ನವದೆಹಲಿ: ಇಲ್ಲಿ ತುರ್ತು ಪರಿಸ್ಥಿತಿಯಿದೆ. ನ್ಯಾಯವೇ ಇಲ್ಲ. ಪೊಲೀಸ್ ನ್ಯಾಯಾಲಯದಂತಿದೆ, ಏನು ನಡೆಯುತ್ತಿದೆ ನೋಡಿ. ಯಾವ ಆಧಾರದ ಮೇಲೆ ನಮ್ಮನ್ನು ಬಂಧಿಸಲಾಗಿದೆ ಎಂಬುದನ್ನು ಗಮನಿಸಿ ಎಂದು ಸಿಜೆಪಿ (cockroach janata party) ನಾಯಕ ಸೌರವ್ ದಾಸ್ (saurav das) ಹೇಳಿದರು. ಜಂತರ್ ಮಂತರ್ (Jantar Mantar) ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದಡಿಯಲ್ಲಿ ಬಂಧಿತರಾಗಿರುವ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ (Ashutosh Ranka) ಅವರ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ವಿಸ್ತರಣೆ ಮಾಡಿದ ಬಳಿಕ ಅವರು ಈ ಪ್ರತಿಕ್ರಿಯೆಯನ್ನು ನೀಡಿದರು.
ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯ ಬಳಿಕ ನ್ಯಾಯಾಲಯದಿಂದ ಹೊರಬರುವಾಗ ಮಾಧ್ಯಮದವರ ಮುಂದೆ ಜೋರಾಗಿ ಮಾತನಾಡಿದ ಸೌರವ್ ದಾಸ್, ಇಲ್ಲಿ ನ್ಯಾಯವೇ ಇಲ್ಲ. ನ್ಯಾಯಾಲಯವು ತಮ್ಮ ಜಾಮೀನನ್ನು ಯಾವ ಆಧಾರದ ಮೇಲೆ ತಿರಸ್ಕರಿಸಿತು ಎಂದು ಪ್ರಶ್ನಿಸಿದರು.
ದುರ್ಗಾ ಪೂಜೆ ಪೆಂಡಾಲ್ ಸ್ಥಳದಲ್ಲಿ ಸಿಪಿಐ ಪುಸ್ತಕ ಮಳಿಗೆಗಳ ಧ್ವಂಸ; ಸ್ವಪಕ್ಷದ ವಿರುದ್ಧವೇ ಬಿಜೆಪಿ ನಾಯಕರು ಗರಂ!
ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ನಿಷೇಧವಿಧಿಸಿ ಆದೇಶ ಹೊರಡಿಸಿದ ಬಳಿಕ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು ಅಕ್ರಮವಿ ಜಂತರ್ ಮಂತರ್ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿತ್ತು. ಅವರ ನ್ಯಾಯಾಂಗ ಬಂಧನವನ್ನು ಸೋಮವಾರ ಎರಡು ದಿನಗಳ ಕಾಲ ವಿಸ್ತರಿಸಲಾಗಿದೆ.
ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು ಪ್ರತಿಭಟನೆಯ ಸಂದರ್ಭದಲ್ಲಿ ಭದ್ರತೆಯನ್ನು ಉಲ್ಲಂಘಿಸಿ ನಿಷೇಧಿತ ಪ್ರದೇಶಕ್ಕೆ ಪ್ರವೇಶಿಸಿದ್ದಾರೆ ಎಂಬ ಆರೋಪದ ಮೇಲೆ ತಮ್ಮ ಜಾಮೀನನ್ನು ನ್ಯಾಯಾಲಯವು ತಿರಸ್ಕರಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಪೊಲೀಸ್ ವ್ಯಾನ್ನಲ್ಲಿದ್ದ ಸೌರವ್ ದಾಸ್, ಇಲ್ಲಿ ನ್ಯಾಯವೇ ಇಲ್ಲ ಎಂದು ದೂರಿದರು. ಇದನ್ನು 'ಸ್ಮಿತಾ ಶರ್ಮಾ ಜರ್ನಲಿಸ್ಟ್' ಎಂಬ ಯೂಟ್ಯೂಬ್ ಚಾನೆಲ್ ದಾಖಲಿಸಿಕೊಂಡಿತ್ತು.
ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಿದರು.
