ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದುರಂತ: ದೋಣಿ ಮಗುಚಿ ನಾಪತ್ತೆಯಾಗಿದ್ದ ನಾಲ್ವರು ಯುವಕರ ಮೃತದೇಹ ಪತ್ತೆ
Durga immersion accident: ದುರ್ಗಾ ಮೂರ್ತಿ ವಿಸರ್ಜನೆ ವೇಳೆ ರಾಜಸ್ಥಾನದ ಕೋಟಾದಲ್ಲಿ ದುರ್ಘಟನೆ ನಡೆದಿದ್ದು, ದೋಣಿ ಮಗುಚಿ ನಾಪತ್ತೆಯಾಗಿದ್ದ ನಾಲ್ವರು ಯುವಕರ ಮೃತದೇಹ ಪತ್ತೆಯಾಗಿದೆ. ಅಪಘಾತದ ಸುಮಾರು 18 ಗಂಟೆಗಳ ನಂತರ ಬುಧವಾರ ಕೊಟ್ರಿ ಕಾಲುವೆಯಿಂದ ಮೃತದೇಹ ಹೊರತೆಗೆಯಲಾಗಿದೆ.
ರಾಜಸ್ಥಾನದ ಕೋಟಾದಲ್ಲಿರುವ ಕಾಲುವೆಯಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ -
ಜೈಪುರ, ಅ. 21: ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದೋಣಿ ಮುಳುಗಿದ ದುರ್ಘಟನೆ ರಾಜಸ್ಥಾನದ (Rajasthan) ಕೋಟಾದಲ್ಲಿ ನಡೆದಿದೆ. ದೋಣಿ ಮಗುಚಿ ನಾಪತ್ತೆಯಾಗಿದ್ದ ನಾಲ್ವರು ಯುವಕರ ಮೃತದೇಹಗಳನ್ನು ಅಪಘಾತದ ಸುಮಾರು 18 ಗಂಟೆಗಳ ನಂತರ ಬುಧವಾರ (ಅ. 21) ಕೊಟ್ರಿ ಕಾಲುವೆಯಿಂದ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಸಂಜೆ 5.30ರ ಸುಮಾರಿಗೆ ಸ್ಟೀಲ್ ಸೇತುವೆ ಬಳಿ ದೋಣಿ ಮಗುಚಿ ಬಿದ್ದ ಪರಿಣಾಮ ಏಳು ಮಂದಿ ಕೊಚ್ಚಿ ಹೋಗಿದ್ದರು. ದೀಪಕ್, ಅಪರಿಚಿತ ಮಹಿಳೆ ಮತ್ತು ದೋಣಿ ಚಾಲಕ ಸುರೇಶ್ ಎಂಬುವವರು ಈಜಿ ದಡ ಸೇರಿದ್ದರು.
ನಾಪತ್ತೆಯಾದ ಯುವಕರನ್ನು ವಿಕಾಸ್ ವರ್ಮಾ ಅಲಿಯಾಸ್ ಸುಮನ್ (22), ಸೋದರ ಸಂಬಂಧಿಗಳಾದ ಎಶು (19), ರಾಹುಲ್ ಜೋಶಿ (18) ಹಾಗೂ ಸೂರಜ್ ಸಿಂಗ್ (22) ಎಂದು ಗುರುತಿಸಲಾಗಿದೆ. ನಾಲ್ವರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಕಾಸ್ ಮಲ್ಹೋತ್ರಾ ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ತಂಡಗಳು, ನಾಗರಿಕ ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯ ಡೈವರ್ಗಳ ಸಹಾಯದಿಂದ, ಮಂಗಳವಾರ ರಾತ್ರಿ 11.30 ರ ಸುಮಾರಿಗೆ ಶವಗಳನ್ನು ಹೊರತೆಗೆಯಲು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದವು. ಆದರೆ ನಾಪತ್ತೆಯಾದ ಯುವಕರ ಯಾವುದೇ ಕುರುಹು ಇಲ್ಲದ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು.
ಬಿಹಾರ ದೋಣಿ ದುರಂತ: 13 ಮಕ್ಕಳು ಸಾವು
ಬುಧವಾರ ಬೆಳಗ್ಗೆ 5.30ಕ್ಕೆ ಶೋಧ ಕಾರ್ಯ ಪುನರಾರಂಭವಾಯಿತು. ಆರಂಭಿಕ ಹುಡುಕಾಟದ ಸಮಯದಲ್ಲಿ, ವಿಕಾಸ್ ಮತ್ತು ಸೂರಜ್ ಅವರ ಮೃತದೇಹಗಳು ಅಪಘಾತ ಸ್ಥಳದಿಂದ 100 ಮೀಟರ್ ಕೆಳಗೆ ಪತ್ತೆಯಾಗಿದ್ದವು. ತಂಡಗಳು ಕಾಲುವೆಯ ವಿವಿಧ ಭಾಗಗಳಲ್ಲಿ ಹುಡುಕಾಟವನ್ನು ಮುಂದುವರೆಸಿದವು. ಕೆಲವು ಗಂಟೆಗಳ ನಂತರ ಎಶು ಮತ್ತು ರಾಹುಲ್ ಅವರ ಮೃತದೇಹಗಳನ್ನು ವಶಪಡಿಸಿಕೊಂಡವು.
ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೋಟಾದ ಮಹಾರಾವ್ ಭೀಮ್ ಸಿಂಗ್ (ಎಂಬಿಎಸ್) ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಅವರ ಸಮ್ಮುಖದಲ್ಲಿ ಕಾರ್ಯವಿಧಾನಗಳು ಪೂರ್ಣಗೊಂಡ ನಂತರ ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ದುರಂತ ನಡೆದ ಮಂಗಳವಾರ ಕಾಲುವೆಗೆ ನೀರು ಬಿಡಲಾಗಿತ್ತು.