಿದೆ. "ಮೊದಲು ರಾಜಕೀಯ ಪಕ್ಷಗಳ ಬೆಂಬಲವನ್ನು ಸರಿಯಾಗಿ ಸಂಗ್ರಹಿಸಿ ಸಿದ್ಧರಾಗಿ, ನಂತರ ರಾಜ್ಯಪಾಲರ ಬಳಿ ಹೋಗಿ" ಎಂದು ಡಿಎಂಕೆ ಹಿರಿಯ ನಾಯಕ ಟಿ.ಕೆ.ಎಸ್. ಇಳಂಗೋವನ್ (TKS Elangovan) ವಿಜಯ್‌ಗೆ ಕಡಕ್ ಸಲಹೆ ನೀಡಿದ್ದಾರೆ.

ಮೈತ್ರಿ ಸರ್ಕಾರ ರಚಿಸುವ ಇಚ್ಛೆಯೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದ ವಿಜಯ್ ನೇತೃತ್ವದ ಟಿವಿಕೆ, ಬಹುಮತಕ್ಕೆ ಬೇಕಾದ 118 ಸ್ಥಾನಗಳ ಮ್ಯಾಜಿಕ್ ಸಂಖ್ಯೆಯನ್ನು ತಲುಪಲು ವಿಫಲವಾಗಿದೆ. ಈ ಕುರಿತು ಮಾತನಾಡಿದ ಇಳಂಗೋವನ್, "ಟಿವಿಕೆ 107 ಸ್ಥಾನಗಳೊಂದಿಗೆ ಏಕಾಂಗಿಯಾಗಿ ರಾಜ್ಯಪಾಲರ ಬಳಿ ಹೋಗಿದ್ದರೆ, ಸಂಪ್ರದಾಯದಂತೆ ಅತಿದೊಡ್ಡ ಪಕ್ಷವಾಗಿ ಸರ್ಕಾರ ರಚಿಸಲು ಅವರಿಗೆ ಆಹ್ವಾನ ಸಿಗುತ್ತಿತ್ತು. ತದನಂತರ ಸದನದಲ್ಲಿ ಅವರು ಬಲ ಪ್ರದರ್ಶಿಸಬಹುದಿತ್ತು. ಆದರೆ ಅವರು ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಹೋದಾಗ ಆ ಸಂಖ್ಯೆ 112ಕ್ಕೆ ಏರಿತು. ಆದರೂ ಇದು ಬಹುಮತಕ್ಕಿಂತ ಕಡಿಮೆಯಾಗಿದೆ. ಸಂಖ್ಯಾಬಲವಿಲ್ಲದಿದ್ದಾಗ ರಾಜ್ಯಪಾಲರು ಖಂಡಿತವಾಗಿಯೂ ಸರ್ಕಾರ ರಚಿಸಲು ಅವಕಾಶ ನೀಡುವುದಿಲ್ಲ" ಎಂದು ವಿವರಿಸಿದರು.

ತಮಿಳುನಾಡು ರಾಜಕೀಯ ಥ್ರಿಲ್ಲರ್‌ಗೆ ಮತ್ತೊಂದು ಟ್ವಿಸ್ಟ್‌; ಬಹುಮತ ಸಾಬೀತುಪಡಿಸುವಲ್ಲಿ ಮತ್ತೆ ಎಡವಿದ ವಿಜಯ್‌

ಎಎಂಎಂಕೆಗೆ ತಿರುಗೇಟು

ಆರಂಭದಲ್ಲಿ ಟಿಟಿವಿ ದಿನಕರನ್ ನೇತೃತ್ವದ ಎಎಂಎಂಕೆ ಬೆಂಬಲ ತಮಗಿದೆ ಎಂದು ಟಿವಿಕೆ ಪ್ರತಿಪಾದಿಸಿತ್ತು. ಆದರೆ ದಿನಕರನ್ ತಮ್ಮ ಪಕ್ಷದ ಶಾಸಕರ ಬೆಂಬಲ ಪತ್ರವನ್ನು ವಿಜಯ್ ಬಣ "ನಕಲು" ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಡಿಎಂಕೆ ನಾಯಕ, "ಶಾಸಕರ ಬೆಂಬಲವೇ ಇಲ್ಲದಿದ್ದಾಗ ಅಂತಹ ನಕಲಿ ಪತ್ರ ನೀಡುವುದು ಕಾನೂನುಬಾಹಿರ ಮತ್ತು ತಪ್ಪು. ಇದರ ವಿರುದ್ಧ ಈಗಾಗಲೇ ದೂರು ದಾಖಲಾಗಿದ್ದು, ಸತ್ಯಾಸತ್ಯತೆ ನ್ಯಾಯಾಲಯದಲ್ಲಿ ಸಾಬೀತಾಗಲಿ" ಎಂದರು.

ತಮಿಳುನಾಡಿನಲ್ಲಿ ಮುಂದುವರಿದ ಅನಿಶ್ಚಿತತೆ

ಸದ್ಯ ತಮಿಳುನಾಡು ವಿಧಾನಸಭೆಯ ಫಲಿತಾಂಶದ ನಂತರ ಯಾರು ಸರ್ಕಾರ ರಚಿಸಲಿದ್ದಾರೆ ಎಂಬ ಕುತೂಹಲ ತೀವ್ರಗೊಂಡಿದೆ. ವಿಜಯ್ ಅವರಿಗೆ ಕಾಂಗ್ರೆಸ್ ಮತ್ತು ಸಿಪಿಎಂ ಬೆಂಬಲವಿದ್ದರೂ, ಎಎಂಎಂಕೆ ಮತ್ತು ಐಯುಎಂಎಲ್ ಪಕ್ಷಗಳು ಅಂತಿಮ ಕ್ಷಣದಲ್ಲಿ ಬೆಂಬಲ ನೀಡಲು ನಿರಾಕರಿಸಿರುವುದು ಅವರಿಗೆ ದೊಡ್ಡ ಹಿನ್ನಡೆಯಾಗಿದೆ. ಈಗ ಎಲ್ಲರ ಕಣ್ಣು ವಿಸಿಡಿ ಮುಖ್ಯಸ್ಥ ತೋಳ್ ತಿರುಮಾವಳವನ್ ಅವರ ಮೇಲಿದ್ದು, ಅವರು ಇಂದು ವಿಜಯ್‌ಯನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಈ ಭೇಟಿಯ ನಂತರವಷ್ಟೇ ತಮಿಳುನಾಡು ರಾಜಕಾರಣದ ಮುಂದಿನ ದಿಕ್ಕು ಸ್ಪಷ್ಟವಾಗಲಿದೆ. ಅಲ್ಲಿಯವರೆಗೆ ರಾಜ್ಯದಲ್ಲಿ ಅಧಿಕಾರದ ಕುರಿತಾದ ಸಸ್ಪೆನ್ಸ್ ಮುಂದುವರಿಯಲಿದೆ. ಇದು ವಿಜಯ್ ಅವರ ರಾಜಕೀಯ ಜೀವನದ ಮೊದಲ ಮತ್ತು ಅತಿ ದೊಡ್ಡ ಪರೀಕ್ಷೆಯಾಗಿ ಮಾರ್ಪಟ್ಟಿದೆ.