ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯುಜಿಸಿ-ನೆಟ್ ಮತ್ತು ಐಸಿಎಆರ್ ಪರೀಕ್ಷಾರ್ಥಿಗಳ ಗಮನಕ್ಕೆ: ಈ ವಾರವೇ ಹೊರಬೀಳಲಿದೆ ಅಂತಿಮ ಫಲಿತಾಂಶ

UGC-NET, CSIR-NET, ICAR AIEEA PG ಮತ್ತು AICE PhD ಪರೀಕ್ಷೆಗಳ ಅಂತಿಮ ಫಲಿತಾಂಶ ಹಾಗೂ ಅಂತಿಮ ಉತ್ತರ ಕೀ ಬಿಡುಗಡೆಗೆ ಎನ್‌ಟಿಎ ಸಿದ್ಧತೆ ನಡೆಸಿದೆ. ಈ ವಾರವೇ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದ್ದು, ಅಭ್ಯರ್ಥಿಗಳು ಅಧಿಕೃತ ಎನ್‌ಟಿಎ ಜಾಲತಾಣದಲ್ಲೇ ಫಲಿತಾಂಶ ಪರಿಶೀಲಿಸುವಂತೆ ಸೂಚಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅನಧಿಕೃತ ಮಾಹಿತಿ ಮತ್ತು ವದಂತಿಗಳನ್ನು ನಂಬದಂತೆ ಎಚ್ಚರಿಕೆ ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಆ. 26: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (National Testing Agency) ದೇಶಾದ್ಯಂತ ಯಶಸ್ವಿಯಾಗಿ ನಡೆಸಿದ ಪ್ರಮುಖ ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳ ಅಂತಿಮ ಫಲಿತಾಂಶ ಹಾಗೂ ಉತ್ತರ ಕೀ ಬಿಡುಗಡೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಯುಜಿಸಿ-ನೆಟ್ (UGC-NET) ಅಡಿಯಲ್ಲಿ ನಡೆದ 84 ವಿಷಯಗಳ ಪರೀಕ್ಷೆಗಳು, ವಿಜ್ಞಾನ ಮತ್ತು ಸಂಶೋಧನಾ ವಿಭಾಗದ ಸಿಎಸ್‌ಐಆರ್-ನೆಟ್ (CSIR-NET) ಹಾಗೂ ಕೃಷಿ ಕ್ಷೇತ್ರದ ಐಸಿಎಆರ್ ಎಐಇಇಎ ಸ್ನಾತಕೋತ್ತರ (ICAR AIEEA PG) ಮತ್ತು ಎಐಸಿಇ ಪಿಎಚ್‌ಡಿ (AICE PhD) ಪ್ರವೇಶ ಪರೀಕ್ಷೆಗಳನ್ನು ಬರೆದು ಕಾತರದಿಂದ ಕಾಯುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಈ ವಾರವೇ ಫಲಿತಾಂಶ ದೊರೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅರ್ಹತೆ, ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) ಪಡೆಯಲು ಹಾಗೂ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪಿಎಚ್‌ಡಿ ಪ್ರವೇಶಕ್ಕಾಗಿ ಈ ಪರೀಕ್ಷೆಗಳು ಅತ್ಯಂತ ಪ್ರಮುಖ ಮಾನದಂಡ. ಈ ಎಲ್ಲ ಪರೀಕ್ಷೆಗಳ ಪ್ರಾಥಮಿಕ ಉತ್ತರ ಕೀಗಳ ಮೇಲಿನ ಆಕ್ಷೇಪಣೆಗಳನ್ನು ತಜ್ಞರ ಸಮಿತಿಯು ಕೂಲಂಕಷವಾಗಿ ಪರಿಶೀಲಿಸಿದ್ದು, ಅಂತಿಮ ಮೌಲ್ಯಮಾಪನ ಪ್ರಕ್ರಿಯೆಯು ಮುಕ್ತಾಯ ಹಂತದಲ್ಲಿದೆ.

