Earthquake: ಮಣಿಪುರದಲ್ಲಿ ಮತ್ತೆ ಕಂಪಿಸಿದ ಭೂಮಿ; ಗಂಟೆಯ ಅಂತರದಲ್ಲಿ 2 ಭೂಕಂಪ
ಬುಧವಾರ 1 ಗಂಟೆಯ ಅವಧಿಯಲ್ಲಿ ಮಣಿಪುರದಲ್ಲಿ 2 ಬಾರಿ ಭೂಮಿ ಕಂಪಸಿದೆ. ಭಿಷ್ಣುಪುರದಲ್ಲಿ ರಿಕ್ಟರ್ ಮಾಪಕದಲ್ಲಿ 5.7 ಮತ್ತು 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮಣಿಪುರದ ಹವಾಮಾನ ಇಲಾಖೆ ತಿಳಿಸಿದೆ. ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.

ಸಾಂದರ್ಭಿಕ ಚಿತ್ರ.

ಇಂಫಾಲ: ಬುಧವಾರ (ಮಾ. 5) 1 ಗಂಟೆಯ ಅವಧಿಯಲ್ಲಿ ಮಣಿಪುರದಲ್ಲಿ 2 ಬಾರಿ ಭೂಮಿ ಕಂಪಸಿದೆ (Earthquake). ಭಿಷ್ಣುಪುರದಲ್ಲಿ ರಿಕ್ಟರ್ ಮಾಪಕದಲ್ಲಿ 5.7 ಮತ್ತು 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮಣಿಪುರದ ಹವಾಮಾನ ಇಲಾಖೆ (Meteorological Department) ತಿಳಿಸಿದೆ. ಈ ವೇಳೆ ಯಾವುದೇ ಹಾನಿ ಸಂಭಿಸಿದ ಬಗ್ಗೆ ವರದಿಯಾಗಿಲ್ಲ. ಮೊದಲ ಭೂಕಂಪ ಬೆಳಗ್ಗೆ 11.06 ಗಂಟೆಗೆ ಮತ್ತು 2ನೇ ಭೂಕಂಪ ಮಧ್ಯಾಹ್ನ 12.20 ಗಂಟೆಗೆ ಸಂಭವಿಸಿದೆ. ಎರಡೂ ಭೂಕಂಪದ ಕೇಂದ್ರ ಮಣಿಪುರದ ಕಾಮ್ಜಾಂಗ್ (Kamjong) ಎಂದು ಮೂಲಗಳು ತಿಳಿಸಿವೆ.
ಇಂಫಾಲ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ (NCS) ಕಚೇರಿಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿ, ಆಫೀಸ್‌ನಲ್ಲಿದ್ದಾಗ ಕ್ಷಣಕಾಲ ಕಂಪಿಸಿದ ಅನುಭವವಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು ಮ್ಯಾನ್ಮಾರ್‌ನಲ್ಲಿ ಕಡಿಮೆ ತೀವ್ರತೆಯ 2 ಭೂಕಂಪ ಸಂಭವಿಸಿತ್ತು. ಮುಂಜಾನೆ 3.36ಕ್ಕೆ 4.7 ಮತ್ತು 3.54ಕ್ಕೆ 4.5 ತೀವ್ರತೆಯ ಭೂಕಂಪವಾಗಿತ್ತು. ಮಣಿಪುರದ ಕಾಮ್ಜಾಂಗ್ ಜಿಲ್ಲೆಯು ಮ್ಯಾನ್ಮಾರ್‌ನ ಗಡಿಯಲ್ಲಿದೆ.
#Manipur ROCKS!!
— SK Chakraborty (@sanjoychakra) March 5, 2025
IMPHAL: Two consecutive earthquakes, of 5. 7 & 4.1 magnitude, rocked Manipur on Wednesday and the tremors were felt across the Northeast, officials said.
The earthquake of 5. 7 magnitude struck the state at 11.06 am.
