ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಂದೇ ದೇಹಕ್ಕೆ ಎರಡು ತಲೆ: ಒಡಿಶಾದಲ್ಲಿ ಅಪರೂಪದ ಮಗುವಿನ ಜನನ

Rare Baby Born in Odisha: ಮಹಿಳೆಯೊಬ್ಬರು ಎರಡು ತಲೆಗಳನ್ನು ಹೊಂದಿರುವ ಮಗುವಿಗೆ ಜನ್ಮ ನೀಡಿರುವ ಅಪರೂಪದ ವೈದ್ಯಕೀಯ ಪ್ರಕರಣವೊಂದು ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಪರೂಪದ ಪ್ರಕರಣವನ್ನು ವೈದ್ಯಕೀಯವಾಗಿ ಡೈಸೆಫಾಲಿಸ್ ಪ್ಯಾರಪಾಗಸ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಎರಡು ತಲೆಗಳು ಮತ್ತು ಕುತ್ತಿಗೆಗಳು ಒಂದೇ ದೇಹಕ್ಕೆ ಜೋಡಿಸಲ್ಪಟ್ಟಿರುತ್ತವೆ.

ಒಡಿಶಾದಲ್ಲಿ ಅಪರೂಪದ ಮಗುವಿನ ಜನನ

ಭುವನೇಶ್ವರ, ಅ.14: ಅಪರೂಪದ ವೈದ್ಯಕೀಯ ಪ್ರಕರಣವೊಂದು ಒಡಿಶಾ (Odisha) ದ ಕಂಧಮಾಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರು ಎರಡು ತಲೆಗಳನ್ನು ಹೊಂದಿರುವ ಮಗುವಿಗೆ ಜನ್ಮ ನೀಡಿದ್ದಾರೆ (Rare Baby Born). ಶನಿವಾರ (ಅಕ್ಟೋಬರ್ 10) ಆಪರೇಷನ್ ಮೂಲಕ ಹೆರಿಗೆಯಾದ ನವಜಾತ ಶಿಶುವನ್ನು ತಕ್ಷಣವೇ ಬೆರ್ಹಾಂಪುರ್‌ನ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶೇಷ ನವಜಾತ ಶಿಶು ಆರೈಕೆ ಘಟಕಕ್ಕೆ (ಎಸ್‌ಎನ್‌ಸಿಯು) ದಾಖಲಿಸಲಾಯಿತು. ಈ ಅಪರೂಪದ ಜನನವು ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡುವಲ್ಲಿ ಎದುರಾಗುವ ವೈದ್ಯಕೀಯ ಸವಾಲುಗಳತ್ತ ಮತ್ತೊಮ್ಮೆ ಗಮನ ಸೆಳೆದಿದೆ.

ಅಪರೂಪದ ಪ್ರಕರಣವನ್ನು ವೈದ್ಯಕೀಯವಾಗಿ ಡೈಸೆಫಾಲಿಸ್ ಪ್ಯಾರಪಾಗಸ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಎರಡು ತಲೆಗಳು ಮತ್ತು ಕುತ್ತಿಗೆಗಳು ಒಂದೇ ದೇಹಕ್ಕೆ ಜೋಡಿಸಲ್ಪಟ್ಟಿರುತ್ತವೆ. ತಾಯಿಯನ್ನು ಕಂಧಮಲ್‌ನ ತುಮುಡಿಬಂಧ್ ಪ್ರದೇಶದ ನಿವಾಸಿ ಎಂದು ಹೇಳಲಾಗಿದೆ.

ನವಜಾತ ಶಿಶುವಿನ ತಂದೆ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾರೆ. ತಾಯಿಯನ್ನು ವಿಶೇಷ ವೈದ್ಯಕೀಯ ಆರೈಕೆಯಲ್ಲಿ ನಿಗಾ ವಹಿಸಲಾಗುತ್ತಿದೆ. ಶಿಶು 32 ವಾರಗಳ ಗರ್ಭಾವಸ್ಥೆಯಲ್ಲಿ ಜನಿಸಿತು. ಇದು ದಂಪತಿಗಳ ಮೊದಲ ಮಗುವೂ ಹೌದು.

ರಸ್ತೆ ಅವ್ಯವಸ್ಥೆಯಿಂದ ಆಂಬುಲೆನ್ಸ್ ಅರ್ಧದಲ್ಲೇ ಬಾಕಿ; ನವಜಾತ ಶಿಶು ಸಾವು

ಮಗುವಿಗೆ ಎರಡು ತೋಳುಗಳು ಮತ್ತು ಕಾಲುಗಳು ಹಾಗೂ ಗಂಡು ಬಾಹ್ಯ ಜನನಾಂಗಗಳೊಂದಿಗೆ ಒಂದೇ ಮೂತ್ರನಾಳವಿದೆ. ಮಗುವಿನ ಆರೋಗ್ಯ ಹೇಗಿದೆ, ದೇಹದ ಒಳಗಿನ ಅಂಗಾಂಗಗಳು ಹೇಗಿವೆ ಮತ್ತು ಮಗುವಿಗೆ ಯಾವೆಲ್ಲ ವೈದ್ಯಕೀಯ ಸಮಸ್ಯೆಗಳಿವೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಮಗುವಿನ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಸೂಕ್ತ ಚಿಕಿತ್ಸೆ ನೀಡುವ ಬಗ್ಗೆ ವೈದ್ಯರು ನಿರ್ಧರಿಸುತ್ತಿದ್ದಾರೆ. ಸದ್ಯ ಮಗು ಆಸ್ಪತ್ರೆಯ ವಿಶೇಷ ನವಜಾತ ಶಿಶು ಆರೈಕೆ ಘಟಕದಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದೆ.

ಸಯಾಮಿ ಮಕ್ಕಳು ಜನಿಸುವುದು ಅತ್ಯಂತ ಅಪರೂಪದ ಸಂಗತಿಯಾಗಿದೆ. ಪ್ರತಿ 3 ಲಕ್ಷಗಳಲ್ಲಿ ಕೇವಲ ಒಂದು ಜನನದಲ್ಲಿ ಇಂತಹ ಪ್ರಕರಣ ಕಂಡುಬರುತ್ತದೆ ಎಂದು ಹೇಳಲಾಗಿದೆ. ಈ ಸುದ್ದಿ ಒಡಿಶಾದ ಜಗ ಮತ್ತು ಕಾಲಿಯಾ ಎಂಬ ಸಯಾಮಿ ಮಕ್ಕಳ ನೆನಪನ್ನೂ ಮತ್ತೆ ಮುನ್ನೆಲೆಗೆ ತಂದಿದೆ. ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಈ ಮಕ್ಕಳು ಒಡಿಶಾ ರಾಜ್ಯದಾದ್ಯಂತ ಮಾತ್ರವಲ್ಲದೆ, ರಾಜ್ಯದ ಹೊರಗೂ ವ್ಯಾಪಕವಾಗಿ ಪರಿಚಿತರಾಗಿದ್ದರು. ಅವರ ಪ್ರಕರಣವು ಸಾರ್ವಜನಿಕರ ಗಮನ ಸೆಳೆದಿತ್ತು. ಅಪರೂಪದ ಜನ್ಮಜಾತ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಾಗ ವೈದ್ಯರು ಎದುರಿಸುವ ಹಲವು ಸವಾಲುಗಳನ್ನು ಈ ಪ್ರಕರಣ ಎತ್ತಿತೋರಿಸಿತ್ತು.

ಮುಂದಿನ ಕೆಲವು ದಿನಗಳು ಮಗುವಿನ ಆರೋಗ್ಯದ ದೃಷ್ಟಿಯಿಂದ ಬಹಳ ನಿರ್ಣಾಯಕವಾಗಿವೆ. ವೈದ್ಯರು ನಡೆಸುವ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ ಮಗುವಿಗೆ ಯಾವ ರೀತಿಯ ಚಿಕಿತ್ಸೆ ಅಥವಾ ವಿಶೇಷ ಆರೈಕೆಯ ಅಗತ್ಯವಿದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಮಗುವಿನ ದೇಹದ ರಚನೆ ಹೇಗಿದೆ, ಒಳಗಿನ ಅಂಗಾಂಗಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಮತ್ತು ಬೇರೆ ಆರೋಗ್ಯ ಸಮಸ್ಯೆಗಳಿವೆಯೇ ಎಂಬುದರ ಮೇಲೆ ಮಗುವಿನ ಆರೋಗ್ಯ ನಿರ್ಧಾರವಾಗುತ್ತದೆ.