ಯುಜಿಸಿ-ನೆಟ್‌ ಮರುಪರೀಕ್ಷೆ: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಬೇಡ, ಕೇಂದ್ರದ ವಿರುದ್ಧ ರಾಹುಲ್‌ ಕಿಡಿ

ಹೀಗಾಗಿ ಅಂತಿಮ ಉತ್ತರ ಕೀ ಮತ್ತು ಸ್ಕೋರ್‌ಕಾರ್ಡ್‌ಗಳು ಎನ್‌ಟಿಎ ಪೋರ್ಟಲ್‌ನಲ್ಲಿ ಹಂತ-ಹಂತವಾಗಿ ಹೊರ ಬರಲಿದೆ. ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಸುಲಭವಾಗಿ ಪರಿಶೀಲಿಸಲು ಎನ್‌ಟಿಎ ಅಧಿಕೃತ ವೆಬ್‌ಸೈಟ್‌ಗಳಿಗೆ ಚೆಕ್ ಮಾಡಬಹುದು. ಮುಖಪುಟದಲ್ಲಿ ಲಭ್ಯವಿರುವ ಆಯಾ ಪರೀಕ್ಷೆಯ ಫಲಿತಾಂಶ ಲಿಂಕ್ ಅನ್ನು ಆಯ್ಕೆ ಮಾಡಿ, ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗಿನ್ ಆಗಬಹುದು. ಲಾಗಿನ್ ಆದ ನಂತರ ತಮ್ಮ ಅಂಕಪಟ್ಟಿ ಹಾಗೂ ಅರ್ಹತಾ ವಿವರಗಳನ್ನು ವೀಕ್ಷಿಸಿ, ಮುಂದಿನ ಉದ್ಯೋಗ ಅಥವಾ ಸಂಶೋಧನಾ ಪ್ರವೇಶ ಪ್ರಕ್ರಿಯೆಗಳಿಗಾಗಿ ಪಿಡಿಎಫ್ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿವಿಧ ಅನಧಿಕೃತ ವೇದಿಕೆಗಳಲ್ಲಿ ಫಲಿತಾಂಶದ ದಿನಾಂಕ ಮತ್ತು ಕಟ್-ಆಫ್ ಅಂಕಗಳ ಬಗ್ಗೆ ತಪ್ಪು ಮಾಹಿತಿ ಮತ್ತು ವದಂತಿಗಳು ಹರಿದಾಡುತ್ತಿದ್ದು, ಅಭ್ಯರ್ಥಿಗಳು ಇವುಗಳಿಗೆ ಕಿವಿಗೊಡಬಾರದು ಎಂದು ಪರೀಕ್ಷಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಕೇವಲ ಎನ್‌ಟಿಎ ಅಧಿಕೃತ ಜಾಲತಾಣಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನೇ ಅಧಿಕೃತವೆಂದು ಪರಿಗಣಿಸಬೇಕು ಹಾಗೂ ಯಾವುದೇ ಗೊಂದಲಗಳಿದ್ದಲ್ಲಿ ಅಧಿಕೃತ ಮಾಹಿತಿಯನ್ನೇ ಅವಲಂಬಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಫಲಿತಾಂಶ ಪರಿಶೀಲನೆ ವೇಳೆ ಯಾವುದೇ ರೀತಿಯ ತಾಂತ್ರಿಕ ದೋಷಗಳು ಅಥವಾ ಅಂಕಪಟ್ಟಿಯಲ್ಲಿ ವ್ಯತ್ಯಾಸಗಳು ಕಂಡುಬಂದಲ್ಲಿ, ಅಭ್ಯರ್ಥಿಗಳು ಎನ್‌ಟಿಎ ಒದಗಿಸಿರುವ ಅಧಿಕೃತ ಇಮೇಲ್ ಅಥವಾ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಎಲ್ಲ ಅಭ್ಯರ್ಥಿಗಳು ಅಧಿಕೃತ ಪೋರ್ಟಲ್‌ಗಳನ್ನು (nta.ac.in ಹಾಗೂ ugcnet.nta.ac.in) ನಿರಂತರವಾಗಿ ಗಮನಿಸುತ್ತಿರಲು ಸೂಚಿಸಲಾಗಿದೆ.