ಶ್ರೀನಗರ, ಫೆ. 17: ಕಳೆದ ವರ್ಷ ಪಹಲ್ಗಾಮ್ ಭಯೋತ್ಪಾದಕಾ ದಾಳಿಯ (Pahalgam attack) ನಂತರ ಮುಚ್ಚಲ್ಪಟ್ಟಿದ್ದ ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ (Jammu-Kashmir) ಪ್ರವಾಸಿ ತಾಣಗಳನ್ನು ಮತ್ತೆ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ತೆರೆಯಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೇಂದ್ರಾಡಳಿತ ಪ್ರದೇಶದಾದ್ಯಂತ 14 ಪ್ರಮುಖ ಪ್ರವಾಸಿ ತಾಣಗಳನ್ನು ತಕ್ಷಣವೇ ಪುನಃ ತೆರೆಯುವಂತೆ ನಿರ್ದೇಶಿಸಿದರು. 2025ರ ಏಪ್ರಿಲ್‌ನಲ್ಲಿ ಪಹಲ್ಗಾಮ್ ದಾಳಿಯ ನಂತರ ಮುಚ್ಚಲ್ಪಟ್ಟ ತಾಣಗಳಲ್ಲಿ ಯೂಸ್ಮಾರ್ಗ್‌ನ ಆಲ್ಪೈನ್ ಹುಲ್ಲುಗಾವಲು ಕೂಡ ಸೇರಿದೆ. ಭದ್ರತಾ ಪರಿಸ್ಥಿತಿಗಳನ್ನು ಅವಲೋಕಿಸಿದ ಬಳಿಕ ಪ್ರವಾಸಿಗರಿಗೆ ಈ ತಾಣಗಳನ್ನು ಮತ್ತೆ ತೆರೆಯಲಾಗಿದೆ.
2025ರ ಏಪ್ರಿಲ್ 22ರಂದು ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ದಾಳಿಯಲ್ಲಿ ಪ್ರವಾಸಿಗರು ಸೇರಿದಂತೆ 26 ಜನರು ಮೃತಪಟ್ಟ ನಂತರ ಅಧಿಕಾರಿಗಳು, ಸುಮಾರು 50 ಪ್ರವಾಸಿ ತಾಣಗಳನ್ನು ಮುಚ್ಚಿದರು. ಮುನ್ನೆಚ್ಚರಿಕೆ ಕ್ರಮವಾಗಿ ಈ ತಾಣಗಳನ್ನು ಮುಚ್ಚಲು ಆದೇಶಿಸಲಾಯಿತು.
ಚಳಿಗೆ ಪತರುಗಟ್ಟಿದ ಜಮ್ಮು-ಕಾಶ್ಮೀರ; ಹಿಮ ಬಿರುಗಾಳಿ ಅಪ್ಪಳಿಸಿದ ಭಯಾನಕ ವಿಡಿಯೊ ವೈರಲ್
ಸಂಪೂರ್ಣ ಭದ್ರತಾ ಪರಿಶೀಲನೆ ಮತ್ತು ಚರ್ಚೆಗಳ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಕಾಶ್ಮೀರ ಮತ್ತು ಜಮ್ಮುವಿನ ಹೆಚ್ಚಿನ ಪ್ರವಾಸಿ ತಾಣಗಳನ್ನು ಮತ್ತೆ ತೆರೆಯಲು ಆದೇಶಿಸಿರುವುದಾಗಿ ಲೆಫ್ಟಿನೆಂಟ್ ಗವರ್ನರ್ ಕಚೇರಿ ಎಕ್ಸ್‌ನಲ್ಲಿ ತಿಳಿಸಿದೆ.
ಕಾಶ್ಮೀರದ ಹನ್ನೊಂದು ತಾಣಗಳಾದ ಯೂಸ್ಮಾರ್ಗ್, ದೂಧ್‌ಪತ್ರಿ, ಕೊಕರ್‌ನಾಗ್‌ನ ದಂಡಿಪೋರಾ ಪಾರ್ಕ್, ಶೋಪಿಯಾನ್‌ನ ಪೀರ್ ಕಿ ಗಲಿ, ದುಬ್ಜನ್ ಮತ್ತು ಪದ್‌ಪವಾನ್, ಅಸ್ತಾನ್‌ಪೋರಾ, ತಜ್ವಾಸ್ ಗ್ಲೇಸಿಯರ್, ಗಂಡರ್‌ಬಾಲ್‌ನ ಹಂಗ್ ಪಾರ್ಕ್, ಬಾರಾಮುಲ್ಲಾದ ವುಲ್ಲಾರ್, ವಾಟ್ಲಾಬ್ ಮತ್ತು ಶ್ರೀನಗರದ ಟುಲಿಪ್ ಉದ್ಯಾನ - ಈಗ ಪ್ರವಾಸಿಗರಿಗೆ ಮುಕ್ತವಾಗಿವೆ ಎಂದು ಮನೋಜ್ ಸಿನ್ಹಾ ದೃಢಪಡಿಸಿದರು.
