ನವದೆಹಲಿ, ಫೆ. 2: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೋಮವಾರ ಲೋಕಸಭೆಯಲ್ಲಿ ಭಾರತ-ಚೀನಾ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ ನರವಾಣೆ (Manoj Mukund Naravane) ಅವರ ಅಪ್ರಕಟಿತ ಪುಸ್ತಕ ವಿಚಾರವನ್ನು ಪ್ರಸ್ತಾಪಿಸಲು ಯತ್ನಿಸಿದ್ದು, ಭಾರಿ ಕೋಲಾಹಲಕ್ಕೆ ಕಾರಣವಾಗಿ ಕೊನೆಗೆ ಕಲಾಪವನ್ನೇ ಮುಂದೂಡಬೇಕಾಯಿತು.
ಕಲಾಪ ಮುಂದೂಡಿಕೆ ಬಳಿಕ ಕಾಂಗ್ರೆಸ್ ನಾಯಕ ಶಶಿ ತರೂರ್ ಈ ವಿಚಾರವಾಗಿ ಮಾತನಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು. ಸಂಸತ್ತಿನ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತರೂರ್, "ರಾಹುಲ್ ಗಾಂಧಿಯವರನ್ನು ಸಮರ್ಥಿಸುತ್ತಾ, ಸರ್ಕಾರದ ಈ ನಡೆ ಅತಿರೇಕದ ಪರಮಾವಧಿ" ಎಂದರು. “ರಾಹುಲ್‌ಜೀಗೆ ತಮ್ಮ ಚಿಂತೆಗಳನ್ನು ಸದನಕ್ಕೆ ವಿವರಿಸಲು ಅವಕಾಶವೇ ಸಿಗಲಿಲ್ಲ. ಆ ಪುಸ್ತಕದಲ್ಲಿ ಸೇನೆ ಅಥವಾ ಸೈನಿಕರ ವಿರುದ್ಧ ಯಾವುದೇ ಆರೋಪಗಳಿಲ್ಲ.. ಪ್ರಶ್ನೆ ಇರುವುದು ಕೇಂದ್ರ ಸರ್ಕಾರ ತೆಗೆದುಕೊಂಡ ಅಥವಾ ತೆಗೆದುಕೊಳ್ಳದ ನಿರ್ಧಾರಗಳ ಬಗ್ಗೆ” ಎಂದು ಅವರು ಹೇಳಿದರು.
2020ರ ಪೂರ್ವ ಲಡಾಖ್‌ನಲ್ಲಿ ನಡೆದ ಭಾರತ–ಚೀನಾ ಸೇನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ, ಜನರಲ್ ನರವಣೆ ಅವರ ಅಪ್ರಕಟಿತ ಗ್ರಂಥವನ್ನು ಉಲ್ಲೇಖಿಸಿ ಪ್ರಶ್ನಿಸಲು ಯತ್ನಿಸಿದ್ದರು. ಇದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಸಚಿವ ಕಿರಣ್ ರಿಜಿಜು ಆಕ್ಷೇಪ ವ್ಯಕ್ತಪಡಿಸಿದರು. ಪ್ರಕಟವಾಗದ ಪುಸ್ತಕದ ಬಗ್ಗೆ ಸದನದಲ್ಲಿ ಉಲ್ಲೇಖಿಸುವುದು ಅನೂಚಿತ ಎಂದು ಅವರು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕರು, ಗಾಂಧಿ ಉಲ್ಲೇಖಿಸಲು ಬಯಸಿರುವ ವಿಷಯ ಈಗಾಗಲೇ ಮ್ಯಾಗಜಿನ್ ಲೇಖನದ ಮೂಲಕ ಸಾರ್ವಜನಿಕ ವಲಯದಲ್ಲಿದೆ ಎಂದು ಸ್ಪಷ್ಟಪಡಿಸಿದರು. ಆದರೆ ರಾಹುಲ್ ಗಾಂಧಿಗೆ ತಮ್ಮ ಭಾಷಣವನ್ನು ಮುಂದುವರಿಸಲು ಅವಕಾಶ ನೀಡಲಾಗಲಿಲ್ಲ.