ಸಿಜೆಪಿ ನಾಯಕರು ಅಕ್ಟೋಬರ್ 11ರಂದು ನೀಡಿದ್ದ ಮುಚ್ಚಳಿಕೆಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಾರೆ. ಅವರ ಈ ನಡವಳಿಕೆಯು ಸರಿಯಾದ ರೀತಿಯಲ್ಲಿಲ್ಲ. ಇದು ಕಾನೂನಿನ ಬಗ್ಗೆ ಗೌರವವಿಲ್ಲದಿರುವುದನ್ನು ಮತ್ತು ನಿಷೇಧಿತ ಪ್ರದೇಶಗಳಲ್ಲಿ ಪ್ರತಿಭಟನೆಗಳನ್ನು ಆಯೋಜಿಸುವ ಇವರ ಅಭ್ಯಾಸವನ್ನು ತೋರಿಸುತ್ತದೆ. ಎರಡೂ ಕಡೆಯ ವಾದಗಳನ್ನು ಪರಿಗಣಿಸಿ ಪ್ರತಿವಾದಿಗಳಿಗೆ ತಮ್ಮ ವಾದಗಳನ್ನು ಲಿಖಿತ ರೂಪದಲ್ಲಿ ದಾಖಲಿಸಲು 2 ದಿನಗಳ ಕಾಲಾವಕಾಶ ನೀಡುವುದು ಸೂಕ್ತ ಎಂದು ಭಾವಿಸಿ ಎರಡು ದಿನಗಳ ನ್ಯಾಯಾಂಗ ಬಂಧನ ವಿಸ್ತರಿಸಿರುವುದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿರುವ ನ್ಯಾಯಾಲಯ, ಪ್ರತಿಭಟನಾಕಾರರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆಗೆ ಅನುಮತಿ ಇಲ್ಲದ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುವಂತೆ ಪದೇ ಪದೇ ಕರೆ ನೀಡಿದ್ದರು. ಇದು ಶಾಂತಿ ಭಂಗ ಮತ್ತು ಸಾರ್ವಜನಿಕ ನೆಮ್ಮದಿಗೆ ಧಕ್ಕೆ ಉಂಟಾಗುವ ಸಾಧ್ಯತೆಯ ಬಗ್ಗೆ ಕಳವಳ ಉಂಟು ಮಾಡಿತ್ತು ಎಂದು ಹೇಳಿದೆ.
ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲದೇ ಇದ್ದರೂ ಅಕ್ಟೋಬರ್ 13 ರಂದು ಇಲ್ಲಿಗೆ ಅಕ್ರಮ ಪ್ರವೇಶಕ್ಕೆ ಯತ್ನಿಸಿದ ರಂಕಾ, ದಾಸ್ ಮತ್ತು ಅಜಿಂಕ್ಯ ಶಿಂಧೆ ಅವರನ್ನು ಬಂಧಿಸಲಾಗಿತ್ತು, ಶಿಂಧೆ ಅವರನ್ನು ಬಳಿಕ ವೈಯಕ್ತಿಕ ಬಾಂಡ್ ಮತ್ತು 5,000 ರೂ. ಮೌಲ್ಯದ ಜಾಮೀನು ಭರವಸೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು. ಆದರೆ, ದಾಸ್ ಮತ್ತು ರಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಅಕ್ಟೋಬರ್ 16ರಂದು ಕನ್ನಾಟ್ ಪ್ಲೇಸ್ಗೆ ತೆರಳುತ್ತಿದ್ದ ಅಭಿಜೀತ್ ದಿಪ್ಕೆ ಅವರನ್ನು ಪೊಲೀಸರು ಬಂಧಿಸಿ ಒಂದು ದಿನದ ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಇದಕ್ಕಾಗಿ ವಿಧಿಸಲಾಗಿರುವ ಷರತ್ತಿನಲ್ಲಿ ಅವರು ಮುಂದಿನ ಒಂದು ವರ್ಷದ ಅವಧಿಯಲ್ಲಿ ಯಾವುದೇ ರೀತಿಯ ಶಾಂತಿ ಭಂಗವಾಗದಂತೆ ನೋಡಿಕೊಳ್ಳಬೇಕು ಎಂಬುದಾಗಿದೆ.