ಕೋಲ್ಕತ್ತಾ, ಜೂ.9: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಬಿಕ್ಕಟ್ಟು (TMC crisis) ದಿನೇ ದಿನೇ ಬಿಗಡಾಯಿಸುತ್ತಿದೆ. ಬರಾಸತ್ ಕ್ಷೇತ್ರದಿಂದ ನಾಲ್ಕು ಬಾರಿ ಲೋಕಸಭಾ ಸಂಸದರಾಗಿರುವ ಮತ್ತು ವೃತ್ತಿಯಲ್ಲಿ ವೈದ್ಯೆಯಾಗಿರುವ ಕಾಕೋಲಿ ಘೋಷ್ ದಸ್ತಿದಾರ್ (Kakoli Ghosh Dastidar), ಟಿಎಂಸಿ ಎದುರಿಸುತ್ತಿರುವ ಅತಿದೊಡ್ಡ ಬಂಡಾಯಗಾರರಾಗಿ ಹೊರಹೊಮ್ಮಿದ್ದಾರೆ. ಹಿರಿಯ ಸಂಸದೆಯಾಗಿರುವ ಅವರು, ಸಂಸತ್ತಿನಲ್ಲಿ ಪ್ರತ್ಯೇಕ ಬಣವಾಗಿ ಮಾನ್ಯತೆ ಪಡೆಯಲು ಪ್ರಯತ್ನಿಸುತ್ತಿರುವ ಟಿಎಂಸಿ ಬಂಡಾಯ ಸಂಸದರ ಗುಂಪನ್ನು ಮುನ್ನಡೆಸುತ್ತಿದ್ದಾರೆ. ಈ ಬೆಳವಣಿಗೆ ಅವರನ್ನು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೊಂದಿಗೆ ನೇರ ಸಂಘರ್ಷಕ್ಕೆ ನಾಂದಿ ಹಾಡಿದೆ.
ವೈದ್ಯೆಯಿಂದ ರಾಜಕಾರಣಿಯಾದ ಕಾಕೋಲಿ ಘೋಷ್
1959 ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದ ದಸ್ತಿದಾರ್ ಅವರು ವೈದ್ಯರಾಗಿ ತರಬೇತಿ ಪಡೆದು ಆರ್‌ಜಿಕರ್ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದರು. ನಂತರ ಅವರು ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ ಪ್ರಸೂತಿ ಅಲ್ಟ್ರಾಸೌಂಡ್‌ನಲ್ಲಿ ಸ್ನಾತಕೋತ್ತರ ತರಬೇತಿಯನ್ನು ಪಡೆದರು. ರಾಷ್ಟ್ರೀಯ ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಅವರು ಪಶ್ಚಿಮ ಬಂಗಾಳದಲ್ಲಿ ಆರೋಗ್ಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
2009 ರಲ್ಲಿ ಬರಾಸತ್ ಲೋಕಸಭಾ ಸ್ಥಾನವನ್ನು ಗೆದ್ದ ನಂತರ ದಸ್ತಿದಾರ್ ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸಿದರು. ಸತತ ಚುನಾವಣೆಗಳಲ್ಲಿ ಸ್ಪರ್ಧಿಸಿ ಆ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಕೆಲವೇ ವರ್ಷಗಳಲ್ಲಿ, ಅವರು ಟಿಎಂಸಿಯ ಪ್ರಮುಖ ಮಹಿಳಾ ನಾಯಕಿಯರಲ್ಲಿ ಒಬ್ಬರಾದರು. ಹಾಗೆಯೇ ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ಮತ್ತು ಅಧ್ಯಕ್ಷರ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುವುದು ಸೇರಿದಂತೆ ಹಲವಾರು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಆಪ್ತ ವಲಯದವಲ್ಲಿ ಗುರುತಿಸಿಕೊಂಡಿದ್ದ ಕಾಕೋಲಿ ಘೋಷ್ ದಸ್ತಿದಾರ್ ಅವರು, ಸಂಸತ್ತಿನಲ್ಲಿ ಟಿಎಂಸಿಯ ಪ್ರಮುಖ ಧ್ವನಿಗಳಲ್ಲಿ ಒಬ್ಬರಾದರು. ಅವರ ಪತಿ ಸುದರ್ಶನ್ ಘೋಷ್ ದಸ್ತಿದಾರ್, ಟಿಎಂಸಿಯ ಮಾಜಿ ನಾಯಕರು ಮತ್ತು ಮಾಜಿ ಸಚಿವರಾಗಿದ್ದಾರೆ.
