ಶ್ರೀನಗರ, ಮಾ. 15: ಉತ್ತರ ಕಾಶ್ಮೀರದ ಉರಿ ಸೆಕ್ಟರ್‌ನ (Jammu and Kashmir) ನಿಯಂತ್ರಣ ರೇಖೆಯ ಉದ್ದಕ್ಕೂ ಶನಿವಾರ (ಮಾ. 14) ತಡರಾತ್ರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು (Indian Army operation) ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿವೆ. ಕಾರ್ಯಾಚರಣೆಯಲ್ಲಿ ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಉಗ್ರರ ಒಳನುಸುಳುವಿಕೆ ಪ್ರಯತ್ನದ ಬಗ್ಗೆ ನಿರ್ದಿಷ್ಟ ಗುಪ್ತಚರ ಇಲಾಖೆ ಮಾಹಿತಿ ಹಂಚಿಕೊಂಡ ನಂತರ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನ ಬುಚಾರ್ ಪ್ರದೇಶದಲ್ಲಿ ಕಾರ್ಯಾಚರಣೆ ಪ್ರಾರಂಭಿಸಲಾಯಿತು ಎಂದು ಭಾರತೀಯ ಸೇನೆ ತಿಳಿಸಿದೆ.
ಮಾರ್ಚ್ 14 ಮತ್ತು 15ರ ಮಧ್ಯರಾತ್ರಿಯಲ್ಲಿ ಜಂಟಿ ಕಾರ್ಯಾಚರಣೆ ಪ್ರಾರಂಭವಾಯಿತು. ಮಾಹಿತಿ ಪಡೆದ ನಂತರ ಭದ್ರತಾ ಪಡೆ ಆ ಪ್ರದೇಶದಲ್ಲಿ ದಾಳಿ ನಡೆಸಿದವು. ʼʼಒಳನುಸುಳುವಿಕೆ ಪ್ರಯತ್ನದ ಕುರಿತು ಜಮ್ಮು-ಕಾಶ್ಮೀರ ಪೊಲೀಸರು ಒದಗಿಸಿದ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಮಾರ್ಚ್ 14-15ರ ಮಧ್ಯರಾತ್ರಿ ಉರಿ ಸೆಕ್ಟರ್‌ನ ಬುಚಾರ್‌ನ ಜನರಲ್ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತುʼʼ ಎಂದು ಕಾರ್ಪ್ಸ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಆನ್‌ಲೈನ್ ಆಟಗಳ ಮೂಲಕ ಸೆಳೆಯುತ್ತಿದ್ದಾರೆ ಭಯೋತ್ಪಾದಕರು
ಕಾರ್ಯಾಚರಣೆ ನಡೆಸುತ್ತಿದ್ದಾಗ ದಟ್ಟವಾದ ಅರಣ್ಯದಲ್ಲಿ ಅಡಗಿರುವ ಶಂಕಿತ ಉಗ್ರನ ಅನುಮಾನಾಸ್ಪದ ಚಲನವಲನವನ್ನು ಯೋಧರು ಗಮನಿಸಿದರು. ಭಯೋತ್ಪಾದಕ ಸೈನಿಕರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ. ಯೋಧರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಸ್ವಲ್ಪ ಸಮಯದವರೆಗೆ ಗುಂಡಿನ ಚಕಮಕಿ ನಡೆಯಿತು. ಈ ಎನ್‌ಕೌಂಟರ್‌ನಲ್ಲಿ, ಓರ್ವ ಶಂಕಿತ ಪಾಕಿಸ್ತಾನಿ ಭಯೋತ್ಪಾದಕ ಹತ್ಯೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ಚಕಮಕಿಯ ನಂತರ, ಭದ್ರತಾ ಪಡೆಗಳು ಸ್ಥಳದಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡವು. ಅದರಲ್ಲಿ ಏಕೆ ರೈಫಲ್, ಪಿಸ್ತೂಲುಗಳು ಮತ್ತು ದೊಡ್ಡ ಪ್ರಮಾಣದ ಮದ್ದುಗುಂಡುಗಳು ಸೇರಿವೆ. ಬೇರೆ ಯಾವುದೇ ಉಗ್ರರು ಒಳನುಸುಳಿದ್ದಾರೆಯೇ ಎಂದು ತಿಳಿದುಕೊಳ್ಳಲು ಭದ್ರತಾ ಪಡೆಗಳು ಪ್ರದೇಶವನ್ನು ಶೋಧಿಸುತ್ತಿರುವುದರಿಂದ ಪ್ರದೇಶದಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಮೇಲಿನ ಪಾಕ್ ದಾಳಿಗೆ ಭಾರತ ಖಂಡನೆ
ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದ ಪಾಕಿಸ್ತಾನದ ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಅಫ್ಘಾನ್ ದಾಳಿಯಲ್ಲಿ 16 ನಾಗರಿಕರು ಮೃತಪಟ್ಟಿದ್ದರು. ಈ ದಾಳಿಯು ಹಲವು ನಾಗರಿಕರ ಸಾವಿಗೆ ಮತ್ತು ಮೂಲಸೌಕರ್ಯಗಳ ನಾಶಕ್ಕೆ ಕಾರಣವಾಗಿದೆ. ಅಫ್ಘಾನಿಸ್ತಾನದ ಭೂಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಗಳನ್ನು ಖಂಡಿಸುತ್ತೇವೆ ಎಂದು ಭಾರತ ಹೇಳಿದೆ.
ಪಾಕಿಸ್ತಾನವು ಕಾಬೂಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಾಯುದಾಳಿ ನಡೆಸಿದೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಶುಕ್ರವಾರ (ಮಾರ್ಚ್ 13) ಹೇಳಿತ್ತು. ಅದಾದ ಬಳಿಕ ತಿರುಗೇಟು ನೀಡಿದ ಅಫ್ಘಾನಿಸ್ತಾನದ ಸೇನೆಯು ಇಸ್ಲಾಮಾಬಾದ್ ಸೇರಿದಂತೆ ಪಾಕಿಸ್ತಾನದಲ್ಲಿನ ವಿವಿಧ ಸೇನಾನೆಲೆಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸಿತ್ತು.