ಕೋಲ್ಕತ್ತಾ, ಮಾ.30: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣ (West Bengal Election) ರಂಗೇರಿದೆ. ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಪ್ರಮುಖ ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪ ಮಾಡುತ್ತಿವೆ. ಜೊತೆಗೆ ಚುನಾವಣೆ ರ್ಯಾಲಿಯೂ ಭರ್ಜರಿಯಾಗಿ ನಡೆಯುತ್ತಿದೆ. ಈ ಮಧ್ಯೆ ಮುಕ್ತ ಮತ್ತು ನ್ಯಾಯಯುತ ವಿಧಾನಸಭಾ ಚುನಾವಣೆಗಳನ್ನು ನಡೆಸುವುದಕ್ಕಾಗಿ ಚುನಾವಣಾ ಆಯೋಗವು (Election Commission) ಪಶ್ಚಿಮ ಬಂಗಾಳದಾದ್ಯಂತ 173 ಪೊಲೀಸ್ ಠಾಣೆಗಳ ಉಸ್ತುವಾರಿ ಅಧಿಕಾರಿಗಳು ಮತ್ತು ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದೆ. ಇದರಲ್ಲಿ ಕೋಲ್ಕತ್ತಾ ಪೊಲೀಸ್ ಠಾಣೆ ವ್ಯಾಪ್ತಿಯ 31 ಠಾಣೆಗಳೂ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಲ್ಕತ್ತಾದ ಭಬಾನಿಪುರ ಹಾಗೂ ಪುರ್ಬಾ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ್ ಮೊದಲಾದ ಪ್ರಮುಖ ಕ್ಷೇತ್ರಗಳಲ್ಲಿ ನಿಯೋಜಿಸಲಾದ ಅಧಿಕಾರಿಗಳನ್ನು ಪುನರ್‌ವ್ಯವಸ್ಥೆಯಲ್ಲಿ ಸೇರಿಸಲಾಗಿದೆ. ಕೂಚ್ ಬೆಹಾರ್, ಮಾಲ್ಡಾ, ಮುರ್ಷಿದಾಬಾದ್, ಬಿರ್ಭುಮ್, ಪಶ್ಚಿಮ ಮೇದಿನಿಪುರ, ಹೌರಾ ಮತ್ತು ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಐಸಿ ಮತ್ತು ಒಸಿಗಳಾಗಿ ನಿಯೋಜಿಸಲಾದ ಇನ್ಸ್‌ಪೆಕ್ಟರ್‌ಗಳು ಮತ್ತು ಸಬ್-ಇನ್‌ಸ್ಪೆಕ್ಟರ್‌ಗಳನ್ನು ಸಹ ವರ್ಗಾವಣೆ ಮಾಡಲಾಗಿದೆ.
ಆದೇಶದ ಪ್ರಕಾರ, ಈ ಹಿಂದೆ ವಿಶೇಷ ಕಾರ್ಯಪಡೆ (STF) ನಲ್ಲಿದ್ದ ಸೌಮಿತ್ರ ಬಸು, ಭಬಾನಿಪುರ ಪೊಲೀಸ್ ಠಾಣೆಯ ಐಸಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಭಬಾನಿಪುರದಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ತಮ್ಮ ಮಾಜಿ ಶಿಷ್ಯ ಸುವೇಂದು ಅಧಿಕಾರಿ ಅವರು ಕಣದಲ್ಲಿದ್ದಾರೆ. ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಅವರ ಮಾಜಿ ಶಿಷ್ಯ ಭೇದಿಸುತ್ತಾರಾ ಎಂಬುದು ಸದ್ಯದಲ್ಲಿರುವ ಕುತೂಹಲವಾಗಿದೆ.
Yashaswi Talwar Column: ಪಶ್ಚಿಮ ಬಂಗಾಳ ಚುನಾವಣೆ: ಪ್ರಜಾಪ್ರಭುತ್ವದ ಮತ್ತೊಂದು ಅಗ್ನಿಪರೀಕ್ಷೆಯಾ?
ಇನ್ನು ಇತರ ಪ್ರಮುಖ ಕೇಂದ್ರಗಳಾದ ಅಲಿಪೋರ್, ಎಕ್ಬಲ್‌ಪೋರ್, ಹರಿದೇವ್‌ಪುರ್, ಎಂಟಾಲಿ, ಜೊರಾಸಂಕೋ, ಗರಿಯಾಹತ್, ಭವಾನಿಪೋರ್, ನ್ಯೂ ಮಾರ್ಕೆಟ್, ಬೌಬಜಾರ್, ಟಾಲಿಗಂಜ್, ಅಮ್ಹೆರ್ಸ್ಟ್ ಸ್ಟ್ರೀಟ್, ತರತಲಾ ಮತ್ತು ಬೆಹಾಲಾಗಳ ಒಸಿಗಳನ್ನು ಸಹ ವರ್ಗಾಯಿಸಲಾಯಿತು.
ದೇಬ್ದುಲಾಲ್ ಮೊಂಡಲ್ ಅವರನ್ನು ಹಲ್ದಿಯಾದ ಐಸಿಯಾಗಿ, ಕಾಜಲ್ ದತ್ತಾ ಕೋಲಾಘಾಟ್‌ಗೆ, ಸುಸಂತ ಚಟ್ಟೋಪಾಧ್ಯಾಯ ಅಲಿಪುರ್‌ದೌರ್‌ನಿಂದ ಎಗ್ರಾಕ್ಕೆ ಮತ್ತು ಚಂದ್ರಕಾಂತ ಶಾಸ್ಮಲ್ ಅವರನ್ನು ಪಟಾಶ್‌ಪುರದ ಒಸಿಯಾಗಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುರ್ಬಾ ಮೇದಿನಿಪುರದಲ್ಲಿ 14 ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳನ್ನು (ಬಿಡಿಒ) ವರ್ಗಾವಣೆ ಮಾಡಲು ಚುನಾವಣೆ ಆಯೋಗವು ಆದೇಶಿಸಿತು. ಇದರಲ್ಲಿ ನಂದಿಗ್ರಾಮ್ I ಮತ್ತು ನಂದಿಗ್ರಾಮ್ II ಬ್ಲಾಕ್‌ಗಳೂ ಸೇರಿವೆ. ಚುನಾವಣೆ ಸಮಯದಲ್ಲಿ ಇಂತಹ ದೊಡ್ಡ ಪ್ರಮಾಣದ ವರ್ಗಾವಣೆಗಳು ಕಾನೂನು ಜಾರಿಗೆ ತಟಸ್ಥತೆ ಹೊಂದಿರುವಂತೆ ನೋಡಿಕೊಳ್ಳಲು ಮತ್ತು ಸ್ಥಳೀಯ ಪ್ರಭಾವವನ್ನು ಕಡಿಮೆ ಮಾಡುವ ಮೂಲಕ ಚುನಾವಣೆಯಲ್ಲಿ ಸಮಾನ ಅವಕಾಶವನ್ನು ಕಾಯ್ದುಕೊಳ್ಳುವ ಸಲುವಾಗಿ ಇಷ್ಟೊಂದು ಪ್ರಮಾಣದಲ್ಲಿ ವರ್ಗಾವಣೆ ಮಾಡಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಶೌಚಾಲಯದಲ್ಲಿ ನೀರಿಲ್ಲ, ರಸ್ತೆ ತುಂಬಾ ಕಸ: ರಾಷ್ಟ್ರಪತಿ ಭೇಟಿ ವೇಳೆ ನಡೆದ ಲೋಪಕ್ಕೆ ಕೇಂದ್ರ-ಬಂಗಾಳ ಸರ್ಕಾರದ ವಾಗ್ವಾದ
ಇದಕ್ಕೂ ಮುನ್ನ ಚುನಾವಣಾ ಆಯೋಗವು ರಾಜ್ಯದ 18 ಜಿಲ್ಲೆಗಳಲ್ಲಿ 83 ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಕೂಚ್ ಬೆಹಾರ್, ಜಲ್ಪೈಗುರಿ, ಉತ್ತರ ಮತ್ತು ದಕ್ಷಿಣ ದಿನಾಜ್‌ಪುರ, ಮಾಲ್ಡಾ, ಮುರ್ಷಿದಾಬಾದ್, ನಾಡಿಯಾ, ಉತ್ತರ ಮತ್ತು ದಕ್ಷಿಣ 24 ಪರಗಣಗಳು, ಹೌರಾ, ಹೂಗ್ಲಿ, ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ, ಪುರುಲಿಯಾ, ಬಂಕುರಾ, ಪೂರ್ವ ಮತ್ತು ಪಶ್ಚಿಮ ಬುರ್ದ್ವಾನ್ ಮತ್ತು ಬಿರ್ಭುಮ್ ಜಿಲ್ಲೆಗಳು ಸೇರಿದಂತೆ ಇತರೆ ಪ್ರದೇಶಗಳನ್ನು ಸಹ ಒಳಗೊಂಡಿದೆ.
ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವೆ ನಿರಂತರ ಘರ್ಷಣೆ ನಡೆಯುತ್ತಿರುವ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನು ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 4 ರಂದು ಮತ ಎಣಿಕೆ ನಡೆಯಲಿದೆ.