Tiger Shroff Firing: ಶೂಟರ್ಸ್ ಪತ್ತೆಗೆ ಮಹತ್ವದ ಸುಳಿವು ನೀಡಿದ ಕ್ಯಾಬ್ ಚಾಲಕನ ಆ ಒಂದು ಫೋನ್ ಕರೆ
Tiger Shroff: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಕ್ಯಾಬ್ ಚಾಲಕನ ಫೋನ್ ಕರೆ ಪೊಲೀಸರಿಗೆ ಆರೋಪಿಗಳ ಬಗ್ಗೆ ಮಹತ್ವದ ಸುಳಿವು ನೀಡಿದೆ. ದಾಳಿಯ ಬಳಿಕ ಸೂರತ್ ಮೂಲಕ ರಾಜಸ್ಥಾನಕ್ಕೆ ಪರಾರಿಯಾಗುತ್ತಿದ್ದರೆನ್ನಲಾದ ಮೂವರು ಶಂಕಿತರನ್ನು ಜಂಟಿ ಕಾರ್ಯಾಚರಣೆಯಲ್ಲಿ ಕೋಟಾ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಪರ್ಕವಿದೆಯೇ ಮತ್ತು ದಾಳಿಯ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದಾಳಿ ನಡೆಸಿದ ಆರೋಪಿಗಳು ಮತ್ತು ಟೈಗರ್ ಶ್ರಾಫ್ -
ಮುಂಬೈ, ಅ. 20: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಅವರ ಹತ್ಯೆಗೆ ಯತ್ನ ನಡೆಸಿದ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಆಗಿದ್ದು, ಕ್ಯಾಬ್ ಚಾಲಕನೊಬ್ಬ ಮಾಡಿದ ಒಂದು ಫೋನ್ ಕರೆ ಆರೋಪಿಗಳ ಪತ್ತೆ ಹಚ್ಚಲು ನೆರವಾಗಿದೆ. ದಾಳಿ ನಡೆಸಿದ ಬಳಿಕ ಮುಂಬೈಯಿಂದ ಪರಾರಿಯಾದ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲು ಪೊಲೀಸರಿಗೆ ಆ ಒಂದು ಕರೆ ಸಹಾಯ ಮಾಡಿದೆ. ಅದು ಹೇಗೆ ಎನ್ನುವ ವಿವರ ಇಲ್ಲಿದೆ.
ಮೂಲಗಳ ಪ್ರಕಾರ, ದಾಳಿಯ ಬಳಿಕ ಆರೋಪಿಗಳು ಸೂರತ್ಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದರು. ತನಿಖೆಯ ಸಂದರ್ಭದಲ್ಲಿ ಕ್ಯಾಬ್ ಚಾಲಕನು ಬುಕ್ಕಿಂಗ್ಗೆ ಬಳಸಲಾಗಿದ್ದ ಫೋನ್ ಸಂಖ್ಯೆಗೆ ಕರೆ ಮಾಡಿದ್ದ. ಈ ಮಾಹಿತಿಯ ಆಧಾರದಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿ, ತಾಂತ್ರಿಕ ನಿಗಾ ಹಾಗೂ ವಿಶ್ಲೇಷಣೆಯ ಮೂಲಕ ಕ್ಯಾಬ್ ಚಾಲಕನನ್ನು ಪತ್ತೆಹಚ್ಚಿದ್ದಾರೆ.
ವಿಚಾರಣೆ ವೇಳೆ ಚಾಲಕನು ಮೂವರು ಶಂಕಿತರನ್ನು ಸೂರತ್ ರೈಲು ನಿಲ್ದಾಣದಲ್ಲಿ ಇಳಿಸಿದ್ದಾಗಿ ತಿಳಿಸಿದ್ದಾನೆ. ಬಳಿಕ ಪೊಲೀಸರು ರೈಲುಗಳ ವೇಳಾಪಟ್ಟಿ, ಮೀಸಲಾತಿ ಪಟ್ಟಿಗಳು ಹಾಗೂ ತಾಂತ್ರಿಕ ಮಾಹಿತಿಗಳನ್ನು ಪರಿಶೀಲಿಸಿದಾಗ, ಆರೋಪಿಗಳು ಪುಣೆ–ಜೈಪುರ ಎಕ್ಸ್ಪ್ರೆಸ್ ರೈಲಿನಲ್ಲಿ ರಾಜಸ್ಥಾನದತ್ತ ಪ್ರಯಾಣಿಸುತ್ತಿರುವುದು ತಿಳಿದುಬಂದಿದೆ.
ತಕ್ಷಣವೇ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳು ರಾಜಸ್ಥಾನ ಪೊಲೀಸರನ್ನು ಸಂಪರ್ಕಿಸಿದ್ದು, ಜಂಟಿ ಕಾರ್ಯಾಚರಣೆ ನಡೆಸಿದ್ದು, ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ರಾಜಸ್ಥಾನದ ಆ್ಯಂಟಿ ಗ್ಯಾಂಗ್ಸ್ಟರ್ ಟಾಸ್ಕ್ ಫೋರ್ಸ್ (AGTF) ಮತ್ತು ಕೋಟಾ ನಗರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಂಪರ್ಕದ ಬಗ್ಗೆ ತನಿಖೆ
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ. ದಾಳಿಯಲ್ಲಿ ಬಳಸಲಾದ ಶಸ್ತ್ರಾಸ್ತ್ರಗಳನ್ನು ಒದಗಿಸಿದವರು ಯಾರು, ಆರೋಪಿಗಳಿಗೆ ಆಶ್ರಯ ಹಾಗೂ ಆರ್ಥಿಕ ನೆರವು ನೀಡಿದವರು ಯಾರು ಮತ್ತು ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಪರ್ಕವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಭಾನುವಾರ ಸಂಜೆ ಮುಂಬೈಯ ಜುಹು ಪ್ರದೇಶದಲ್ಲಿರುವ ಫುಟ್ಬಾಲ್ ಕ್ಲಬ್ನಿಂದ ಟೈಗರ್ ಶ್ರಾಫ್ ಕಾರಿನಲ್ಲಿ ಹೊರಡುತ್ತಿದ್ದಾಗ ಈ ದಾಳಿ ನಡೆದಿತ್ತು. ನಟನ ಕಾರಿನ ಮೇಲೆ ಸಮೀಪದಿಂದ ಗುಂಡು ಹಾರಿಸುತ್ತಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ. 36 ವರ್ಷದ ನಟ ಪ್ರಾಣಾಪಾಯದಿಂದ ಪಾರಾಗಿದ್ದರೂ, ಅವರ ಕಾರು ಚಾಲಕ ಗಾಯಗೊಂಡಿದ್ದಾನೆ.
ಟೈಗರ್ ಶ್ರಾಫ್ಗೆ ಪೊಲೀಸ್ ಭದ್ರತೆ
ದಾಳಿಯ ಬಳಿಕ ಟೈಗರ್ ಶ್ರಾಫ್ ಅವರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ದಾಳಿಗೂ ಮುನ್ನ ನಟನಿಗೆ ಯಾವುದೇ ಭದ್ರತಾ ವ್ಯವಸ್ಥೆ ಇರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭದ್ರತೆಯ ಕೊರತೆಯಿಂದಾಗಿ ಅವರು ಸುಲಭ ಗುರಿಯಾಗಿರಬಹುದು ಎಂಬ ಶಂಕೆಯನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಗ್ಯಾಂಗ್ನ ಹಿಂದಿನ ಅಪರಾಧ ಚಟುವಟಿಕೆಗಳನ್ನು ಗಮನಿಸಿದರೆ, ಜನರಲ್ಲಿ ಭಯ ಹುಟ್ಟಿಸುವುದು ಮತ್ತು ಹಣ ವಸೂಲಿ ಮಾಡುವುದು ದಾಳಿಯ ಸಂಭವನೀಯ ಉದ್ದೇಶಗಳಾಗಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ದಾಳಿಯ ನಿಖರ ಉದ್ದೇಶ ಇನ್ನೂ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮುಂಬೈ ಪೊಲೀಸರ ಭದ್ರತಾ ವಿಭಾಗವು ನಟನಿಗೆ ಅಂಗರಕ್ಷಕರನ್ನು ನಿಯೋಜಿಸಿದೆ. ಜತೆಗೆ ಸ್ಥಳೀಯ ಪೊಲೀಸ್ ಠಾಣೆಯಿಂದ ಓರ್ವ ಪೊಲೀಸ್ ಅಧಿಕಾರಿ ಹಾಗೂ ಹಲವು ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ನಟನಿಗೆ ಯಾವ ವರ್ಗದ ಭದ್ರತೆ ನೀಡಲಾಗಿದೆ ಎಂಬುದನ್ನು ಅಧಿಕಾರಿಗಳು ಇನ್ನೂ ಸ್ಪಷ್ಟಪಡಿಸಿಲ್ಲ.