ಆದರೆ, 2026 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲಿನ ನಂತರ ಪಕ್ಷದೊಳಗಿನ ಬಿರುಕುಗಳು ಹೆಚ್ಚಾಯಿತು. ಪಕ್ಷದ ಕಾರ್ಯವೈಖರಿ, ನಾಯಕತ್ವ ಮತ್ತು ಚುನಾವಣಾ ಕಾರ್ಯತಂತ್ರದ ಬಗ್ಗೆ ಆಂತರಿಕ ಟೀಕೆಗಳು ತೀವ್ರಗೊಂಡವು. ಹಲವಾರು ನಾಯಕರು ಇದನ್ನು ಬಹಿರಂಗವಾಗಿಯೇ ಪ್ರಶ್ನಿಸಿದರು.
ಕಾಕೋಲಿ ಘೋಷ್ ದಸ್ತಿದಾರ್ ಪಕ್ಷದೊಳಗಿನ ಪ್ರಮುಖ ಸಂಘಟನಾತ್ಮಕ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ ಈ ಭಿನ್ನಮತ ಬಹಿರಂಗವಾಯಿತು. ಪಶ್ಚಿಮ ಬಂಗಾಳದಲ್ಲಿ ನಡೆದಿರುವ ನಿರುದ್ಯೋಗ ಮತ್ತು ಭ್ರಷ್ಟಾಚಾರದ ಬಗ್ಗೆ ಅವರು ಕಳವಳ ವ್ಯಕ್ತಪಡಿಸುವುದರ ಜೊತೆಗೆ ಪಕ್ಷದ ಆಂತರಿಕ ಕಾರ್ಯವೈಖರಿ ಮತ್ತು ಮಹಿಳಾ ನಾಯಕಿಯರನ್ನು ನಡೆಸಿಕೊಳ್ಳುವ ರೀತಿ ಬಗ್ಗೆಯೂ ಅತೃಪ್ತಿ ವ್ಯಕ್ತಪಡಿಸಿದರು.
ಟಿಎಂಸಿ ಹಿರಿಯ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರೊಂದಿಗಿನ ಸಾರ್ವಜನಿಕ ವಿವಾದದ ನಂತರ ನಾಯಕತ್ವದೊಂದಿಗಿನ ಅವರ ಭಿನ್ನಾಭಿಪ್ರಾಯಗಳು ತೀವ್ರಗೊಂಡವು. ಬ್ಯಾನರ್ಜಿಯವರ ಮಾತಿನಿಂದ ನಿಂದನೆ ಮತ್ತು ಸ್ತ್ರೀದ್ವೇಷದ ಹೇಳಿಕೆಗಳನ್ನು ಆರೋಪಿಸಿ ದಸ್ತಿದಾರ್ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದರು. ಇದು ಪಕ್ಷದೊಳಗೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಬಹಿರಂಗಪಡಿಸಿತು. ಇದೀಗ ದಸ್ತಿದಾರ್ ಟಿಎಂಸಿ ಬಂಡಾಯ ಸಂಸದರ ನೇತೃತ್ವ ವಹಿಸಿದ್ದಾರೆ.
ಈಗಾಗಲೇ 13 ಸಂಸದರ ಗುಂಪಾಗಿರುವ ಬಂಡಾಯ ಬಣ, ಸಂಸತ್ತಿನಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಮತ್ತು ತಮ್ಮ ಬಣಕ್ಕೆ ಪ್ರತ್ಯೇಕ ಮಾನ್ಯತೆ ನೀಡುವಂತೆ ಕೋರಿ ಓಂ ಬಿರ್ಲಾ ಅವರಿಗೆ ಪತ್ರ ಸಲ್ಲಿಸಲು ಯೋಜಿಸಿದೆ. ಅಲ್ಲದೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬೆಂಬಲ ನೀಡಲು ಸಿದ್ಧವಿರುವುದಾಗಿ ಹೇಳಿದೆ. ಶಾಸಕರು, ಸಂಸದರ ದಂಗೆಯು ಮಮತಾ ಬ್ಯಾನರ್ಜಿ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.