ನವದೆಹಲಿ: ಮಾದಕ ವಸ್ತು (drugs) ಉತ್ಪಾದನೆ ಮತ್ತು ಮಾರಾಟ ಮಾಡುವವರ ವಿರುದ್ಧ ಕೇಂದ್ರ ಸರ್ಕಾರವು ಶೂನ್ಯ ಸಹಿಷ್ಣುತೆಯನ್ನು (zero tolerance) ಘೋಷಿಸಿದೆ. ಈ ನಿಟ್ಟಿನಲ್ಲಿ ಮಾದಕ ವಸ್ತುಗಳ ಬಳಕೆ, ಕಳ್ಳ ಸಾಗಣೆ, ದುರುಪಯೋಗದ ವಿರುದ್ಧ ದೇಶಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ ಮುಂದಿನ ಮೂರು ವರ್ಷಗಳ ಕಾಲ ರಾಷ್ಟ್ರವ್ಯಾಪಿ ಅಭಿಯಾನ ನಡೆಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಘೋಷಿಸಿದ್ದಾರೆ. ಈ ಅಭಿಯಾನವು ಮಾರ್ಚ್ 31ರಂದು ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಮಾದಕ ವಸ್ತುಗಳ ಸಮನ್ವಯ ಕೇಂದ್ರದ (NCORD) 9ನೇ ಉನ್ನತ ಮಟ್ಟದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮಿತ್ ಶಾ, ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳಸಾಗಣೆ ವಿರುದ್ಧ ಮೂರು ವರ್ಷಗಳ ರಾಷ್ಟ್ರವ್ಯಾಪಿ ಅಭಿಯಾನವನ್ನು ಘೋಷಿಸಿದರು.
ಭಾರತದ ಆಪರೇಷನ್ ಸಿಂದೂರ್‌ಗೆ ಹೆದರಿ ಸಂವಿಧಾನಾತ್ಮಕ ಬದಲಾವಣೆಗೆ ಮುಂದಾದ ಪಾಕಿಸ್ತಾನ
ಮಾದಕ ವಸ್ತು ಬಳಕೆ ಸಂಬಂಧಿತ ಸಮಸ್ಯೆಯು ಭಯೋತ್ಪಾದನೆಯೊಂದಿಗೆ ಹೆಚ್ಚಿನ ಸಂಬಂಧ ಹೊಂದಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ ಮುಂದಿನ ಮೂರು ವರ್ಷಗಳ ಕಾಲ ರಾಷ್ಟ್ರವ್ಯಾಪಿ ಅಭಿಯಾನ ಮಾರ್ಚ್ 31ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಮಾದಕ ವಸ್ತುಗಳು ದೇಶದ ಭವಿಷ್ಯದ ಪೀಳಿಗೆಯನ್ನು ನಾಶಮಾಡಲು ಮಾಡಿರುವ ಸಂಚಾಗಿದೆ. ಯುವಕರ ಆರೋಗ್ಯ, ಅವರ ಸಾಮರ್ಥ್ಯ ಮತ್ತು ಬೆಳೆಯುತ್ತಿರುವ ಸಮಾಜದ ಮೇಲೆ ನೇರವಾಗಿ ಬೆದರಿಕೆ ಹಾಕುತ್ತದೆ. ಈ ನಿಟ್ಟಿನಲ್ಲಿ ಮಾದಕ ದ್ರವ್ಯ ಸಮಸ್ಯೆಯನ್ನು ಸಮಗ್ರವಾಗಿ ಪರಿಹರಿಸಲು 2029ರವರೆಗೆ ವಿವರವಾದ ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಸರ್ಕಾರದ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿರುವುದಾಗಿ ಅವರು ತಿಳಿಸಿದರು.
ಅಭಿಯಾನದ ಯಶಸ್ಸನ್ನು ಸಭೆಗಳ ಸಂಖ್ಯೆಯಿಂದ ಅಳೆಯಬಾರದು. ಬದಲಾಗಿ ಫಲಿತಾಂಶ ಮತ್ತು ಬೀರಿರುವ ಪರಿಣಾಮದಿಂದ ಅಳೆಯಬೇಕು ಎಂದ ಅವರು, ಮಾದಕ ದ್ರವ್ಯ ವ್ಯಾಪಾರದ ಕಿಂಗ್‌ಪಿನ್‌ಗಳು, ಹಣಕಾಸುದಾರರು ಮತ್ತು ಯೋಜನಾ ಮಾರ್ಗಗಳನ್ನು ನಿರ್ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಮಾದಕ ದ್ರವ್ಯ ಪೂರೈಕೆ ಸರಪಳಿಯನ್ನು ಮುರಿಯಲು ನಿರ್ದಯ ಕಾರ್ಯವಿಧಾನವನ್ನು ಅನುಸರಿಸುವಂತೆ ಹೇಳಿದ ಅವರು, ಯುವಜನರನ್ನು ಮಾದಕ ದ್ರವ್ಯ ದುರುಪಯೋಗದಿಂದ ರಕ್ಷಿಸಲು ನಿರಂತರ ಜಾಗೃತಿ ಅಭಿಯಾನಗಳು ಅತ್ಯಗತ್ಯ ಎಂದು ತಿಳಿಸಿದರು.
ಮಾದಕ ದ್ರವ್ಯ ವಿತರಣೆ ಮತ್ತು ಪಾವತಿಗೆ ಹೊಸಹೊಸ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಹೀಗಾಗಿ ಜಾರಿ ಸಂಸ್ಥೆಗಳು ತಮ್ಮ ಕಾರ್ಯತಂತ್ರಗಳನ್ನು ಕೂಡ ನಿರಂತರವಾಗಿ ನವೀಕರಿಸಬೇಕು. ಪ್ರತಿಯೊಂದು ರಾಜ್ಯ ಪೊಲೀಸ್ ಪಡೆ, ಗುಪ್ತಚರ ಮಾಹಿತಿ ಮತ್ತು ಕೃತಕ ಬುದ್ಧಿಮತ್ತೆ ಸಾಧನಗಳ ಮೂಲಕ ಅಧಿಕಾರಿಗಳ ಶಾಶ್ವತ, ಮಿಷನ್-ಮೋಡ್ ತಂಡವನ್ನು ರಚಿಸಬೇಕಾಗುತ್ತದೆ. ಮಾದಕ ದ್ರವ್ಯದ ವಿರುದ್ಧ ಕಾರ್ಯಾಚರಣೆಗೆ ಶಾಶ್ವತ ವ್ಯವಸ್ಥೆ ಬೇಕಾಗುತ್ತದೆ ಎಂದರು.
ಮಾದಕ ವಸ್ತುಗಳ ಸಮನ್ವಯ ಕೇಂದ್ರದ ಉನ್ನತ ಮಟ್ಟದ ಸಭೆಯಬಳಿಕ ಅಮಿತ್ ಶಾ ಅವರು ಅಮೃತಸರದಲ್ಲಿ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಕಚೇರಿಯನ್ನು ಉದ್ಘಾಟಿಸಿದರು.