ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತ್ವಿಶಾ ಸಾವಿನ ಪ್ರಕರಣ: ಅತ್ತೆ ಗಿರಿಬಾಲಾ ಸಿಂಗ್, ಪತಿ ಸಮರ್ಥ್‌ಗೆ 14 ದಿನಗಳ ನ್ಯಾಯಾಂಗ ಬಂಧನ

Twisha Death Case: ಮಾಡೆಲ್, ನಟಿ ತ್ವಿಶಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಅತ್ತೆ, ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಹಾಗೂ ಪತಿ ಸಮರ್ಥ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಮರ್ಥ್ ಮತ್ತು ಗಿರಿಬಾಲಾ ಸಿಂಗ್ ಅವರ ಭದ್ರತೆಗೆ ವಿಶೇಷ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ನ್ಯಾಯಮೂರ್ತಿ ಶೋಭನಾ ಭಾಗವೆ ನಿರ್ದೇಶನ ನೀಡಿದ್ದಾರೆ.

ತ್ವಿಶಾ ಪ್ರಕರಣ: ಅತ್ತೆ, ಪತಿಗೆ 14 ದಿನಗಳ ನ್ಯಾಯಾಂಗ ಬಂಧನ

ನ್ಯಾಯಾಲಯಕ್ಕೆ ಹಾಜರಾದ ತ್ವಿಶಾ ಅವರ ಅತ್ತೆ ಗಿರಿಬಾಲಾ ಸಿಂಗ್ -

Priyanka P
Priyanka P Jun 3, 2026 5:09 PM

ಭೋಪಾಲ್, ಜೂ. 3: ಮಾಡೆಲ್, ನಟಿ ತ್ವಿಶಾ ಸಾವಿನ ಪ್ರಕರಣಕ್ಕೆ (Twisha Death Case) ಸಂಬಂಧಿಸಿದಂತೆ ಅವರ ಅತ್ತೆ, ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ (Former Judge Giribala Singh) ಹಾಗೂ ಪತಿ ಸಮರ್ಥ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮೇ 12ರಂದು ಮಧ್ಯ ಪ್ರದೇಶದ (Madhya Pradesh) ಭೋಪಾಲ್‌ನಲ್ಲಿರುವ ಪತಿ ಮನೆಯಲ್ಲಿ ತ್ವಿಶಾ ಶವವಾಗಿ ಪತ್ತೆಯಾಗಿದ್ದರು. ಆಕೆಯ ಕುಟುಂಬವು ತ್ವಿಶಾ ಪತಿ ಸಮರ್ಥ್ ಮತ್ತು ಅವರ ತಾಯಿ ನಿವೃತ್ತ ನ್ಯಾಯಾಧೀಶ ಗಿರಿಬಾಲಾ ಸಿಂಗ್ ಅವರ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದರೆ, ಆರೋಪಿಗಳು ಇದು ಆತ್ಮಹತ್ಯೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಭೋಪಾಲ್ ಪೊಲೀಸರು ದಾಖಲಿಸಿದ್ದ ಈ ಪ್ರಕರಣವನ್ನು ನಂತರ ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ಸಿಬಿಐಗೆ ಹಸ್ತಾಂತರಿಸಲಾಯಿತು.

ಸಮರ್ಥ್ ಮತ್ತು ಗಿರಿಬಾಲಾ ಸಿಂಗ್ ಅವರ ಭದ್ರತೆಗೆ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ನ್ಯಾಯಮೂರ್ತಿ ಶೋಭನಾ ಭಾಗವೆ ನಿರ್ದೇಶನ ನೀಡಿದ್ದಾರೆ. ತಮ್ಮ ಹಾಗೂ ಪುತ್ರನ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಗಿರಿಬಾಲಾ ಸಿಂಗ್, ʼʼಭೋಪಾಲ್ ಕೇಂದ್ರ ಕಾರಾಗೃಹದಲ್ಲಿ ತಮ್ಮ ಕಠಿಣ ತೀರ್ಪುಗಳನ್ನು ಎದುರಿಸಿದ ಹಲವು ಅಪರಾಧಿಗಳು ಬಂಧಿತರಾಗಿದ್ದು, ಅವರಿಂದ ಜೀವಕ್ಕೆ ಅಪಾಯವಿದೆʼʼ ಎಂದು ಹೇಳಿದ್ದರು.

ನ್ಯಾಯಾಲಯವು ಸಮರ್ಥ್ ಮತ್ತು ಗಿರಿಬಾಲಾ ಸಿಂಗ್ ಇಬ್ಬರನ್ನೂ ಜೂನ್ 16ರವರೆಗೆ ಭೋಪಾಲ್ ಕೇಂದ್ರ ಕಾರಾಗೃಹದಲ್ಲಿ ಇರಿಸಲು ಆದೇಶಿಸಿದೆ. ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಹಾಗೂ ಭದ್ರತಾ ವ್ಯವಸ್ಥೆಯುಳ್ಳ ಸೆಲ್‌ಗಳಲ್ಲಿ ಇರಿಸುವಂತೆ ಸೂಚಿಸಿದೆ. ತಮ್ಮ ಪರವಾಗಿ ತಾವೇ ವಾದ ಮಂಡಿಸಿದ ಗಿರಿಬಾಲಾ ಸಿಂಗ್, “ನಾನು ಹಿಂದೆ ಶಿಕ್ಷೆ ವಿಧಿಸಿದ್ದ ಕೈದಿಗಳೊಂದಿಗೆ ಅದೇ ಜೈಲಿನಲ್ಲಿ ಇರಬೇಕಾದರೆ ನಮ್ಮ ಜೀವಕ್ಕೆ ಅಪಾಯ ಉಂಟಾಗಬಹುದು” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ತ್ವಿಶಾ ಶರ್ಮಾ ಸಾವು ಕೇಸ್‌; ಸಿಬಿಐನಿಂದ ಅತ್ತೆ ಗಿರಿಬಾಲಾ ಸಿಂಗ್ ಬಂಧನ

ಅಲ್ಲದೆ ಗಿರಿಬಾಲಾ ಸಿಂಗ್ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಬಿತ್ತರಿಸುತ್ತಿರುವ ವರದಿಯನ್ನು ತಡೆಯುವಂತೆ ನ್ಯಾಯಾಲಯವನ್ನು ಕೋರಿದರು. “ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಿಸಿಟಿವಿ ದೃಶ್ಯಾವಳಿಯನ್ನು ನಾವು ಬಿಡುಗಡೆ ಮಾಡಿಲ್ಲ. ಆ ದೃಶ್ಯಗಳು ಮಾಧ್ಯಮಗಳಿಗೆ ಹೇಗೆ ಸಿಕ್ಕವು ಎಂಬುದು ನನಗೆ ತಿಳಿದಿಲ್ಲ” ಎಂದು ಅವರು ಹೇಳಿದರು.

ಸೋಮವಾರ (ಜೂನ್‌ 1) ನಡೆದ ಅಪರಾಧ ಸ್ಥಳದ ಮರುಸೃಷ್ಟಿ ಕುರಿತು ಮಾತನಾಡಿದ ಅವರು, “ನಾವು ಎಲ್ಲಿಗೆ ಹೋದರೂ ಮಾಧ್ಯಮಗಳು ನಮ್ಮನ್ನು ಹಿಂಬಾಲಿಸುತ್ತಿವೆ. ಮಾಧ್ಯಮಗಳು ವರದಿ ಮಾಡಲು ಅನುಕೂಲವಾಗುವಂತೆ ನಮ್ಮನ್ನು ಕಾಲ್ನಡಿಗೆಯಲ್ಲೇ ಮನೆಗೆ ಕರೆದೊಯ್ಯಲಾಯಿತು” ಎಂದು ಅವರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಸಮರ್ಥ್ ಮತ್ತು ಗಿರಿಬಾಲಾ ಸಿಂಗ್ ಅವರನ್ನು ಜೈಲಿಗೆ ರಹಸ್ಯವಾಗಿ ಕರೆದೊಯ್ಯುವಂತೆ ಸಿಬಿಐಗೆ ನಿರ್ದೇಶನ ನೀಡಿತು. ಜತೆಗೆ ಸಾರ್ವಜನಿಕರಿಗೆ ಬಹಿರಂಗವಾಗದಂತೆ ಅವರನ್ನು ನ್ಯಾಯಾಲಯದ ಕೊಠಡಿಯಿಂದ ವಾಹನಕ್ಕೆ ಗೌಪ್ಯವಾಗಿ ಕರೆದೊಯ್ಯಬೇಕೆಂದು ಆದೇಶಿಸಿತು.

ʼʼವಿಚಾರಣೆ ವೇಳೆ ತ್ವಿಶಾ ಪರ ವಕೀಲ ಅನುರಾಗ್ ಶ್ರೀವಾಸ್ತವ ಜಬಲ್ಪುರ್ ಜಿಲ್ಲಾ ನ್ಯಾಯಾಲಯದಲ್ಲಿ ಶರಣಾಗಲು ಬಂದಿದ್ದ ತಮ್ಮ ಪುತ್ರ ಸಮರ್ಥ್ ಮೇಲೆ ಹಲ್ಲೆ ನಡೆಸಿದ್ದಾರೆʼʼ ಎಂದು ಗಿರಿಬಾಲಾ ಸಿಂಗ್ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಶ್ರೀವಾಸ್ತವ ನಿರಾಕರಿಸಿದ್ದಾರೆ. ʼʼನ್ಯಾಯಾಲಯದ ಆವರಣದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸತ್ಯಾಂಶವನ್ನು ಪರಿಶೀಲಿಸಬಹುದು. ಅಂತಹ ಯಾವುದೇ ಘಟನೆ ನಡೆದಿಲ್ಲʼʼ ಎಂದು ವಿವರಿಸಿದರು.