ಡೆಹ್ರಾಡೂನ್, ಮೇ 27: ಮುಸ್ಲಿಂ ವ್ಯಾಪಾರಿಯ ಪರವಾಗಿ ನಿಂತಿದ್ದ ಉತ್ತರಾಖಂಡದ ದೀಪಕ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಡಿಗೆ ಬಾಕಿಯಿಂದಾಗಿ ಜಿಮ್ ಕಳೆದುಕೊಳ್ಳುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹಿಂದುತ್ವ ಸಂಘಟನೆಯ ಸದಸ್ಯರಿಂದ 70 ವರ್ಷದ ಮುಸ್ಲಿಂ ಅಂಗಡಿ ಮಾಲೀಕರನ್ನು ದೀಪಕ್ ರಕ್ಷಿಸಿದ್ದರು. ಧಾರ್ಮಿಕ ಸೌಹಾರ್ದತೆಯ ಪ್ರತೀಕವಾಗಿ ತಮ್ಮನ್ನು ಮೊಹಮ್ಮದ್ ದೀಪಕ್ (Mohammad Deepak) ಎಂದೇ ಪರಿಚಯಿಸಿಕೊಂಡಿದ್ದರು. ಇದೀಗ ದೀಪಕ್ ಕುಮಾರ್ ಹೆಚ್ಚುತ್ತಿರುವ ಆರ್ಥಿಕ ಸಂಕಷ್ಟದ ನಡುವೆ ತಮ್ಮ ಜಿಮ್ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ತಮ್ಮ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಜಿಮ್ ನಡೆಸುವುದು ತುಂಬಾ ಕಷ್ಟವಾಗಿದೆ ಎಂದು ದೀಪಕ್ ಮಾಧ್ಯಮವೊಂದಕ್ಕೆ ಹೇಳಿದರು. ಕಳೆದ ನಾಲ್ಕು ತಿಂಗಳಿನಿಂದ ಜಿಮ್‌ನ ಬಾಡಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಈಗ ತಮ್ಮ ಜಿಮ್ ಅನ್ನು ಖಾಲಿ ಮಾಡುವಂತೆ ಕೇಳಲಾಗಿದೆ ಎಂದು ಅವರು ಹೇಳಿದರು.
“ಇದುವರೆಗೂ ನಾನು ಇದರ ಬಗ್ಗೆ ಯಾರೊಂದಿಗೂ ಮಾತನಾಡಿರಲಿಲ್ಲ. ಕಟ್ಟಡದ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಅವರು ತಮ್ಮ ಬಾಡಿಗೆ ಹಣವನ್ನು ಕೇಳುತ್ತಿದ್ದಾರೆ. ಆದರೆ ಜಿಮ್‌ನಲ್ಲಿ ಅಳವಡಿಸಿರುವ ಎಲ್ಲ ಯಂತ್ರಗಳನ್ನು ಹಿಡಿದುಕೊಂಡು ನಾನು ಎಲ್ಲಿಗೆ ಹೋಗಲಿ?” ಎಂದು ಅವರು ಪ್ರಶ್ನಿಸಿದ್ದಾರೆ.
ಬೇಕಂತಲೇ ಯುವತಿಯರ ಮೈ ಕೈ ಮುಟ್ಟಿ ಅನುಚಿತ ವರ್ತನೆ; ಧಾರವಾಡದಲ್ಲಿ ಮುಸ್ಲಿಂ ಜಿಮ್ ಟ್ರೈನರ್ ಅರೆಸ್ಟ್
ಕೋಟ್ದ್ವಾರ ನಿವಾಸಿಯಾಗಿರುವ ದೀಪಕ್, ವೈರಲ್ ಆಗಿರುವ ಘಟನೆಯ ನಂತರ ತಮ್ಮ ವ್ಯವಹಾರವು ತೀವ್ರವಾಗಿ ನಷ್ಟ ಅನುಭವಿಸಿದೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು, ಸುಮಾರು 150 ಸದಸ್ಯರು ನಿಯಮಿತವಾಗಿ ಜಿಮ್‌ಗೆ ಬರುತ್ತಿದ್ದರು. ಆದರೆ ವಿವಾದ ಮತ್ತು ನಂತರದ ಉದ್ವಿಗ್ನ ವಾತಾವರಣದ ನಂತರ ಸಂಖ್ಯೆ ತೀವ್ರವಾಗಿ ಕುಸಿಯಿತು. ತಾಯಿ, ಪತ್ನಿ ಮತ್ತು ಮಗಳೊಂದಿಗೆ ವಾಸಿಸುವ ದೀಪಕ್, ಗೃಹ ಸಾಲದ ಹೊರೆಯೂ ತನ್ನ ಮೇಲಿದೆ ಎಂದು ಹೇಳಿದರು.
ಏನಿದು ಘಟನೆ?
ಈ ವರ್ಷದ ಜನವರಿ 28ರಂದು ಕೋಟ್ದ್ವಾರದಲ್ಲಿ ನಡೆದ ಘರ್ಷಣೆಯ ಸಂದರ್ಭದಲ್ಲಿ 70 ವರ್ಷದ ಮುಸ್ಲಿಂ ವ್ಯಾಪಾರಿಯನ್ನು ಬಜರಂಗದಳ ಸದಸ್ಯರಿಂದ ರಕ್ಷಿಸಿದ ನಂತರ ದೀಪಕ್, ಮಾನವೀಯತೆ ಮತ್ತು ಕೋಮು ಸೌಹಾರ್ದತೆಯ ಸಂಕೇತವಾಗಿ ಹೊರಹೊಮ್ಮಿದರು.
‘ಬಾಬಾ’ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಹಮ್ಮದ್ ಶೋಯೆಬ್ ಒಡೆತನದ ಅಂಗಡಿಯ ಬಗ್ಗೆ ವಿವಾದ ಪ್ರಾರಂಭವಾಯಿತು. ಬಜರಂಗದಳದ ಸದಸ್ಯರು ಈ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಪಟ್ಟಣದ ಪ್ರಮುಖ ಹನುಮಾನ್ ದೇವಾಲಯವಾದ ಸಿದ್ಧಬಲಿ ಬಾಬಾ ಎಂಬ ಹೆಸರನ್ನು ಇಟ್ಟುಕೊಂಡ ಹಾಗಾಗುತ್ತದೆ. ಮುಸ್ಲಿಂ ಅಂಗಡಿಯವ ಆ ಹೆಸರನ್ನು ಬಳಸುವುದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು ಎಂದು ಸಂಘಟನೆ ಹೇಳಿಕೊಂಡಿತು. ಅಂಗಡಿಯ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿತು.
ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೊದಲ್ಲಿ, ದೀಪಕ್ ಪ್ರತಿಭಟನಾಕಾರರ ವಿರುದ್ಧ ಮಾತನಾಡಿ, ಅವರು ಹೇಳಿರುವ ಮಾತನ್ನು ಪ್ರಶ್ನಿಸಿದರು. ಈ ವೇಳೆ ಗುಂಪಿನ ಸದಸ್ಯರು ಹೆಸರೇನೆಂದು ಕೇಳಿದಾಗ, ತನ್ನ ಹೆಸರು ಮೊಹಮ್ಮದ್ ದೀಪಕ್ ಎಂದು ಉತ್ತರಿಸಿದ್ದರು. ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಯಿತು, ಶೀಘ್ರದಲ್ಲೇ ವೈರಲ್ ಆಯಿತು. ಈ ಮೂಲಕ ಅವರು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು.