ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುಂದುವರಿದ ಟಿಎಂಸಿ ಬಿಕ್ಕಟ್ಟು: ಬೆರಳೆಣಿಕೆಯ ನಾಯಕರೊಂದಿಗೆ ಮಮತಾ ಬ್ಯಾನರ್ಜಿ ನಿವಾಸದಲ್ಲಿ ಸಭೆ

Mamata Banerjee Meeting: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ಸೀಮಿತ ಸಂಖ್ಯೆಯ ನಾಯಕರ ಸಭೆ ನಡೆಸಲಾಯಿತು. ಜೂನ್ 2ರಂದು ಕೋಲ್ಕತ್ತಾದಲ್ಲಿ ಬೀದಿಗಿಳಿಯುವ ಮೂಲಕ ಮಮತಾ ಬ್ಯಾನರ್ಜಿ ತಮ್ಮದೇ ಶೈಲಿಯ ಹೋರಾಟಕ್ಕೆ ಮರಳಿದ್ದರು. ಇದಾದ ಮೂರೇ ದಿನಗಳಲ್ಲಿ ಮಹತ್ವದ ಸಭೆ ನಡೆಸಲಾಗುತ್ತಿದೆ.

ಮಮತಾ ಬ್ಯಾನರ್ಜಿ ನಿವಾಸದಲ್ಲಿ ಟಿಎಂಸಿ ನಾಯಕರ ಮಹತ್ವದ ಸಭೆ

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ) -

Priyanka P
Priyanka P Jun 5, 2026 6:22 PM

ಕೋಲ್ಕತ್ತಾ, ಜೂ. 5: ಪಶ್ಚಿಮ ಬಂಗಾಳದಲ್ಲಿ ದಿನದಿಂದ ದಿನಕ್ಕೆ ತೃಣಮೂಲ ಕಾಂಗ್ರೆಸ್‌ ಬಿಕ್ಕಟ್ಟು ತಾರಕಕ್ಕೇರುತ್ತಿದೆ. ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರ ಕಾಲಿಘಾಟ್ ನಿವಾಸದಲ್ಲಿ ಸಭೆ ನಡೆಸಲಾಗಿದ್ದು, ಸೀಮಿತ ಸಂಖ್ಯೆಯ ನಾಯಕರನ್ನು ಮಾತ್ರ ಆಹ್ವಾನಿಸಲಾಗಿತ್ತು. ಪಶ್ಚಿಮ ಬಂಗಾಳ (West Bengal) ವಿಧಾನಸಭಾ ಚುನಾವಣೆಯ ಸೋಲಿನ ನಂತರ ಪಕ್ಷ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಶಾಸಕರು ಬಹಿರಂಗವಾಗಿಯೇ ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ (Abhishek Banerjee) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬೆರಳೆಣಿಕೆಯ ನಾಯಕರನ್ನಷ್ಟೇ ಸಭೆಗೆ ಕರೆಯಲಾಗಿದೆ.

ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾಜಿ ಶಾಸಕಿ ಚಂದ್ರಿಮಾ ಭಟ್ಟಾಚಾರ್ಯ, ರಾಜ್ಯಸಭಾ ಸಂಸದ ಡೋಲಾ ಸೇನ್, ಸ್ವರೂಪನಗರ ಶಾಸಕ ಬಿನಾ ಮಂಡಲ್, ಲೋಕಸಭೆ ಸಂಸದ ಅಭಿಷೇಕ್ ಬ್ಯಾನರ್ಜಿ, ಮಾಜಿ ಸಚಿವ ರಾಜೀವ್ ಬ್ಯಾನರ್ಜಿ ಮತ್ತು ಆಂಧ್ರ ಪ್ರದೇಶದ ಇಬ್ಬರು ಮಾಜಿ ಶಾಸಕರು ಇದ್ದರು.

ಜೂನ್ 2ರಂದು ಮಮತಾ ಬ್ಯಾನರ್ಜಿ ತಮ್ಮ ಬೀದಿ ಹೋರಾಟಕ್ಕೆ ಮರಳಿದ್ದರು. ಇದಾದ ಮೂರೇ ದಿನಗಳಲ್ಲಿ ಮಹತ್ವದ ಸಭೆ ನಡೆಸಲಾಗುತ್ತಿದೆ. ಅಂದು ನಡೆದ ಪ್ರತಿಭಟನೆಯಲ್ಲಿ ಬೆರಳೆಣಿಕೆಯ ಶಾಸಕರು, ಸಂಸದರಷ್ಟೇ ಪಾಲ್ಗೊಂಡಿದ್ದರು.

ಮಮತಾ ಬ್ಯಾನರ್ಜಿ ಕಣ್ಣೆದುರೇ ಇಬ್ಭಾಗವಾಗುತ್ತಿದೆ ಹೋರಾಟದ ಮೂಲಕ ಕಟ್ಟಿದ ಪಕ್ಷ; ಟಿಎಂಸಿ ಒಡಕಿಗೆ ಕಾರಣವಾದ ಆ 5 ಅಂಶಗಳಿವು

ಮಮತಾ ಹೇಳಿದ್ದೇನು?

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ್ದ ಮಮತಾ ಹೋರಾಡುತ್ತೇನೆ ಅಥವಾ ಸಾಯುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರು. ಬಿಜೆಪಿ ತನ್ನ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಸೇರಿ ತೃಣಮೂಲ ಕಾಂಗ್ರೆಸ್‌ ನಾಯಕರ ಮೇಲೆ ದಾಳಿ ಮಾಡುತ್ತಿದೆ ಮತ್ತು ಪಕ್ಷದ ಕಾರ್ಯಕರ್ತರನ್ನು ಬೆದರಿಸುತ್ತಿದೆ ಎಂದು ಆರೋಪಿಸಿದ್ದರು. ಚುನಾವಣೆಯಲ್ಲಿ ಮತಗಳನ್ನು ಲೂಟಿ ಮಾಡಿದ ಬಿಜೆಪಿ, ಇದೀಗ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದರು.

ಪ್ರತಿಭಟನೆಯಲ್ಲಿ ತೃಣಮೂಲ ಕಾಂಗ್ರೆಸ್‌ನ 80 ಶಾಸಕರಲ್ಲಿ 8 ಮಂದಿ ಮಾತ್ರ ಹಾಜರಿದ್ದರು. ಸೋವಂದೇಬ್ ಚಟ್ಟೋಪಾಧ್ಯಾಯ, ನಯ್ನಾ ಬಂಡೋಪಾಧ್ಯಾಯ, ಮದನ್ ಮಿತ್ರ, ಅಶೋಕ್ ದೇಬ್, ಅಸಿಮಾ ಪಾತ್ರಾ, ಬಿಮನ್ ಬ್ಯಾನರ್ಜಿ, ಫಿರ್ಹಾದ್ ಹಕೀಮ್ ಮತ್ತು ಕುನಾಲ್ ಘೋಷ್ ಉಪಸ್ಥಿತರಿದ್ದರು. ಸಂಸದರಾದ ಡೋಲಾ ಸೇನ್, ಕಲ್ಯಾಣ್ ಬ್ಯಾನರ್ಜಿ, ಡೆರೆಕ್ ಒ'ಬ್ರೇನ್, ಸಮೀರುಲ್ ಇಸ್ಲಾಂ, ಮೇನಕಾ ಗುರುಸ್ವಾಮಿ ಮತ್ತು ನಡಿಮುಲ್ ಹಕ್ ಆಗಮಿಸಿ ಬೆಂಬಲ ಸೂಚಿಸಿದ್ದರು.

ಮೇ 4ರಂದು ಹೊರಬಿದ್ದ ಫಲಿತಾಂಶದ ಬಳಿಕ ಟಿಎಂಸಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚುತ್ತಿದೆ. ಶಾಸಕರು ಮಾತ್ರವಲ್ಲ ಸಂಸದರೂ ಕೂಡ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಸುಮಾರು 23 ಸಂಸದರು ಬಂಡಾಯ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.

ಪಕ್ಷದ 80 ಶಾಸಕರಲ್ಲಿ 60 ಮಂದಿ ಪಕ್ಷ ತೊರೆದು, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಋತಬ್ರತಾ ಬ್ಯಾನರ್ಜಿ ಅವರನ್ನು ತಮ್ಮ ಬಣದ ನಾಯಕನನ್ನಾಗಿ ಘೋಷಿಸಿದ ನಂತರ ಭಿನ್ನಾಭಿಪ್ರಾಯ ಪ್ರಾರಂಭವಾಯಿತು. ಋತಬ್ರತಾ ಅವರಿಗೆ ವಿಧಾನಸಭಾ ಸ್ಪೀಕರ್ ವಿರೋಧ ಪಕ್ಷ ನಾಯಕನ ಮಾನ್ಯತೆ ನೀಡಿದ್ದಾರೆ. ಈ ಕ್ರಮವು ಪಕ್ಷದೊಳಗಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.