ನವದೆಹಲಿ: ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕೆ ಯಾವುದೇ ಸಮಯದ ನಿರ್ಬಂಧವಿಲ್ಲ. ಅವರಿಗಾಗಿ ಸಂವಾದದ ಬಾಗಿಲುಗಳು ಸದಾ ತೆರೆದಿವೆ ಎಂದು ಕೇಂದ್ರ ಸಚಿವ ಜೆಪಿ ನಡ್ಡಾ (Union Minister JP Nadda) ಹೇಳಿದರು. ಅವರು ಮಂಗಳವಾರ ದೆಹಲಿಯ ಲೇಡಿ ಹಾರ್ಡಿಂಜ್ ಆಸ್ಪತ್ರೆಯಲ್ಲಿ (Lady Hardinge Hospital) ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ( CJP protesters) ಭೇಟಿ ಮಾಡಿ ಪ್ರತಿಭಟನಾಕಾರರು ತಮ್ಮ ಧರಣಿಯನ್ನು ಅಂತ್ಯಗೊಳಿಸುವಂತೆ ಮನವಿ ಮಾಡಿದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರಿಗೆ ಸಾಧ್ಯವಾದಷ್ಟು ಬೇಗ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬೆನ್ನಲ್ಲೇ ಜೆಪಿ ನಡ್ಡಾ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಿದರು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸಂಸತ್ತಿಗೆ ಮುತ್ತಿಗೆ ಹಾಕಲು ಬಂದಿದ್ದು ಈ ವೇಳೆ ಪೊಲೀಸರು ಅಶ್ರುವಾಯು ಸುರಿಸಿ, ಲಾಠಿ ಚಾರ್ಜ್ ಮಾಡಿದ್ದರು. ಈ ಸಂದರ್ಭದಲ್ಲಿ ಗಾಯಗೊಂಡ ಪ್ರತಿಭಟನಾಕಾರರೊಂದಿಗೆ ಸಂವಹನ ನಡೆಸಲು ಮಂಗಳವಾರ ಜೆಪಿ ನಡ್ಡಾ ಅವರು ಲೇಡಿ ಹಾರ್ಡಿಂಜ್ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಈ ಬಳಿಕ ಕೇಂದ್ರ ಸರ್ಕಾರ ಪ್ರತಿಭಟನಾಕಾರರೊಂದಿಗೆ ಸಂಭಾಷಣೆಗೆ ಬಾಗಿಲುಗಳನ್ನು ಸದಾ ತೆರೆದಿಡುತ್ತಿದೆ. ಇದಕ್ಕೆ ಯಾವುದೇ ಸಮಯದ ನಿರ್ಬಂಧ ಇಲ್ಲ. ಸಂದರ್ಭಗಳ ಆಧಾರಿಸಿ ಮಾತುಕತೆ ನಡೆಸಲು ಕರೆ ನೀಡುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಮೇಲೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಕ್ಷವು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರಾರಂಭಿಸಿದ ಹೋರಾಟದಲ್ಲಿ ಭಾಗಿಯಾದ ಹವಾಮಾನ ಕಾರ್ಯುಕರ್ತ ಸೋನಮ್ ವಾಂಗ್‌ಚುಕ್ ಅವರು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ಆಗ್ರಹಿಸಿ ಕಳೆದ ಸುಮಾರು 20ಕ್ಕಿಂತಲೂ ಹೆಚ್ಚು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಅವರನ್ನು ಶನಿವಾರ ಏಕಾಏಕಿ ಪೊಲೀಸರು ಬಂದು ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಇದರ ಬಳಿಕ ಪ್ರತಿಭಟನಾ ಸ್ಥಳದಲ್ಲಿ ಹೆಚ್ಚಿನ ಜನರು ಸೇರಿದ್ದರು.
ಸೋಮವಾರ ಸಂಸತ್ತು ಚಲೋ ಅಭಿಯಾನ ನಡೆಸಿದ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ಅಶ್ರುವಾಯು ಸಿಡಿಸಿದರು. ಈ ಸಂದರ್ಭದಲ್ಲಿ ಹಲವು ಪ್ರತಿಭಟನಾಕಾರರು ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಇದರ ನಡುವೆಯೇ ಕಾಕ್ರೋಚ್ ಜನತಾ ಪಕ್ಷದ ನಿಯೋಗವು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಭೇಟಿ ತನ್ನ ಬೇಡಿಕೆಗಳ ಕುರಿತು ಅವರಿಗೆ ಮನವಿಯನ್ನು ಸಲ್ಲಿಸಿತ್ತು. ಈ ಸಂದರ್ಭದಲ್ಲಿ ಅವರು ಪ್ರತಿಭಟನಾಕಾರರು ತಮ್ಮ ಧರಣಿ ಅಂತ್ಯಗೊಳಿಸುವಂತೆ ಮನವಿ ಮಾಡಿದರು.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡ 20ಕ್ಕೂ ಹೆಚ್ಚು ನೀಟ್ ಆಕಾಂಕ್ಷಿಗಳ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ಸೇರಿದಂತೆ ಮೂರು ಬೇಡಿಕೆಗಳನ್ನು ಸಚಿವರ ಮುಂದೆ ಇಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ವಿರೋಧ: ಶಂಭು ಗಡಿಯಲ್ಲಿ ಮತ್ತೆ ರೈತರ ಪ್ರತಿಭಟನೆ; ದೆಹಲಿ ಚಲೋ ತಡೆದ ಪೊಲೀಸರು
ಆಸ್ಪತ್ರೆಯಲ್ಲಿರುವ ಸೋನಮ್ ವಾಂಗ್‌ಚುಕ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿದ್ದು, ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದರು.