ಚೆನ್ನೈ, ಜೂ. 23: ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ (Chief Minister Vijay) ಮತ್ತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ನಡುವಿನ ವಾಕ್ಸಮರ ತೀವ್ರಗೊಂಡಿದೆ. ರಾಜಕೀಯ ಟೀಕೆಗಳ ನಡುವೆಯೇ ಉದಯನಿಧಿ, ವಿಜಯ್ ಅವರ ವೈಯಕ್ತಿಕ ಜೀವನವನ್ನು ಉಲ್ಲೇಖಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ.
ಈ ಹೇಳಿಕೆ ವಿಜಯ್ ಅವರ ಪತ್ನಿ ಸಂಗೀತಾ ಸೋರ್ನಲಿಂಗಂ ಸಲ್ಲಿಸಿರುವ ವಿಚ್ಛೇದನ ಅರ್ಜಿಯನ್ನು ಪರೋಕ್ಷವಾಗಿ ಉಲ್ಲೇಖಿಸಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ವಿಜಯ್ ವಿಚ್ಛೇದನ ಪ್ರಕರಣವು ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಮುಂದಿನ ವಿಚಾರಣೆ ಆಗಸ್ಟ್ 7ರಂದು ನಿಗದಿಯಾಗಿದೆ.
ಇದಕ್ಕೂ ಮೊದಲು ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ವಿಜಯ್, ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, "ಪಕ್ಷದ ನಿಧಿ ಹೆಸರಿನಲ್ಲಿ ದುರುಪಯೋಗಗೊಂಡ ಸಾರ್ವಜನಿಕ ಹಣವನ್ನು ನಮ್ಮ ಸರ್ಕಾರ ವಾಪಸ್ ಪಡೆಯಲಿದೆ" ಎಂದು ಗುಡುಗಿದ್ದರು. ಇದಕ್ಕೆ ಉದಯನಿಧಿ ಸ್ಟಾಲಿನ್ ʼʼಸಾಕ್ಷ್ಯವಿದ್ದರೆ ಮಾತ್ರ ಇಂತಹ ಆರೋಪ ಮಾಡಬೇಕುʼʼ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಉದಯನಿಧಿ ಸ್ಟಾಲಿನ್ ಎಕ್ಸ್ ಪೋಸ್ಟ್:
ಡಿಎಂಕೆ ಸದಸ್ಯರು ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದ ಬಳಿಕ, ವಿಜಯ್ ತಮ್ಮ ಭಾಷಣದ ಕೊನೆಯಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ವೈರಲ್ ಕೈ ಸನ್ನೆಯನ್ನು ನೆನಪಿಸುವ ರೀತಿಯಲ್ಲಿ ಕೈ ಚಲನೆ ಮಾಡಿದ್ದರು. ಆಡಳಿತ ಪಕ್ಷದ ಸದಸ್ಯರು ಮೇಜು ತಟ್ಟುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದರು.
ನಟ ವಿಜಯ್-ಸಂಗೀತಾ ಡಿವೋರ್ಸ್ ಪ್ರಕರಣ; ವಿಚಾರಣೆ ಮುಂದೂಡಿದ ಕೋರ್ಟ್
ಸಭೆಯ ಹೊರಗೆ ಪ್ರತಿಕ್ರಿಯಿಸಿದ ಉದಯನಿಧಿ ಸ್ಟಾಲಿನ್, "ಟಿವಿಕೆ ವಿಧಾನಸಭೆಯನ್ನು ಸಿನಿಮಾ ಥಿಯೇಟರ್ ಆಗಿ ಮಾಡಿದೆ. ಮುಖ್ಯಮಂತ್ರಿ ಭಾಷಣ ಸಂಪೂರ್ಣವಾಗಿ ರೀಲ್ಸ್ ಮತ್ತು ಸಾಮಾಜಿಕ ಜಾಲತಾಣಕ್ಕಾಗಿ ಸಿದ್ಧಪಡಿಸಿದಂತಿತ್ತು. ಸ್ಪೀಕರ್ 'ಆ್ಯಕ್ಷನ್' ಮತ್ತು 'ಕಟ್' ಹೇಳುವಂತಿತ್ತು. ಮುಂದಿನ ಬಾರಿ ಕ್ಯಾರವಾನ್, ಮೇಕಪ್ ಕಲಾವಿದರು ಮತ್ತು ಸ್ಟಂಟ್ ಮಾಸ್ಟರ್ ಕೂಡ ಬರಬಹುದು" ಎಂದು ವ್ಯಂಗ್ಯವಾಡಿದರು. ಈ ಬೆಳವಣಿಗೆಗಳಿಂದ ತಮಿಳುನಾಡಿನ ರಾಜಕೀಯದಲ್ಲಿ ಆಡಳಿತ ಪಕ್ಷ ಮತ್ತು ಡಿಎಂಕೆ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ.