Telangana News: ಘೋರ ದುರಂತ; ಕಾರಿನೊಳಗೆ ಉಸಿರುಗಟ್ಟಿ ಮಕ್ಕಳಿಬ್ಬರು ಸಾವು
ಒಂದು ಸಣ್ಣ ನಿರ್ಲಕ್ಷ್ಯದಿಂದಾಗಿ ತೆಲಂಗಾಣದಲ್ಲಿ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಮಕ್ಕಳಿಬ್ಬರು ಹೊರಗೆ ಆಡುತ್ತಿದ್ದಾರೆ ಎಂದು ಮನೆಯವರು ಅಂದುಕೊಂಡಿದ್ದರು. ಆದರೆ ಮಕ್ಕಳು ಕಾರಿನೊಳಗೆ ಸಿಕ್ಕಿ ಹಾಕಿ ಒದ್ದಾಡಿ ಪ್ರಾಣ ಕಳೆದುಕೊಂಡಿರುವುದು ಮನೆ ಮಂದಿಯ ಅರಿವಿಗೆ ಬರಲಿಲ್ಲ. ಮಕ್ಕಳು ಏನು ಮಾಡುತ್ತಿದ್ದಾರೆ ನೋಡೋಣ ಎಂದು ಕೊಂಡು ಮನೆ ಮಂದಿ ಹುಡುಕಲು ಪ್ರಾರಂಭಿಸಿದಾಗ ತುಂಬಾ ತಡವಾಗಿ ಹೋಗಿತ್ತು.


ಹೈದರಾಬಾದ್: ಮಕ್ಕಳಿರುವ ಮನೆಯಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಸಣ್ಣಪುಟ್ಟ ಸಂಗತಿಗಳನ್ನೂ ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಯಾವುದರಿಂದ ಯಾವಾಗ ಮಕ್ಕಳಿಗೆ ಅಪಾಯವಾಗುತ್ತೆ ಎನ್ನುವುದು ಗೊತ್ತೇ ಆಗುವುದಿಲ್ಲ. ಇಂತಹ ಒಂದು ಸಣ್ಣ ನಿರ್ಲಕ್ಷ್ಯದಿಂದಾಗಿ ತೆಲಂಗಾಣದಲ್ಲಿ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳಿಬ್ಬರು ಹೊರಗೆ ಆಡುತ್ತಿದ್ದಾರೆ ಎಂದು ಮನೆಯವರು ಅಂದುಕೊಂಡಿದ್ದರು. ಆದರೆ ಮಕ್ಕಳು ಕಾರಿನೊಳಗೆ ಸಿಕ್ಕಿ ಹಾಕಿ ಒದ್ದಾಡಿ ಪ್ರಾಣ ಕಳೆದುಕೊಂಡಿರುವುದು ಮನೆ ಮಂದಿಯ ಅರಿವಿಗೆ ಬರಲಿಲ್ಲ. ಮಕ್ಕಳು ಏನು ಮಾಡುತ್ತಿದ್ದಾರೆ ನೋಡೋಣ ಎಂದು ಕೊಂಡು ಮನೆ ಮಂದಿ ಹುಡುಕಲು ಪ್ರಾರಂಭಿಸಿದಾಗ ತುಂಬಾ ತಡವಾಗಿ ಹೋಗಿತ್ತು.
ತೆಲಂಗಾಣದಲ್ಲಿ ಕಾರಿನೊಳಗೆ ಸಿಲುಕಿದ ಇಬ್ಬರು ಬಾಲಕಿಯರನ್ನು ಎರಡು ಗಂಟೆಗಳ ಬಳಿಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಸೋಮವಾರ ನಾಲ್ಕು ಮತ್ತು ಐದು ವರ್ಷದ ಇಬ್ಬರು ಬಾಲಕಿಯರು ಆಕಸ್ಮಿಕವಾಗಿ ಕಾರಿನೊಳಗೆ ಸಿಕ್ಕಿಹಾಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ರಂಗಾರೆಡ್ಡಿ ಜಿಲ್ಲೆಯ ದಮಾರ್ಗಿದ್ದಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ಮಯಿ ಶ್ರೀ (5) ಮತ್ತು ಅಭಿನಯ ಶ್ರೀ (4) ಮೃತ ಬಾಲಕಿಯರು. ಸೋದರಸಂಬಂಧಿಗಳಾದ ಈ ಬಾಲಕಿಯರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಟವಾಡುತ್ತಾ ಮನೆಯ ಬಳಿ ನಿಲ್ಲಿಸಿದ್ದ ಸಂಬಂಧಿಕರ ಕಾರು ಹತ್ತಿದ್ದು, ಅದರೊಳಗೆ ಲಾಕ್ ಆಗಿದ್ದಾರೆ. ಮನೆಯವರು ಮಕ್ಕಳು ಹೊರಗೆ ಆಟವಾಡುತ್ತಿದ್ದಾರೆ ಎಂದೇ ಊಹಿಸಿದ್ದರು. ಯಾರೂ ಮಕ್ಕಳ ಕಡೆ ಗಮನವನ್ನೇ ಕೊಟ್ಟಿರಲಿಲ್ಲ.
ಇಬ್ಬರು ಹುಡುಗಿಯರು ವಾಹನದೊಳಗೆ ಹತ್ತಿ ಸುಮಾರು ಒಂದು ಗಂಟೆ ಕಾಲ ಕಳೆದು ಹೋಗಿತ್ತು. ಮಕ್ಕಳು ಕಾರಿನೊಳಗೆ ಹೋಗಿರುವುದನ್ನು ಯಾರೂ ಗಮನಿಸಲಿಲ್ಲ. ಇದರಿಂದ ಉಸಿರುಗಟ್ಟಿ ಮಕ್ಕಳು ಪ್ರಜ್ಞಾಹೀನರಾಗಿದ್ದರು.
ಇದನ್ನೂ ಓದಿ: Police Firing: ಹುಬ್ಬಳ್ಳಿಯಲ್ಲಿ ರೌಡಿಶೀಟರ್ ಕಾಲಿಗೆ ಗುಂಡಿಕ್ಕಿ ಸೆರೆಹಿಡಿದ ಪೊಲೀಸರು
ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾರನ್ನು ಪರಿಶೀಲಿಸಿದಾಗ ಇಬ್ಬರು ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಒಳಗೆ ಇರುವುದು ಕಂಡು ಬಂದಿದೆ. ಕೂಡಲೇ ಕುಟುಂಬದವರು ಕಾರನ್ನು ತೆರೆದು ಮಕ್ಕಳನ್ನು ಚೆವೆಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಮಕ್ಕಳು ತಮ್ಮ ಪೋಷಕರೊಂದಿಗೆ ದಮಾರ್ಗಿದ್ದಾದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು. ಮಾಹಿತಿ ತಿಳಿದು ಪೊಲೀಸರು ಆಸ್ಪತ್ರೆಗೆ ಬರುವಷ್ಟರ ವೇಳೆಗೆ ಪೋಷಕರು ಮಕ್ಕಳ ಮೃತ ದೇಹವನ್ನು ತೆಗೆದುಕೊಂಡು ಹೋಗಿದ್ದರು. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.