ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಜೀನಾಮೆಗೆ ನಿರಾಕರಿಸಿದ ಮಮತಾ ಬ್ಯಾನರ್ಜಿಗೆ ರಾಜ್ಯಪಾಲರಿಂದ ಚೆಕ್‌ಮೆಟ್‌; ಪಶ್ಚಿಮ ಬಂಗಾಳದ ವಿಧಾನಸಭೆ ವಿಸರ್ಜನೆ

Mamata Banerjee: ಸೋತರೂ ರಾಜೀನಾಮೆ ನೀಡಲ್ಲ ಎಂದು ಹೈಡ್ರಾಮ ನಡೆಸುತ್ತಿದ್ದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆಘಾತ ಎದುರಾಗಿದೆ. ರಾಜ್ಯಪಾಲ ಆರ್‌.ಎನ್‌. ರವಿ ಪಶ್ಚಿಮ ಬಂಗಾಳ ವಿಧಾನಸಭೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ. ಆ ಮೂಲಕ ಟಿಎಂಸಿಯ 15 ವರ್ಷಗಳ ಆಡಳಿತ ಅಧಿಕೃತವಾಗಿ ಅಂತ್ಯಗೊಂಡಿದೆ.

ಪಶ್ಚಿಮ ಬಂಗಾಳ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲ ಆರ್‌.ಎನ್‌. ರವಿ

ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole May 7, 2026 9:11 PM

ಕೋಲ್ಕತ್ತಾ, ಮೇ 7: ಪಶ್ಚಿಮ ಬಂಗಾಳದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು, ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರೂ ರಾಜೀನಾಮೆ ನೀಡಲು ನಿರಾಕರಿಸಿ ಸವಾಲು ಹಾಕಿದ್ದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ರಾಜ್ಯಪಾಲ ಆರ್‌.ಎನ್‌. ರವಿ (RN Ravi) ಭರ್ಜರಿ ಶಾಕ್‌ ಕೊಟ್ಟಿದ್ದಾರೆ. ಗುರುವಾರ (ಮೇ 7) ಪಶ್ಚಿಮ ಬಂಗಾಳದ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ಇದರಿಂದ ಇನ್ನುಮುಂದೆ ಮಮತಾ ಬ್ಯಾನರ್ಜಿ ಮಾಜಿ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ. ಬಹುಮತ ಪಡೆದ ಬಿಜೆಪಿ (BJP) ಸದ್ಯದಲ್ಲೇ ಸರ್ಕಾರ ರಚಿಸಲಿದೆ.

ಏಪ್ರಿಲ್‌ 23 ಮತ್ತು 29ರಂದು 2 ಹಂತಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಟಿಎಂಸಿಯನ್ನು ಸೋಲಿಸುವ ಮೂಲಕ ಮಹತ್ವದ ಜನಾದೇಶ ನೀಡಿದ್ದಾರೆ. ಚುನಾವಣೆ ನಡೆದ 293 ಸ್ಥಾನಗಳ ಪೈಕಿ ಬಿಜೆಪಿ 207 ಕಡೆ ಜಯಗಳಿಸಿದೆ. ಟಿಎಂಸಿ 80 ಸ್ಥಾನ ಗಳಿಸಲಷ್ಟೇ ಶಕ್ತವಾಗಿದೆ. ಕಾನೂನು ಪ್ರಕಾರ, ಸೋತಿರುವ ಮಮತಾ ಬ್ಯಾನರ್ಜಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ನೀಡಬೇಕು. ಆದರೆ ಮಮತಾ ಬ್ಯಾನರ್ಜಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಲು ನೀಡಲು ನಿರಾಕರಿಸಿ ಮೊಂಡಾಟ ಮೆರೆದಿದ್ದರು. ಇದೀಗ ವಿಧಾನಸಭೆ ವಿಸರ್ಜಿಸುವ ಮೂಲಕ ರಾಜ್ಯಪಾಲ ಆರ್‌.ಎನ್‌. ರವಿ ಅವರಿಗೆ ಶಾಕ್‌ ನೀಡಿದ್ದು, ಬಿಜೆಪಿಗೆ ಸರ್ಕಾರ ರಚಿಸಲು ಅನುವು ಮಾಡಿ ಕೊಟ್ಟಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ವಿಸರ್ಜಿಸಿರುವ ಆದೇಶ:



ಭಾರತದ ಸಂವಿಧಾನದ 174ನೇ ವಿಧಿಯ ಷರತ್ತು (2)ರ ಉಪ-ಷರತ್ತು (ಬಿ) ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಬಳಸಿಕೊಂಡು ರಾಜ್ಯಪಾಲರು ಪಶ್ಚಿಮ ಬಂಗಾಳ ವಿಧಾನಸಭೆಯನ್ನು ವಿಸರ್ಜಿಸಲು ಆದೇಶ ಹೊರಡಿಸಿದ್ದಾರೆ.