ಜಮ್ಮುವಿನ ಮೂರು ಸ್ಥಳಗಳಾದ ರಿಯಾಸಿಯ ದೇವಿ ಪಿಂಡಿ, ರಾಂಬನ್‌ನ ಮಹು ಮಂಗತ್ ಮತ್ತು ಕಿಶ್ತ್ವಾರ್‌ನ ಮೊಘಲ್ ಮೈದಾನ್ ಕೂಡ ಪ್ರವಾಸಿಗರನ್ನು ಮತ್ತೆ ಆಕರ್ಷಿಸಲಿವೆ ಎಂದು ಅವರು ಹೇಳಿದರು. ಹಿಮಪಾತದಿಂದಾಗಿ ಕೆಲವು ತಾಣಗಳು ಮುಚ್ಚಲ್ಪಟ್ಟಿದ್ದವು. ಪರಿಸ್ಥಿತಿ ಅನುಕೂಲಕರವಾಗಿರುವುದರಿಂದ ಮತ್ತೆ ಪ್ರವಾಸಿಗರು ಪ್ರವೇಶಿಸಬಹುದು. ಕಾಶ್ಮೀರದ ಮೂರು ತಾಣಗಳಾದ ಗುರೆಜ್, ಅಥ್ವಾಟೂ ಮತ್ತು ಬಂಗುಸ್ ಹಾಗೂ ಜಮ್ಮುವಿನ ಒಂದು ತಾಣವಾದ ರಾಂಬನ್‌ನ ರಾಮಕುಂಡ್ ಪ್ರದೇಶವು ಹಿಮವನ್ನು ತೆರವುಗೊಳಿಸಿದ ನಂತರ ಮತ್ತೆ ತೆರೆಯಲಾಗುವುದು ಎಂದು ಸಿನ್ಹಾ ಹೇಳಿದರು.
ಬಗೆದಷ್ಟು ಬಯಲಾಗುತ್ತಿದೆ ಪಹಲ್ಗಾಮ್ ಉಗ್ರರ ಸತ್ಯ; ತನಿಖಾಧಿಕಾರಿಗಳು ಬಿಚ್ಚಿಟ್ಟ ಆ ಸತ್ಯವೇನು?
ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 42 ಪ್ರವಾಸಿ ತಾಣಗಳು ಸಾರ್ವಜನಿಕ ಚಟುವಟಿಕೆಗಾಗಿ ಮತ್ತೆ ತೆರೆಯಲ್ಪಟ್ಟಿವೆ. ಈ ಕ್ರಮಗಳು ಹಂತಹಂತವಾಗಿ ಪುನರಾರಂಭಗೊಳ್ಳುವ ಸೂಚನೆಯಾಗಿದ್ದು, 2023ರ ಸೆಪ್ಟೆಂಬರ್‌ನಲ್ಲಿ 12 ತಾಣಗಳು ಮತ್ತು ಅದೇ ವರ್ಷದ ಜೂನ್‌ನಲ್ಲಿ 16 ತಾಣಗಳನ್ನು ಪ್ರವಾಸೋದ್ಯಮಕ್ಕೆ ಅನುಮತಿ ನೀಡಲಾಯಿತು.
ಪಹಲ್ಗಾಮ್ ದಾಳಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಯಿತು. ಆದರೆ ಸುಧಾರಿತ ಭದ್ರತೆ, ಹೊಸ ಸಾರಿಗೆ ಸಂಪರ್ಕಗಳು ಮತ್ತು ಯಶಸ್ವಿ ಅಮರನಾಥ ಯಾತ್ರೆಯಿಂದಾಗಿ ಪ್ರವಾಸಿಗರು ಮತ್ತೆ ಇಲ್ಲಿಗೆ ಮರಳುವ ಸಾಧ್ಯತೆಯಿದೆ. ಕಳೆದ ಮೂರು ವರ್ಷಗಳಲ್ಲಿ ಕಾಶ್ಮೀರದಲ್ಲಿ ಪ್ರವಾಸಿಗರ ಆಗಮನವು ಹೊಸ ದಾಖಲೆಗಳನ್ನು ನಿರ್ಮಿಸಿದೆ.