ರಾಜಕೀಯ ಎಂಬುದು ಸಾಧ್ಯತೆಗಳ ಕಲೆ, ಇಲ್ಲಿ ಎಲ್ಲವೂ ಸಾಧ್ಯ: ಡಿ.ಕೆ.ಶಿವಕುಮಾರ್
ಈ ರೀತಿಯ ಅತಿರೇಕದಿಂದಲೇ ಸಂಸತ್ತಿನ ಚರ್ಚೆಗಳು ಅನಗತ್ಯವಾಗಿ ಸ್ಥಗಿತಗೊಂಡಿವೆ ಎಂದು ತರೂರ್ ಟೀಕಿಸಿದ್ದಾರೆ. “ವಾಸ್ತವಗಳು ತಪ್ಪಿದ್ದರೆ ಅವನ್ನು ತಿದ್ದುವುದು ಸರ್ಕಾರದ ಕರ್ತವ್ಯ. ಚರ್ಚೆಯನ್ನು ತಡೆಯುವುದು ಪರಿಹಾರವಲ್ಲ” ಎಂದರು. ನೆಹರೂ ಕಾಲದಲ್ಲೂ 1962ರ ಚೀನಾ ಯುದ್ಧದ ವೇಳೆ ಸಂಸತ್ತಿನಲ್ಲಿ ದೀರ್ಘ ಚರ್ಚೆಗಳು ನಡೆದಿದ್ದವು ಎಂಬುದನ್ನು ಅವರು ನೆನಪಿಸಿದರು. 1965 ಮತ್ತು 1971ರ ಯುದ್ಧಗಳ ಸಮಯದಲ್ಲಿಯೂ ಸಂಸತ್ತು ಕಾರ್ಯನಿರ್ವಹಿಸಿತ್ತು ಎಂದು ತರೂರ್ ಹೇಳಿದರು.
ಕಲಾಪ ಮುಂದೂಡಿಕೆಯ ಬಳಿಕ, ವಿಪಕ್ಷದ ನಾಯಕರು ಸಂಸತ್ತಿನಲ್ಲಿರುವ ರಾಹುಲ್ ಗಾಂಧಿಯವರ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಶಿ ತರೂರ್ ಹಾಗೂ ಇತರ ಹಿರಿಯ ನಾಯಕರು ಭಾಗವಹಿಸಿದ್ದರು. ವಿಶೇಷವಾಗಿ ತರೂರ್ ಸಭೆಯಲ್ಲಿ ಭಾಗಿಯಾಗಿರುವುದು ರಾಜಕೀಯ ವಲಯದಲ್ಲಿ ಗಮನಸೆಳೆದಿದೆ.
ಈ ಬೆಳವಣಿಗೆಗಳನ್ನು ರಾಹುಲ್ ಗಾಂಧಿ ಮತ್ತು ಶಶಿ ತರೂರ್ ನಡುವಿನ ಸಂಬಂಧಗಳು ನಿಧಾನವಾಗಿ ಸುಧಾರಿಸುತ್ತಿರುವ ಸೂಚನೆ ಎಂದು ಹೇಳಲಾಗುತ್ತಿದೆ. ಇತ್ತೀಚಿನವರೆಗೂ ಎಚ್ಚರಿಕೆಯ ನಿಲುವು ತಾಳುತ್ತಿದ್ದ ತರೂರ್, ಈ ಬಾರಿ ರಾಹುಲ್ ಗಾಂಧಿಗೆ ಸ್ಪಷ್ಟವಾಗಿ ಬೆಂಬಲ ವ್ಯಕ್ತಪಡಿಸಿರುವುದು, ಇಬ್ಬರ ನಡುವಿನ ಅಂತರ ದೂರವಾಗುತ್ತಿರುವ ಸಂಕೇತ ಎನ್ನಲಾಗಿದೆ.