ತಿರುವನಂತಪುರಂ, ಜೂ. 16: ಯುಎಇಯ ಜೆಡ್ಡಾಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನವು ಮಂಗಳವಾರ (ಜೂನ್ 16) ಬೆಳಗ್ಗೆ ಕೇರಳಂನ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿತು. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪೈಲಟ್‌ಗಳಿಗೆ ಎಂಜಿನ್ ಎಚ್ಚರಿಕೆ ಸೂಚನೆ ದೊರೆತ ಹಿನ್ನೆಲೆಯಲ್ಲಿ ವಿಮಾನ ವಾಪಸ್ಸಾಗಿದೆ. 180ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಈ ವಿಮಾನವು ಬೆಳಗ್ಗೆ ಸುಮಾರು 7.40ಕ್ಕೆ ಕಣ್ಣೂರಿನಿಂದ ಹೊರಟಿತ್ತು. ಆದರೆ ಪ್ರಯಾಣ ಆರಂಭಗೊಂಡ ಸುಮಾರು ಎರಡು ಗಂಟೆಗಳ ಬಳಿಕ, ವಿಮಾನದ ಸಿಬ್ಬಂದಿ ಎಂಜಿನ್‌ಗೆ ಸಂಬಂಧಿಸಿದ ಎಚ್ಚರಿಕೆ ಸಂದೇಶ ಬಂದಿರುವುದನ್ನು ಗಮನಿಸಿದರು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಹಿಂತಿರುಗಿಸಲು ಸಿಬ್ಬಂದಿ ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.
ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಸುರಕ್ಷಿತವಾಗಿ ಭೂಸ್ಪರ್ಶ ಮಾಡಲು ಅಗತ್ಯವಾದ ತೂಕವನ್ನು ಕಡಿಮೆಗೊಳಿಸುವ ಉದ್ದೇಶದಿಂದ ವಿಮಾನವು ಲ್ಯಾಂಡಿಂಗ್‌ಗೆ ಮುನ್ನ ಕೆಲಕಾಲ ಗಾಳಿಯಲ್ಲೇ ಸುತ್ತಾಡಿ ಹೆಚ್ಚುವರಿ ಇಂಧನವನ್ನು ಖರ್ಚು ಮಾಡಿತು. ಬಳಿಕ ವಿಮಾನವು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.
ಕೋಲ್ಕತ್ತಾ ವಿಮಾನ ನಿಲ್ದಾಣ ವಿಸ್ತರಣೆಗೆ 136 ವರ್ಷದ ಮಸೀದಿ ಸ್ಥಳಾಂತರ
ನಂತರ ನಡೆದ ತಪಾಸಣೆಯಲ್ಲಿ ವಿಮಾನದ ಇಂಧನ ಫಿಲ್ಟರ್‌ನಲ್ಲಿ ಸಮಸ್ಯೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ವಿಮಾನದ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದ್ದು, ತೊಂದರೆಗೊಳಗಾದ ಪ್ರಯಾಣಿಕರಿಗೆ ಬೇರೆ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ವಿಮಾನದಲ್ಲಿ ಟಿಶ್ಯೂ ಪೇಪರ್ ಮೇಲೆ ಬಾಂಬ್ ಬೆದರಿಕೆ ಸಂದೇಶ
ಸುಮಾರು 180 ಪ್ರಯಾಣಿಕರನ್ನು ಹೊತ್ತಿದ್ದ ಲಖನೌ-ದೆಹಲಿ ಇಂಡಿಗೋ ವಿಮಾನಕ್ಕೆ ಜೂ. 12ರಂದು ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ನಿಗದಿತ ಪ್ರಯಾಣ ಆರಂಭಕ್ಕೂ ಮುನ್ನ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತಾ ಕ್ರಮ ಕೈಗೊಳ್ಳಲಾಯಿತು. ನಂತರ ಅಧಿಕಾರಿಗಳು ಈ ಬಾಂಬ್ ಬೆದರಿಕೆ ಸುಳ್ಳು ಎಂದು ಪತ್ತೆಹಚ್ಚಿದರು. ಆದರೆ, ಕಡ್ಡಾಯ ಭದ್ರತಾ ತಪಾಸಣೆ ಮತ್ತು ಇತರ ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸುವವರೆಗೆ ವಿಮಾನವನ್ನು ನಿಲ್ದಾಣದಲ್ಲೇ ಇರಿಸಲಾಯಿತು. ಈ ವಿಮಾನವು ಲಖನೌದಿಂದ ದೆಹಲಿಗೆ ಬೆಳಗ್ಗೆ 10.45ಕ್ಕೆ ಹೊರಡಬೇಕಾಗಿತ್ತು.
ವಿಮಾನ ಹೊರಡುವ ಸ್ವಲ್ಪ ಸಮಯದ ಮೊದಲು ವಿಮಾನದ ಸಿಬ್ಬಂದಿಗೆ ಬಾಂಬ್ ಬೆದರಿಕೆ ಇರುವ ಬಗ್ಗೆ ಮಾಹಿತಿ ಸಿಕ್ಕಿತು ಎಂದು ಮೂಲಗಳು ತಿಳಿಸಿತು. ಎಚ್ಚರಿಕೆ ನಂತರ, ವಿಮಾನವನ್ನು ಟೇಕ್‌ಆಫ್‌ಗೆ ಅನುಮತಿಸದೇ ಏಪ್ರನ್ ಪ್ರದೇಶದಲ್ಲೇ ತಡೆಹಿಡಿಯಲಾಯಿತು. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತಾ ಸಿಬ್ಬಂದಿ ತಕ್ಷಣವೇ ವಿಮಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸಿದರು.