ಚಳಿಗೆ ಪತರುಗಟ್ಟಿದ ಜಮ್ಮು-ಕಾಶ್ಮೀರ; ಹಿಮ ಬಿರುಗಾಳಿ ಅಪ್ಪಳಿಸಿದ ಭಯಾನಕ ವಿಡಿಯೊ ವೈರಲ್
Massive avalanche in Sonamarg: ಜಮ್ಮು–ಕಾಶ್ಮೀರದ ಸೋನಾಮಾರ್ಗ್ ಪ್ರದೇಶದಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು, ಸಂಪೂರ್ಣ ಪ್ರದೇಶಕ್ಕೆ ಹಿಮದ ಹೊದಿಕೆ ಮುಚ್ಚಿಕೊಂಡಿದೆ. ತೀವ್ರ ಹಿಮಪಾತದ ಪರಿಣಾಮ ಮನೆಗಳು ಹಿಮದಲ್ಲಿ ಮುಳುಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭೀಕರ ಹಿಮಪಾತದ ದೃಶ್ಯಗಳನ್ನು ಒಳಗೊಂಡ ಭಯಾನಕ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಜಮ್ಮು-ಕಾಶ್ಮೀರದ ಸೋನಾಮಾರ್ಗ್‌ನಲ್ಲಿ ಭಾರಿ ಹಿಮಪಾತ -
ಶ್ರೀನಗರ, ಜ. 28: ಜಮ್ಮು ಮತ್ತು ಕಾಶ್ಮೀರದ (Jammu-Kashmir) ಗಂಡೇರ್‌ಬಲ್ ಜಿಲ್ಲೆಯ ಸೋನಾಮಾರ್ಗ್‌ನ ಸರ್ಬಲ್ ಪ್ರದೇಶದಲ್ಲಿ ಮಂಗಳವಾರ (ಜನವರಿ 27) ರಾತ್ರಿ ಭಾರಿ ಹಿಮಪಾತ (Massive avalanche) ಸಂಭವಿಸಿದ್ದು, ಮನೆಗಳು ಮತ್ತು ವಾಹನಗಳು ಹಿಮದಲ್ಲಿ ಮುಳುಗಿ ಹೋಗಿವೆ. ಘಟನೆಯ ಪ್ರಮಾಣ ಮತ್ತು ಪರಿಣಾಮದ ಹೊರತಾಗಿಯೂ, ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ಅಥವಾ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಮಂಗಳವಾರ ರಾತ್ರಿ 10:12ಕ್ಕೆ ಜನಪ್ರಿಯ ಸೋನಾಮಾರ್ಗ್ ಪ್ರವಾಸಿ ಪ್ರದೇಶಕ್ಕೆ ಹಿಮ ಬಿರುಗಾಳಿ ಅಪ್ಪಳಿಸಿದೆ. ಇದರಿಂದಾಗಿ ಪರ್ವತದ ಕೆಳಗಿದ್ದ ಮನೆಗಳು ಮತ್ತು ಹೋಟೆಲ್‌ಗಳ ಕಡೆಗೆ ದೊಡ್ಡ ಪ್ರಮಾಣದ ಹಿಮ ನುಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಮ ಬಿರುಗಾಳಿ ಮುಂದಕ್ಕೆ ಚಲಿಸಿ ತನ್ನ ಹಾದಿಯಲ್ಲಿದ್ದ ಕಟ್ಟಡಗಳನ್ನು ಆವರಿಸಿದ ಕ್ಷಣ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.
ಕಣಿವೆಯಾದ್ಯಂತ ನಿರಂತರ ಹಿಮಪಾತದ ನಂತರ ಸೋಮವಾರ (ಜನವರಿ 26) ಈ ಪ್ರದೇಶಕ್ಕೆ ಹೆಚ್ಚಿನ ತೀವ್ರತೆಯ ಹಿಮಪಾತದ ಎಚ್ಚರಿಕೆ ನೀಡಲಾಗಿತ್ತು. ಮಂಗಳವಾರ ಕಾಶ್ಮೀರದಾದ್ಯಂತ ಹಿಮಪಾತ ಉಂಟಾಗಿದ್ದರಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಮುಚ್ಚಲ್ಪಟ್ಟಿದ್ದು, ಶ್ರೀನಗರ ವಿಮಾನ ನಿಲ್ದಾಣದಲ್ಲಿ ಎಲ್ಲ ವಿಮಾನಗಳ ಹಾರಾಟ ರದ್ದಾಯಿತು. ಇದರಿಂದಾಗಿ ನೂರಾರು ಪ್ರವಾಸಿಗರು ಕಣಿವೆಯಲ್ಲಿ ಸಿಲುಕಿಕೊಂಡರು.
