ನವದೆಹಲಿ, ಡಿ. 16: ಭಾರತದ ಪ್ರಮುಖ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪರಿಷ್ಕರಿಸುವ ನರೇಂದ್ರ ಮೋದಿ (Narendra Modi) ಸರ್ಕಾರದ ಯೋಜನೆಗೆ ವಿಪಕ್ಷ ಮಾತ್ರವಲ್ಲದೆ ಎನ್‌ಡಿಎಯ ಮಿತ್ರಪಕ್ಷದಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಕೇಂದ್ರ ಪ್ರಾಯೋಜಿತ ಯೋಜನೆಯ ವೆಚ್ಚವನ್ನು ರಾಜ್ಯಗಳಿಗೆ ವರ್ಗಾಯಿಸುವ ಪ್ರಸ್ತಾವನೆಗೆ ತೆಲುಗು ದೇಶಂ ಪಕ್ಷ (TDP) ಅತೃಪ್ತಗೊಂಡಿದೆ ಎನ್ನಲಾಗಿದೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮಹತ್ವದ ನೀತಿ ಬದಲಾವಣೆಗೆ ಮುಂದಾಗಿದ್ದು, ಗ್ರಾಮೀಣ ಉದ್ಯೋಗ ಭದ್ರತೆಗೆ ಎರಡು ದಶಕಗಳಿಂದ ಜಾರಿಯಲ್ಲಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)ಯನ್ನು ರದ್ದುಪಡಿಸಿ, ಅದರ ಬದಲಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಆಜೀವಿಕಾ ಮಿಷನ್ (ಗ್ರಾಮೀಣ) – VB-G RAM G ಬಿಲ್ 2025 ಅನ್ನು ಪರಿಚಯಿಸಿದ ಯೋಜನೆ ಇದಾಗಿದೆ. ಈ ನಿರ್ಧಾರವು ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ; ರಾಹುಲ್, ಸೋನಿಯಾ ಗಾಂಧಿಗೆ ಬಿಗ್ ರಿಲೀಫ್
ಗ್ರಾಮೀಣ ಪ್ರದೇಶಗಳಲ್ಲಿ ಅಶಿಕ್ಷಿತ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡುವ ಯೋಜನೆಯಲ್ಲಿ ಮಾಡಲಾಗುತ್ತಿರುವ ಈ ಮಹತ್ವದ ಬದಲಾವಣೆ, ರಾಜ್ಯಗಳು ಚುನಾವಣಾ ಪ್ರಚಾರದ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಲು ಆರ್ಥಿಕ ಒತ್ತಡವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಎದುರಾಗಿದೆ. ಉಚಿತ ಯೋಜನೆಗಳು (ಫ್ರೀಬೀಸ್) ರಾಜ್ಯಗಳ ಖಜಾನೆಯ ಮೇಲೆ ಭಾರಿ ಹೊರೆ ಉಂಟು ಮಾಡುತ್ತಿದ್ದು, ಹಲವು ಅಧ್ಯಯನಗಳು ರಾಜ್ಯಗಳ ಹಣಕಾಸು ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡಿವೆ.
ಮಹಾತ್ಮಾ ಗಾಂಧೀಜಿ ಅವರ ಅಂತಿಮ ಮಾತುಗಳು ‘ಹೇ ರಾಮ್’ ಆಗಿದ್ದವು. ಹಾಗಿದ್ದರೆ ಎಂಎನ್‌ಆರ್‌ಇಜಿಎ ಕಾಯ್ದೆಯಿಂದ ಮಹಾತ್ಮಾ ಗಾಂಧಿ ಅವರ ಹೆಸರನ್ನು ತೆಗೆದು ಹಾಕಬೇಕಾದ ಆವಶ್ಯಕತೆ ಏನು? ಶ್ರೀರಾಮನ ಮೇಲೆ ಗಾಂಧೀಜಿ ಅವರಿಗೆ ನಂಬಿಕೆ ಇರಲಿಲ್ಲ ಎಂಬ ಯಾವುದೇ ಸಂದೇಹ ಇದೆಯೇ? ಅವರ ಭಜನೆಗಳೇ ಅವರಿಗೆ ಭಗವಂತ ರಾಮನ ಮೇಲಿರುವ ನಂಬಿಕೆಗೆ ಸಾಕ್ಷಿ ಎಂದು ಕಾಂಗ್ರೆಸ್ ಸಂಸದ ಮಣೀಶ್ ತಿವಾರಿ ಹೇಳಿದ್ದಾರೆ.
ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿಯಿಂದ ಹಿಡಿದು ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒ ಬ್ರಿಯಾನ್‌ವರೆಗೆ, ವಿರೋಧ ಪಕ್ಷದ ಸಂಸದರು ಮಹಾತ್ಮಾ ಗಾಂಧೀಜಿಯ ಹೆಸರನ್ನು ಯೋಜನೆಯಿಂದ ಕೈಬಿಟ್ಟಿದ್ದಕ್ಕಾಗಿ ಟೀಕಿಸಿದ್ದಾರೆ.
VB-G RAM G ಬಿಲ್ ಮತ್ತು ಪ್ರಸ್ತುತ MNREGA ಕಾಯ್ದೆಯ ನಡುವಿನ ವ್ಯತ್ಯಾಸ ಏನು?
ಮನರೇಗಾದಲ್ಲಿನ ಮಹಾತ್ಮಾ ಗಾಂಧಿ ಬದಲಿಗೆ G RAM G ಎಂಬ ನಾಮಕರಣವು ಹೆಚ್ಚಿನ ಗಮನ ಸೆಳೆದಿದ್ದರೂ, ಯೋಜನೆಯಲ್ಲಿನ ನಿರ್ಣಾಯಕ ಬದಲಾವಣೆಗಳನ್ನು ಹಲವು ಪಕ್ಷಗಳು ವಿರೋಧಿಸುತ್ತಿವೆ. ಹೊಸ ಮಸೂದೆಯು ಕೇಂದ್ರ ಮತ್ತು ರಾಜ್ಯಗಳ ನಡುವೆ ಕ್ರಮವಾಗಿ 60:40 ನಿಧಿ ಹಂಚಿಕೆ ಮಾದರಿಯನ್ನು ಯೋಜಿಸಿದೆ.
ಪ್ರಸ್ತುತ ಜಾರಿಯಲ್ಲಿರುವ ಎಂಎನ್‌ಆರ್‌ಇಜಿಎ ಅಡಿಯಲ್ಲಿ, ಕೂಲಿ ಮತ್ತು ಸಾಮಗ್ರಿಗಳ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಪಾಲು ಶೇ. 90 ಆಗಿದ್ದು, ರಾಜ್ಯಗಳು ಶೇ. 10 ಕೊಡುಗೆ ನೀಡುತ್ತಿವೆ. ಈಶಾನ್ಯ ರಾಜ್ಯಗಳು ಹಾಗೂ ಉತ್ತರಾಖಂಡ, ಹಿಮಾಚಲ ಪ್ರದೇಶದಂತಹ ಪರ್ವತ ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರದಂತಹ ಕೇಂದ್ರಾಡಳಿತ ಪ್ರದೇಶಗಳ ವಿಷಯದಲ್ಲಿ, 90:10 ಅನುದಾನ ಹಂಚಿಕೆ ಮಾದರಿಯನ್ನು ಮುಂದುವರಿಸಲಾಗುತ್ತಿದೆ.
ಹೊಸ ಬಿಲ್‌ನಲ್ಲಿ ಗ್ರಾಮೀಣ ಉದ್ಯೋಗ ವ್ಯವಸ್ಥೆಯನ್ನು ಬೇಡಿಕೆ ಆಧಾರಿತ ಮಾದರಿಯಿಂದ ಪೂರೈಕೆ ಆಧಾರಿತ ಮಾದರಿಯತ್ತ ತಿರುಗಿಸುವುದಾಗಿ ಪ್ರಸ್ತಾಪಿಸಲಾಗಿದೆ. ಇದರರ್ಥ ಇನ್ನು ಮುಂದೆ ಗ್ರಾಮೀಣ ಕುಟುಂಬಗಳು ಕೆಲಸ ಕೇಳುವ ಎಲ್ಲ ಸ್ಥಳಗಳಲ್ಲಿ ಉದ್ಯೋಗ ನೀಡುವ ಬದಲು, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವ ಪ್ರದೇಶಗಳಲ್ಲಿ ಮಾತ್ರ ಉದ್ಯೋಗ ಒದಗಿಸಲಾಗುತ್ತದೆ. ಇದಲ್ಲದೆ, ಹೊಸ ವ್ಯವಸ್ಥೆಯಡಿ ನಿಗದಿತ ಬಜೆಟ್ ಮಿತಿಯೊಳಗೆ ಮಾತ್ರ ಅನುದಾನ ಹಂಚಿಕೆ ಮಾಡಲಾಗುವುದರಿಂದ, ಇದು ಸ್ಥಳೀಯ ಉದ್ಯೋಗ ಅಗತ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರಗಳಿಗೆ ನಮ್ಯತೆಯನ್ನು ಮಿತಿಗೊಳಿಸುತ್ತದೆ.
ಬಂಗಾಳದ SIR ಕರಡು ಪಟ್ಟಿ ಪ್ರಕಟ; 58 ಲಕ್ಷಕ್ಕೂ ಅಧಿಕ ಮತದಾರರ ಹೆಸರು ಡಿಲಿಟ್!
ಕೇಂದ್ರವು ಹಣಕಾಸಿನ ಹೊರೆಯನ್ನು ರಾಜ್ಯಗಳ ಮೇಲೆ ವರ್ಗಾಯಿಸುತ್ತಿರುವುದು ವಿವಾದದ ಪ್ರಮುಖ ಅಂಶ. ಎನ್‌ಡಿಎ ಮಿತ್ರಪಕ್ಷ ತೆಲುಗು ದೇಶಂ ಪಕ್ಷ (ಟಿಡಿಪಿ), ವಿಕನಿತ ಭಾರತ್ ಜಿ ರಾಮ್ ಜಿ ಯೋಜನೆಯಲ್ಲಿ ಪ್ರಸ್ತಾಪಿಸಲಾದ ಹಣಕಾಸಿನ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಈ ಹೊಸ ಹಣಕಾಸು ವ್ಯವಸ್ಥೆಯು ರಾಜ್ಯ ಸರ್ಕಾರದ ಮೇಲೆ ಹೊರೆಯನ್ನು ಹೇರುತ್ತದೆ. ಇದು ತುಂಬ ಕಳವಳಕಾರಿ. ವಿಶೇಷವಾಗಿ ಆಂಧ್ರ ಪ್ರದೇಶದಂತಹ ಹಣಕಾಸಿನ ಕೊರತೆಯಿರುವ ರಾಜ್ಯಕ್ಕೆ ಇದು ಹೊರೆ ಬೀಳುತ್ತದೆ ಎಂದು ಟಿಡಿಪಿಯ ಹಿರಿಯ ರಾಜ್ಯ ಸಚಿವರೊಬ್ಬರು ಹೇಳಿರುವುದಾಗಿ ವರದಿಯಾಗಿದೆ.
ಎನ್‌ಡಿಎಯ ಪ್ರಮುಖ ಮಿತ್ರ ಪಕ್ಷ ಟಿಡಿಪಿಯ ನಾಯಕರು ಕೂಡ ಎಂಜಿಎನ್‌ಆರ್‌ಇಜಿಎ ಬದಲಿಗೆ ಪ್ರಸ್ತಾಪಿಸಲಾಗುತ್ತಿರುವ ಜಿ RAM ಜಿ ಯೋಜನೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವುದರಿಂದ, ಸರ್ಕಾರವು ಕರಡು ಮಸೂದೆಯನ್ನು ಚರ್ಚೆಗಾಗಿ ಸಮಿತಿಗೆ ಕಳುಹಿಸಬೇಕಾಗುತ್ತದೆ.