Its epicentre was 44 km east of Yairipok in… pic.twitter.com/cHtl3auwXb
ದಿಸ್ಪುರ್: ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಪದೇ ಪದೆ ಭೂಕಂಪ ಸಂಭವಿಸುತ್ತಿದೆ. ಕೆಲವು ದಿನಗಳ ಹಿಂದೆ ಅಸ್ಸಾಂನಲ್ಲಿಯೂ ಭೂಮಿ ಕಂಪಿಸಿತ್ತು. ಫೆ. 27ರ ಮುಂಜಾನೆ ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಗುವಾಹಟಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕಂಪನದ ಅನುಭವವಾಗಿತ್ತು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಾರ, ಬೆಳಗಿನ ಜಾವ 2:25ಕ್ಕೆ 16 ಕಿಲೋ ಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 5ರ ತೀವ್ರತೆ ದಾಖಲಾಗಿದ್ದು, ಭೂಮಿ ಕಂಪಿಸಿದ್ದರಿಂದ ಮನೆಯ ಒಳಾಂಗಣ ವಸ್ತುಗಳು ಅಲುಗಾಡಿತ್ತು ಎಂದು ಸ್ಥಳೀಯರು ತಿಳಿಸಿದ್ದರು. ಅದಾಗ್ಯೂ ಯಾವುದೇ ಹಾನಿ ಸಂಭವಿಸಿರಲಿಲ್ಲ.
ಅದಕ್ಕೂ ಮೊದಲು ಬಂಗಾಳಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕೋಲ್ಕತಾ ಮತ್ತು ಪಶ್ಚಿಮ ಬಂಗಾಳದ ಹಲವಾರು ಭಾಗಗಳಲ್ಲಿ ಕಂಪನದ ಅನುಭವವಾಗಿತ್ತು. ಇನ್ನು ಜ. 24ರಂದು ಮ್ಯಾನ್ಮರ್ ಮತ್ತು ಮಣಿಪುರ ಗಡಿಪ್ರದೇಶದಲ್ಲಿ 5.1 ತೀವ್ರತೆಯ ಭೂಕಂಪ ದಾಖಲಾಗಿತ್ತು.
ಈ ಸುದ್ದಿಯನ್ನೂ ಓದಿ: Nepal Earthquake: ನೇಪಾಳದಲ್ಲಿ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ; 6.1 ತೀವ್ರತೆ ದಾಖಲು
ರಾಜ್ಯದಲ್ಲಿಯೂ ಕಂಪಿಸಿದ ಭೂಮಿ
ದಕ್ಷಿಣ ಕನ್ನಡ: ಜಿಲ್ಲೆಯ ಪುತ್ತೂರು ಸೇರಿ ವಿವಿಧ ಗ್ರಾಮಗಳಲ್ಲಿ ಮಾ. 4ರಂದು ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು. ಹೀಗಾಗಿ ಆತಂಕಗೊಂಡ ಜನರು ಮನೆಯಿಂದ ಹೊರ ಓಡಿ ಬಂದಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುಮಾರು 5 ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಕೆಲ ಕಾಲ ಭೂಮಿ ಕಂಪಿಸಿದ್ದರಿಂದಾಗಿ ಜನರು ಭಯ ಭೀತರಾದರು ಎಂದು ವರದಿ ತಿಳಿಸಿದೆ. ಜತೆಗೆ ಪುತ್ತೂರು ವ್ಯಾಪ್ತಿಯ ಕಲ್ಲು ಕ್ವಾರಿಯಲ್ಲಿ ಸಂಗ್ರಹಿಸಿಟ್ಟಿದ್ದಂತ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡ ಪರಿಣಾಮ ಭೂಮಿ ಕಂಪಿಸಿದೆ ಎನ್ನುವ ವಾದವೂ ಕೇಳಿ ಬಂದಿತ್ತು.