ಮಮತಾ ಬ್ಯಾನರ್ಜಿ, ಸ್ಟಾಲಿನ್‌...; 2026ರ ವಿಧಾನಸಭಾ ಚುನಾವಣೆಯಲ್ಲಿ ಸೋತ ರಾಜಕೀಯ ಧುರೀಣರು

ಸಂವಿಧಾನದ 172ನೇ ವಿಧಿಯ ಅಡಿಯಲ್ಲಿ, 5 ವರ್ಷಗಳ ಅವಧಿ ಮುಗಿದ ನಂತರ ವಿಧಾನಸಭೆಯನ್ನು ವಿಸರ್ಜಿಸಲಾಗುತ್ತದೆ ಮತ್ತು ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವವರೆಗೆ ನಿರ್ಗಮಿತ ಸಚಿವರ ಮಂಡಳಿಗೆ ಉಸ್ತುವಾರಿಯ ಜವಾಬ್ದಾರಿ ನೀಡಲಾಗುತ್ತದೆ.

ಮಮತಾ ಬ್ಯಾನರ್ಜಿ ಹೇಳಿದ್ದೇನು?

ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಹತಾಶರಾದ ಮಮತಾ ಬ್ಯಾನರ್ಜಿ ಸೋಲಿಗೆ ಬಿಜೆಪಿಯನ್ನು ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಬಿಜೆಪಿ 100 ಸೀಟ್‌ಗಳನ್ನು ದೋಚಿದೆ ಎಂದು ಹೇಳಿ ರಾಜೀನಾಮೆಗೆ ನಿರಾಕರಿಸಿದ್ದರು. ʼʼನಾನು ಸೋತಿಲ್ಲ. ಹೀಗಾಗಿ ರಾಜೀನಾಮೆ ನೀಡಲ್ಲʼʼ ಎಂದು ಕಾನೂನಿಗೆ ಸವಾಲೆಸೆದಿದ್ದರು. ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮಮತಾ ಅವರ ಈ ನಡೆಗೆ ಕಾನೂನು ತಜ್ಞರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ಫಲಿತಾಂಶದ ವಿರುದ್ಧ ಕೋರ್ಟ್‌ ಮೆಟ್ಟಿಲೇರುವುದಾಗಿ ಗುರುವಾರ ಟಿಎಂಸಿ ನಾಯಕರು ಘೋಷಿಸಿದ್ದರು.

ನಾನು ಸೋತಿಲ್ಲ, ರಾಜೀನಾಮೆ ನೀಡೋದಿಲ್ಲ: ಹೀನಾಯವಾಗಿ ಸೋತ ಮಮತಾ ಬ್ಯಾನರ್ಜಿಯಿಂದ ಹೊಸ ವರಸೆ

ಅಚ್ಚರಿ ಎಂದರೆ ಭವಾನಿಪುರದಲ್ಲಿ ಸ್ವತಃ ಮಮತಾ ಬ್ಯಾನರ್ಜಿ ಸೋಲುಂಡಿದ್ದಾರೆ. ಬಿಜೆಪಿಯ ಸುವೇಂದು ಅಧಿಕಾರಿ ಮಮತಾ ಅವರನ್ನು ಸೋಲಿಸಿದ್ದಾರೆ. 15 ವರ್ಷಗಳ ಟಿಎಂಸಿ ಆಡಳಿತಕ್ಕೆ ತೆರೆ ಬಿದ್ದಿದೆ. ಸದ್ಯ ಸೋಲಿನಿಂದ ಹತಾಶರಾಗಿರುವ ಟಿಎಂಸಿ ಕಾರ್ಯಕರ್ತರು ರಾಜ್ಯಾದ್ಯಂತ ಹಿಂಸಾಚಾರ ನಡೆಸುತ್ತಿದ್ದಾರೆ. ಇನ್ನು ಬಿಜೆಪಿ ಸರ್ಕಾರ ಮೇ 8ರಂದು ಮುಖ್ಯಮಂತ್ರಿಯನ್ನು ಘೋಷಿಸಲಿದ್ದು, ಮೇ 9ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ಆಯೋಜಿಸುವ ಸಾಧ್ಯತೆ ಇದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.