ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸರ್ಕಾರ ರಚನೆಯಾಗುತ್ತಿದ್ದಂತೆ ಆರಂಭವಾಯ್ತು ವಿಜಯ್-ಸ್ಟಾಲಿನ್‌ ಮಾತಿನ ಸಮರ: 10 ಲಕ್ಷ ಕೋಟಿ ರುಪಾಯಿ ಸಾಲದ ಪ್ರಸ್ತಾವಕ್ಕೆ ಮಾಜಿ ಸಿಎಂ ತಿರುಗೇಟು

MK Stalin criticize Vijay: ದ್ರಾವಿಡ ಮುನ್ನೇತ್ರ ಕಳಗಂ (DMK) ಮುಖ್ಯಸ್ಥ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ ನೂತನ ಸಿಎಂ ವಿಜಯ್ ಅವರನ್ನು ಟೀಕಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಭಾವುಕ ಭಾಷಣ ಮಾಡಿದ ವಿಜಯ್, ಡಿಎಂಕೆ ಸರ್ಕಾರವು ರಾಜ್ಯದ ಖಜಾನೆಯನ್ನು ಖಾಲಿ ಮಾಡಿದೆ ಎಂದಿದ್ದರು.

ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿರುದ್ಧ ಮಾಜಿ ಸಿಎಂ ಸ್ಟಾಲಿನ್ ಟೀಕೆ

ವಿಜಯ್‌ ಮತ್ತು ಸ್ಟಾಲಿನ್‌ (ಸಂಗ್ರಹ ಚಿತ್ರ) -

Priyanka P
Priyanka P May 10, 2026 6:30 PM

ಚೆನ್ನೈ, ಮೇ 10: ದ್ರಾವಿಡ ಮುನ್ನೇತ್ರ ಕಳಗಂ (DMK) ಮುಖ್ಯಸ್ಥ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (M.K. Stalin) ನೂತನ ಮುಖ್ಯಮಂತ್ರಿ ವಿಜಯ್ ಅವರನ್ನು ಟೀಕಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಭಾವುಕ ಭಾಷಣ ಮಾಡಿದ ವಿಜಯ್ (Vijay), ʼʼಡಿಎಂಕೆ ಸರ್ಕಾರವು ರಾಜ್ಯದ ಖಜಾನೆಯನ್ನು ಖಾಲಿ ಮಾಡಿದೆ. ನಾವು ಅಧಿಕಾರಕ್ಕೆ ಬಂದಾಗ ರಾಜ್ಯವು 10 ಲಕ್ಷ ಕೋಟಿ ರೂಪಾಯಿ ಸಾಲದ ಸುಳಿಯಲ್ಲಿದೆʼʼ ಎಂದು ಗಂಭೀರ ಆರೋಪ ಮಾಡಿದರು. ವಿಜಯ್ ಅವರ ಈ ಭಾಷಣಕ್ಕೆ ಕೇವಲ ಒಂದು ಗಂಟೆಯ ಒಳಗಾಗಿ ಪ್ರತಿಕ್ರಿಯಿಸಿದ ಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ತಕ್ಷಣವೇ ಪ್ರತಿಪಕ್ಷದ ನಾಯಕನ ಜವಾಬ್ದಾರಿಯನ್ನು ಹೊತ್ತುಕೊಂಡು ವಿಜಯ್ ಅವರ ಆರೋಪಗಳನ್ನು ಎದುರಿಸಲು ಸಜ್ಜಾದರು.

ʼʼರಾಜ್ಯದ ಸಾಲವು ಅನುಮತಿಸಲಾದ ಮಿತಿಯಲ್ಲಿದೆ. ವಿಜಯ್ ಅವರ ಹೇಳಿಕೆಗಳು ಅವರಿಗೆ ಮತ ಹಾಕಿದ ಜನರನ್ನು ನಿರಾಸೆಗೊಳಿಸಬಹುದುʼʼ ಎಂದು ಸ್ಟಾಲಿನ್ ಟೀಕಿಸಿದರು. ʼʼಈಗಲೇ ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳಲು ಶುರು ಮಾಡಬೇಡಿ. ಸರ್ಕಾರದ ಬಳಿ ಹಣವಿದೆ. ಆದರೆ ಅದನ್ನು ಜನರಿಗೆ ನೀಡುವ ಇಚ್ಛಾಶಕ್ತಿ ಮತ್ತು ಆಡಳಿತ ನಡೆಸುವ ಸಾಮರ್ಥ್ಯ ಇರಬೇಕಷ್ಟೆʼʼ ಎಂದು ಸ್ಟಾಲಿನ್ ಕಟುವಾಗಿ ಟೀಕಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಐದು ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿದ ವಿವಿಧ ಖರ್ಚುಗಳನ್ನು ಪಟ್ಟಿ ಮಾಡುವ ಮೂಲಕ ಅವರು ರಾಜ್ಯದ ಹಣಕಾಸು ನಿರ್ವಹಣೆಯನ್ನು ಸಮರ್ಥಿಸಿಕೊಂಡರು. ''5 ವರ್ಷಗಳ ಕಾಲ, ಕೋವಿಡ್ ಮತ್ತು ಪ್ರವಾಹಗಳಂತಹ ಹಲವು ಸಮಸ್ಯೆಗಳನ್ನು ಎದುರಿಸಿದ್ದರೂ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ಹೊರತಾಗಿಯೂ ನಾವು ಜನರಿಗೆ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದೇವೆʼʼ ಎಂದು ಅವರು ಬರೆದುಕೊಂಡಿದ್ದಾರೆ.

ಇಲ್ಲಿದೆ ಸ್ಟಾಲಿನ್ ಪೋಸ್ಟ್:



ʼʼವಿಜಯ್ ಸಮಸ್ಯೆಗಳಿಂದ ಜನರ ಗಮನ ಬೇರೆಡೆಗೆ ತಿರುಗುತ್ತಿದ್ದಾರೆ. ಆರ್ಥಿಕ ದುರುಪಯೋಗದ ಹಕ್ಕುಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆʼʼ ಎಂದು ಸ್ಟಾಲಿನ್ ಆರೋಪಿಸಿದ್ದಾರೆ. ʼʼರಾಜ್ಯದ ಹಣಕಾಸಿನ ಸ್ಥಿತಿಗತಿಯನ್ನು ಫೆಬ್ರವರಿಯ ಬಜೆಟ್ ಅಧಿವೇಶನದಲ್ಲೇ ಮಂಡಿಸಲಾಗಿತ್ತು. ಅದು ನಿಮಗೆ ತಿಳಿದಿರಲಿಲ್ಲವೇ? ಆ ಬಜೆಟ್ ಮಂಡನೆಯಾದ ನಂತರವೇ ತಾನೇ ನೀವು ಜನರಿಗೆ ಭರವಸೆಗಳನ್ನು ನೀಡಿದ್ದುʼʼ ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.

ವಿಜಯ ಸಂಪುಟದಲ್ಲಿರುವ ಸಚಿವರು ಯಾರು? ಅವರ ಹಿನ್ನೆಲೆಯೇನು ಗೊತ್ತಾ?

ʼʼಸಾಧ್ಯವಾಗುವ ಭರವಸೆಗಳನ್ನು ಮಾತ್ರ ನಾನು ನೀಡುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದ ನೀವು, ಈಗಷ್ಟೇ ಸರ್ಕಾರದ ಆಡಳಿತದೊಳಗೆ ಹೆಜ್ಜೆ ಇಡುತ್ತಿದ್ದೀರಿ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ತಂತ್ರಗಳು ಮತ್ತು ಸೂಕ್ಷ್ಮತೆಗಳನ್ನು ನಮ್ಮಂತೆಯೇ ನೀವು ಕೂಡ ಶೀಘ್ರದಲ್ಲೇ ಕಲಿಯುತ್ತೀರಿ ಎಂದು ನಂಬುವೆʼʼ ಎಂಬುದಾಗಿ ಸ್ಟಾಲಿನ್ ವ್ಯಂಗ್ಯವಾಡಿದ್ದಾರೆ. ʼʼನಿಮಗೆ ಮತ ನೀಡಿದ ಜನರಂತೆ, ನಾನೂ ಕೂಡ ನೀವು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೀರಿ ಎಂದು ನಿರೀಕ್ಷಿಸುತ್ತಿದ್ದೇನೆʼʼ ಎಂದಿದ್ದಾರೆ.

ತಮಿಳುನಾಡಿನ ಸಾಲವು 2016-17ರಲ್ಲಿ ಇದ್ದ 2.8 ಲಕ್ಷ ಕೋಟಿ ರುಪಾಯಿಯಿಂದ 2026-27ರಲ್ಲಿ 10.6 ಲಕ್ಷ ಕೋಟಿ ರುಪಾಯಿಗೆ ಏರಿದೆ.