ಇಲ್ಲಿದೆ ಸಿಸಿಟಿವಿ ವಿಡಿಯೊ:
#BREAKING: Dramatic visuals of an avalanche caught on CCTV in Sonmarg of Central Kashmir tonight in India. No loss of life or major damage reported. More details are awaited. pic.twitter.com/FZkJRpFTcg
— Aditya Raj Kaul (@AdityaRajKaul) January 27, 2026
ಸೋಮವಾರ ತಡರಾತ್ರಿ ಹಿಮಪಾತ ಆರಂಭವಾಗಿ ಇಡೀ ಪ್ರದೇಶವನ್ನು ಆವರಿಸಿತ್ತು. ಖಾಜಿಗುಂಡ್ ಮತ್ತು ಬನಿಹಾಲ್‌ನಲ್ಲಿರುವ ನವಯುಗ್ ಸುರಂಗದ ಬಳಿ ಹಿಮ ರಾಶಿ ಬಿದ್ದಿದ್ದರಿಂದ ರಾಷ್ಟ್ರೀಯ ಹೆದ್ದಾರಿ 44 ಅನ್ನು ಸ್ಥಗಿತಗೊಳಿಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, 29 ಆಗಮನ ಮತ್ತು 29 ನಿರ್ಗಮನಗಳು ಸೇರಿದಂತೆ ಎಲ್ಲ 58 ನಿಗದಿತ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಹಿಮಪಾತವು ದಿನವಿಡೀ ಮುಂದುವರಿದ ಕಾರಣ ರನ್‌ವೇಯನ್ನು ಸುರಕ್ಷಿತವಾಗಿ ಬಳಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ವಿವರಿಸಿದರು.
8 ಕಿ.ಮೀ ಟ್ರಾಫಿಕ್ ಜಾಮ್, ಹೋಟೆಲ್‌ಗಳು ಶೇ. 100 ರಷ್ಟೂ ಭರ್ತಿ; ಮನಾಲಿ ರಸ್ತೆಯಲ್ಲಿ ಸಿಲುಕಿಕೊಂಡ ಪ್ರವಾಸಿಗರ ಪರದಾಟ
ಅಮೆರಿಕದಲ್ಲಿ ಭಾರಿ ಹಿಮಪಾತ
ಅಮೆರಿಕದಲ್ಲಿ ಹಿಂದೆಂದೂ ಕಂಡು ಕೇಳರಿಯಂತಹ ಹಿಮಪಾತ ಆಗುತ್ತಿದ್ದು, ಕಡು ಚಳಿಯ ಅಬ್ಬರ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ತಾಪಮಾನದಲ್ಲಿ ತೀವ್ರ ಕುಸಿತವಾಗಿರುವುದರಿಂದ ಲಕ್ಷಾಂತರ ಮಂದಿ ವಿದ್ಯುತ್ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಿಮ ಬಿರುಗಾಳಿ ಮತ್ತು ತೀವ್ರ ಶೀತದ ಪರಿಣಾಮವಾಗಿ ಈವರೆಗೂ 30ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕವಿದೆ. ಅಮೆರಿಕದ ಸುಮಾರು ಮೂರನೇ ಎರಡು ಭಾಗ ಪ್ರದೇಶಗಳು ಈಗಾಗಲೇ ಈ ಹಿಮ ಚಂಡಮಾರುತದ ಪ್ರಭಾವಕ್ಕೆ ಒಳಗಾಗಿವೆ.
ನ್ಯೂ ಇಂಗ್ಲೆಂಡ್ ಸೇರಿದಂತೆ ಪೂರ್ವ ಅಮೆರಿಕದ ಭಾಗಗಳಲ್ಲಿ ಭಾರೀ ಹಿಮಪಾತದಿಂದ ಚಳಿಗಾಲದ ಬಿರುಗಾಳಿ ಆವರಿಸಿದೆ. ಪ್ರಸ್ತುತ ಉಂಟಾಗಿರುವ ಭೀಕರ ಹಿಮ ಬಿರುಗಾಳಿಯಿಂದ ಅಮೆರಿಕದಲ್ಲಿ ಭಾರಿ ಅನಾಹುತ ಸಂಭವಿಸಿದೆ.