ನವದೆಹಲಿ, ಮೇ 8: ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ (Indigo Flight), ಕಳ್ಳ ಕಳ್ಳ ಟಿಎಂಸಿ ಕಳ್ಳ ಮತ್ತು ಜೈ ಶ್ರೀ ರಾಮ್ ಮುಂತಾದ ಘೋಷಣೆಗಳನ್ನು ಕೂಗುತ್ತಾ ಕಿಡಿಗೇಡಿಗಳು ಕಿರುಕುಳ ನೀಡಿದ್ದಾರೆ ಎಂದು ಪಶ್ಚಿಮ ಬಂಗಾಳದ (West Bengal) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೊಯಿತ್ರಾ (Mahua Moitra), ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಭಾಗವಹಿಸಲು ಅಧಿಕೃತ ಕೆಲಸದ ಮೇಲೆ ಕೋಲ್ಕತ್ತಾದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ, ಇಂಡಿಗೋ ವಿಮಾನ 6E 719 ರಲ್ಲಿ ನಾಲ್ಕರಿಂದ ಆರು ಪುರುಷರು ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
“ನಾನು 6E 719 ರಲ್ಲಿ ಸೀಟ್ 1F ನಲ್ಲಿದ್ದೆ. 4-6 ಪುರುಷರು ಗುಂಪಿನಲ್ಲಿ ಹತ್ತಿ, ನನ್ನನ್ನು ನೋಡಿ ವಿಮಾನದ ಹಿಂಭಾಗಕ್ಕೆ ಹೋದರು. ವಿಮಾನ ಇಳಿಯುವಾಗ ಮತ್ತು ಬಾಗಿಲು ತೆರೆಯುವ ಮೊದಲು, ಅವರು ಕಳ್ಳ ಕಳ್ಳ ಟಿಎಂಸಿ ಕಳ್ಳ ಎಂದೆಲ್ಲಾ ಘೋಷಣೆ ಕೂಗಿದರು ಮತ್ತು ಅದನ್ನು ಚಿತ್ರೀಕರಿಸಿದರು” ಎಂದು ಅವರು ಹೇಳಿದರು.
ಕಳ್ಳರು.. ಕಳ್ಳರು.., ಟಿಎಂಸಿ ಒಬ್ಬ ಕಳ್ಳ, ಚಿಕ್ಕಮ್ಮ ಒಬ್ಬ ಕಳ್ಳ, ಸೋದರಳಿಯ ಒಬ್ಬ ಕಳ್ಳ ಎಂದು ಪುರುಷರು ಕೂಗುತ್ತಿರುವುದು ಕೇಳಿಬಂತು. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಗುರಿಯಾಗಿಟ್ಟುಕೊಂಡು ಘೋಷಣೆಗಳನ್ನು ಕೂಗಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಇಲ್ಲಿದೆ ವಿಡಿಯೊ:
ಶಾಸಕಿ ದೂರ ತಳ್ಳಿದರೂ ಪದೇ ಪದೆ ತಬ್ಬಿಕೊಳ್ಳಲು ಮುಂದಾದ ಕಾಂಗ್ರೆಸ್ ನಾಯಕ; ವಿಡಿಯೊ ಇಲ್ಲಿದೆ
ಕೃಷ್ಣನಗರ ಸಂಸದೆಯಾಗಿರುವ ಮೋಯಿತ್ರಾ ಈ ಘಟನೆಯನ್ನು ಕಿರುಕುಳ ಎಂದು ಹೇಳಿದ್ದು, ವಿಮಾನದೊಳಗಿನ ತನ್ನ ಸುರಕ್ಷತೆಗೆ ಧಕ್ಕೆ ತಂದಿದೆ ಎಂದು ಹೇಳಿದರು. ಇದು ದ್ವೇಷವಲ್ಲ, ಇದು ಕಿರುಕುಳ. ವಿಮಾನದಲ್ಲಿ ನನ್ನ ಸುರಕ್ಷತೆಯ ಉಲ್ಲಂಘನೆಯಾಗಿದೆ. ಇಂತಹ ಪುಂಡರು ವಿಮಾನದೊಳಗೆ ಈ ರೀತಿಯ ಕಿರುಕುಳ ನೀಡಿ ಸುಮ್ಮನೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.
ವಿಮಾನ ಸಿಬ್ಬಂದಿಯು ವರದಿಯನ್ನು ಪರಿಶೀಲಿಸುವಂತೆ, ಘಟನೆಯಲ್ಲಿ ಭಾಗಿಯಾದವರನ್ನು ಗುರುತಿಸುವಂತೆ ಮತ್ತು ಅವರನ್ನು ವಿಮಾನ ಪ್ರಯಾಣ ನಿರ್ಬಂಧಿತ ಪಟ್ಟಿಗೆ ಸೇರಿಸುವಂತೆ ಮೋಯಿತ್ರಾ, ಇಂಡಿಗೋ ಸಂಸ್ಥೆಯನ್ನು ಒತ್ತಾಯಿಸಿದರು. ಅಲ್ಲದೆ, ಈ ಘಟನೆಯ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು ಅವರನ್ನೂ ಟ್ಯಾಗ್ ಮಾಡಿದ್ದಾರೆ.
ಈ ಸಂಬಂಧ ಮೊಯಿತ್ರಾ ದೂರು ಸಲ್ಲಿಸಿದರೆ ಇಂಡಿಗೊ ತನಿಖೆ ನಡೆಸಲಿದೆ ಎಂದು ಸಂಸ್ಥೆ ತಿಳಿಸಿದೆ ಎನ್ನಲಾಗಿದೆ. ವಿಮಾನದಲ್ಲಿ ಘೋಷಣೆ ಕೂಗಿದಾಗ ವಿಮಾನಯಾನ ಸಿಬ್ಬಂದಿ ಮಧ್ಯಪ್ರವೇಶಿಸಿದರು. ಇಂಡಿಗೋ ಸಿಬ್ಬಂದಿಯ ಕ್ರಮದ ನಂತರ, ಪುರುಷರ ಗುಂಪು ಘೋಷಣೆ ಕೂಗುವುದನ್ನು ನಿಲ್ಲಿಸಿತು ಎಂದು ಮೂಲಗಳು ತಿಳಿಸಿವೆ.