ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಚ್ಚಿ ಬೀಳಿಸುವ ಘಟನೆ: ಉಜ್ಜಯಿನಿ ಆಶ್ರಮದಲ್ಲಿ 14 ತಿಂಗಳಲ್ಲಿ 17 ವಿಶೇಷ ಚೇತನ ಮಕ್ಕಳ ಸಾವು, ಹೈಕೋರ್ಟ್ ಮಧ್ಯ ಪ್ರವೇಶ

ಮಧ್ಯ ಪ್ರದೇಶದ ಉಜ್ಜಯಿನಿಯ ಅಂಕಿತ್ ಸೇವಾಧಾಮ ಆಶ್ರಮದಲ್ಲಿ ಕಳೆದ 14 ತಿಂಗಳಲ್ಲಿ 17 ವಿಶೇಷ ಚೇತನ ಮಕ್ಕಳು ಸಾವನ್ನಪ್ಪಿರುವ ಘಟನೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ಮಧ್ಯ ಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು, ರಾಜ್ಯದ ಹಿರಿಯ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಅಂಕಿತ್ ಸೇವಾಧಾಮ ಆಶ್ರಮ

ಭೋಪಾಲ್‌, ಫೆ. 27: ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರುವ 'ಅಂಕಿತ್ ಸೇವಾಧಾಮ' ಆಶ್ರಮದಲ್ಲಿ (Ankit Sewadham Ashram) 14 ತಿಂಗಳಲ್ಲಿ ಬರೋಬ್ಬರಿ 17 ವಿಶೇಷ ಚೇತನ ಮಕ್ಕಳು ಸಾವನ್ನಪ್ಪಿರುವ ಘೋರ ಘಟನೆ ಬೆಳಕಿಗೆ ಬಂದಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯ ಪ್ರದೇಶ ಹೈಕೋರ್ಟ್‌ನ (Madhya Pradesh High Court) ಇಂದೋರ್ (Indore) ಪೀಠವು ಸ್ವಯಂಪ್ರೇರಿತವಾಗಿ (Suo Motu) ಪ್ರಕರಣ ದಾಖಲಿಸಿಕೊಂಡಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿ (Chief Secretary), ಉಜ್ಜಯಿನಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸೇರಿ ಹಿರಿಯ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಈ ಆಘಾತಕಾರಿ ಘಟನೆಯ ಹಿನ್ನೆಲೆಯು 2024ರ ಜೂನ್ ಮತ್ತು ಜುಲೈ ಅವಧಿಯಲ್ಲಿ ಇಂದೋರ್‌ನ 'ಯುಗ ಪುರುಷ' ಆಶ್ರಮದಲ್ಲಿ ಆರಂಭವಾಗಿತ್ತು. ಅಲ್ಲಿ 10 ಮಕ್ಕಳು ಸಾವನ್ನಪ್ಪಿ, 60ಕ್ಕೂ ಹೆಚ್ಚು ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರು. ಆ ಸಮಯದಲ್ಲಿ ತನಿಖೆ ನಡೆಸಿದ್ದ ಜಿಲ್ಲಾಡಳಿತವು, ಮಕ್ಕಳು ತೀವ್ರ ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಪತ್ತೆಹಚ್ಚಿತ್ತು. ಪರಿಣಾಮವಾಗಿ, ಅಂದಿನ ಇಂದೋರ್ ಕಲೆಕ್ಟರ್ ಆಶಿಷ್ ಸಿಂಗ್ ಆ ಆಶ್ರಮದ ಮಾನ್ಯತೆಯನ್ನು ರದ್ದುಗೊಳಿಸಿ, ಅಲ್ಲಿನ 86 ವಿಶೇಷ ಚೇತನ ಮಕ್ಕಳನ್ನು 2024ರ ಡಿಸೆಂಬರ್ 25ರಂದು ಉಜ್ಜಯಿನಿಯ ಸೇವಾಧಾಮ ಆಶ್ರಮಕ್ಕೆ ಸ್ಥಳಾಂತರಿಸಲು ಆದೇಶಿಸಿದ್ದರು.

ಇವರು ʼಭಕ್ತʼ ಕಳ್ಳರು; ದೇವರಿಗೆ ಕೈ ಮುಗಿದು ಕಾಣಿಕೆ ಪೆಟ್ಟಿಗೆ ಹೊತ್ತೊಯ್ದ ಖದೀಮರು

ಆದರೆ ಸುರಕ್ಷಿತ ಸ್ಥಳಾಂತರದ ನಂತರವೂ ಮಕ್ಕಳ ಸಾವು ಮುಂದುವರಿದಿರುವುದು ಈಗ ದೊಡ್ಡ ಆತಂಕಕ್ಕೆ ಕಾರಣವಾಗಿದೆ. 14 ತಿಂಗಳಲ್ಲಿ ಸಾವನ್ನಪ್ಪಿದ 17 ಮಕ್ಕಳ ವಯಸ್ಸು 10ರಿಂದ 18 ವರ್ಷಗಳ ನಡುವೆ ಇದೆ. ಚಿಕಿತ್ಸೆ ನೀಡಿದ ವೈದ್ಯರ ಪ್ರಕಾರ, ಆಸ್ಪತ್ರೆಗೆ ಕರೆತಂದಾಗ ಮಕ್ಕಳ ಸ್ಥಿತಿ ತೀರಾ ಹದಗೆಟ್ಟಿತ್ತು. ಅನೇಕರು ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದರು ಮತ್ತು ಕೆಲವರು ಆಸ್ಪತ್ರೆಗೆ ತಲುಪುವ ಮೊದಲೇ ಸಾವನ್ನಪ್ಪಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೇವಾಧಾಮ ಆಶ್ರಮದ ನಿರ್ದೇಶಕ ಸುಧೀರ್ ಭಾಯ್ ಗೋಯಲ್, ಇಂದೋರ್‌ನಿಂದ ಸ್ಥಳಾಂತರಗೊಂಡ ಹೆಚ್ಚಿನ ಮಕ್ಕಳು ನಡೆಯಲು ಅಥವಾ ನಿಲ್ಲಲು ಅಶಕ್ತರಾಗಿದ್ದರು ಮತ್ತು ಮೊದಲೇ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು ಎಂದು ಹೇಳಿದ್ದಾರೆ. ಪ್ರಸ್ತುತ ಆಶ್ರಮದಲ್ಲಿ ಇನ್ನೂ 250ಕ್ಕೂ ಹೆಚ್ಚು ಅನಾಥ ಮತ್ತು ವಿಶೇಷ ಚೇತನ ಮಕ್ಕಳಿದ್ದು, ಅವರಲ್ಲಿ 50ಕ್ಕೂ ಹೆಚ್ಚು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸದ್ಯ ಆಶ್ರಮವನ್ನು ಮುಚ್ಚಲಾಗಿದ್ದು, ಹೈಕೋರ್ಟ್ ಎರಡು ವಾರಗಳಲ್ಲಿ ಸಮಗ್ರ ತನಿಖಾ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.