ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೊನೆಗೂ ವಿಜಯ್‌ ಸಿಎಂ ಆಗುವ ಹಾದಿ ಸುಗಮ; ಬೆಂಬಲ ಘೋಷಿಸಿದ ವಿಸಿಕೆ: 118 ಮ್ಯಾಜಿಕ್‌ ನಂಬರ್‌ ತಲುಪಿದ ಟಿವಿಕೆ

Tamil Nadu Government Formation: ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮ ಕೊನೆಗೊಳ್ಳುವ ಹಂತಕ್ಕೆ ತಲುಪಿದೆ. ವಿಸಿಕೆ ಪಕ್ಷದ ಇಬ್ಬರು ಶಾಸಕರು ವಿಜಯ್‌ಗೆ ಬೇಷರತ್‌ ಬೆಂಬಲ ಸೂಚಿಸುವ ಮೂಲಕ ಮೊದಲ ಬಾರಿಗೆ ಟಿವಿಕೆ ಸರ್ಕಾರ ಅಧಿಕಾರಕ್ಕೆ ಬರಲಿದೆ.

ಕೊನೆಗೂ ವಿಜಯ್‌ಗೆ ಬೆಂಬಲ ಘೋಷಿಸಿದ ವಿಸಿಕೆ

ವಿಜಯ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole May 9, 2026 4:46 PM

ಚೆನ್ನೈ, ಮೇ 9: ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮ ಕೊನೆಗೊಳ್ಳುವ ಹಂತಕ್ಕೆ ತಲುಪಿದೆ (Tamil Nadu Government Formation). ವಿಸಿಕೆಯ ಇಬ್ಬರು ಶಾಸಕರು ಟಿವಿಕೆಗೆ ಬೆಂಬಲ ಘೋಷಿಸುವ ಮೂಲಕ ಸರ್ಕಾರ ರಚಿಸುವ ವಿಜಯ್‌ (Vijay) ಅವರ ಹಾದಿ ಸುಗಮವಾದಂತಾಗಿದೆ. ವಿಸಿಕೆಯ ಬೆಂಬಲದೊಂದಿಗೆ ವಿಜಯ್‌ ಮ್ಯಾಜಿಕ್‌ ಸಂಖ್ಯೆ 118 ತಲುಪಿದ್ದು, ಸದ್ಯದಲ್ಲೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಇದರಿಂದ ಟಿವಿಕೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾಸಭಾ ಚುನಾವಣೆಯಲ್ಲಿ ಟಿವಿಕೆ 107 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.

234 ಸದಸ್ಯ ಬಲದ ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ 118 ಶಾಸಕರ ಬೆಂಬಲ ಅಗತ್ಯವಿದೆ. ಸರ್ಕಾರ ರಚಿಸಲು ಟಿವಿಕೆಗೆ ಕಾಂಗ್ರೆಸ್‌, ಸಿಪಿಐ ಮತ್ತು ಸಿಪಿಎಂ ಬೆಂಬಲ ಸೂಚಿಸಿದ್ದರೂ ಸಂಖ್ಯೆ 116ಕ್ಕೆ ಸೀಮಿತವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ರಚಿಸಲು ವಿಜಯ್‌ಗೆ 2 ಸ್ಥಾನಗಳನ್ನು ಗೆದ್ದ ವಿಸಿಕೆ ಬೆಂಬಲ ಅತ್ಯಗತ್ಯವಾಗಿತ್ತು. ಇದೀಗ ವಿಸಿಕೆ ಅಧಿಕೃತವಾಗಿ ತನ್ನ ಬೆಂಬಲ ಸೂಚಿಸಿದ್ದು, ಮೊದಲ ಬಾರಿ ವಿಜಯ್‌ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ.

ವಿಜಯ್‌ಗೆ ಬೆಂಬಲ ಸೂಚಿಸಿದ ವಿಸಿಕೆ:



ಕಿಂಗ್‌ ಮೇಕರ್‌ ವಿಸಿಕೆ

ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ ಎನ್ನುವ ಮಾತಿದೆ. ತಮಿಳುನಾಡು ರಾಜಕೀಯ ನೋಡಿದರೆ ಈ ಮಾತು ಶೇಕಡ ನೂರಕ್ಕೆ ನೂರರಷ್ಟು ಸತ್ಯ ಎನ್ನುವುದು ಸಾಬೀತಾಗಿದೆ. ಕೇವಲ 2 ಕಡೆಗಳಲ್ಲಿ ಜಯ ಗಳಿಸಿದ ವಿಸಿಕೆ ಇದೀಗ ಕಿಂಗ್‌ ಮೇಕರ್‌ ಆಗಿ ಹೊರ ಹೊಮ್ಮಿದೆ. ತೋಲ ತಿರುಮಾವಲನ್‌ ನೇತೃತ್ವದ ವಿಸಿಕೆಯಿಂದಲೇ ತಮಿಳುನಾಡಿನಲ್ಲಿ ಸರ್ಕಾರ ರೂಪುಗೊಂಡಿದ್ದು, ಪಕ್ಷಕ್ಕೆ ಪ್ರಮುಖ ಹುದ್ದೆ ಲಭಿಸುವ ಸಾಧ್ಯತೆ ಇದೆ.

ಟಿವಿಕೆ ಜತೆಗಿನ ಮೈತ್ರಿ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ವಾಗ್ದಾಳಿ

ರಾಷ್ಟ್ರಪತಿ ಆಡಳಿತ ತಪ್ಪಿಸಿದ ವಿಸಿಕೆ

ಕಾನೂನು ಪ್ರಕಾರ ಮೇ 10ರೊಳಗೆ ತಮಿಳುನಾಡಿನಲ್ಲಿ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇತ್ತು. ವಿಸಿಕೆಯ ಬೆಂಬಲದಿಂದ ಈ ಸನ್ನಿವೇಶ ಮಾಯವಾಗಿದ್ದು, ವಿಜಯ್‌ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಬಳಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ದಾರೆ. ಬಹುಮತ ದೊರೆತ ಹಿನ್ನೆಲೆಯಲ್ಲಿ ರಾಜ್ಯಪಾಲರು ಕೂಡ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ.

ಶುಕ್ರವಾರ (ಮೇ 8) ತಮಿಳುನಾಡು ರಾಜಕೀಯ ಬಿಡುವಿಲ್ಲದೆ ಚಟುವಟಿಕೆಗೆ ಸಾಕ್ಷಿಯಾಯಿತು. 107 ಸ್ಥಾನ ಪಡೆದ ಟಿವಿಕೆಗೆ ಗುರುವಾರ ಕಾಂಗ್ರೆಸ್‌ನ ಐವರು ಶಾಸಕರು ಬೆಂಬಲ ಸೂಚಿಸಿದ್ದರು. ಆ ಮೂಲಕ ವಿಜಯ್‌ ಸಂಖ್ಯಾಬಲ 112ಕ್ಕೆ ಏರಿತು. ಅದಾದ ಬಳಿಕ ಶುಕ್ರವಾರ ಎಡಂಗದ (ಸಿಪಿಐ ಮತ್ತು ಸಿಪಿಎಂ) ನಾಲ್ವರು, ಮುಸ್ಲಿಂ ಲೀಗ್‌ನ ಮತ್ತು ವಿಸಿಕೆಯ ತಲಾ ಇಬ್ಬರು ಶಾಸಕರು ಬೆಂಬಲ ನೀಡುವುದಾಗಿ ಹೇಳಿದರು. ಆ ಮೂಲಕ ವಿಜಯ್‌ಗೆ 120 ಶಾಸಕರ ಬಲ ದೊರೆಯಿತು.

ಕೊನೆಗೂ ತಮಿಳುನಾಡಿನಲ್ಲಿ ಅಸ್ತಿತ್ವಕ್ಕೆ ಬರಲಿದೆ ಟಿವಿಕೆ ಸರ್ಕಾರ; ವಿಜಯ್‌ಗೆ ಕಾಂಗ್ರೆಸ್‌ ಜತೆಗೆ ಎಡಪಕ್ಷ, ವಿಸಿಕೆ ಬೆಂಬಲ

ಬಳಿಕ ನಡೆದ ದಿಢೀರ್‌ ಬೆಳವಣಿಗೆಯಲ್ಲಿ ಮುಸ್ಲಿಂ ಲೀಗ್‌ ಮತ್ತು ವಿಸಿಕೆಯ ತಲಾ ಇಬ್ಬರು ಶಾಸಕರು ಬೆಂಬಲ ಹಿಂಪಡೆದುಕೊಂಡರು. ಮತ್ತೆ ವಿಜಯ್‌ ಬೆಂಬಲ 116ಕ್ಕೆ ಕುಸಿಯಿತು. ನಂತರ ವಿಸಿಕೆ ನಾಯಕರ ಮನವೊಲಿಸುವಲ್ಲಿ ಟಿವಿಕೆ ಯಶಸ್ವಿಯಾಗಿದ್ದು, ಕೊನೆಗೂ ಆಡಳಿತ ಚುಕ್ಕಾಣಿ ಹಿಡಿದಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.