ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೈತರ ಲಾಭ ಹೆಚ್ಚಿಸಲು 14 ಬೆಳೆಗಳ ಕನಿಷ್ಠ ಬೆಂಬಲ ಹೆಚ್ಚಳಕ್ಕೆ ಕೇಂದ್ರ ಅನುಮೋದನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (CCEA) ಸಭೆಯಲ್ಲಿ 2026-27ರ ಖರೀಫ್ ಹಂಗಾಮಿಗಾಗಿ 14 ಪ್ರಮುಖ ಬೆಳೆಗಳ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಭತ್ತ, ಹತ್ತಿ, ತೊಗರಿ, ಉದ್ದಿನ ಬೇಳೆ, ಹೆಸರುಬೇಳೆ, ಜೋಳ, ಸಜ್ಜೆ, ರಾಗಿ ಹಾಗೂ ವಿವಿಧ ಎಣ್ಣೆಬೀಜ ಬೆಳೆಗಳಿಗೆ ಹೆಚ್ಚಿದ ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ (Union Cabinet Meeting) ದೇಶದ ರೈತರಿಗೆ ಮಹತ್ವದ ಘೋಷಣೆ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (CCEA) 2026-27ನೇ ಸಾಲಿನ ಖರೀಫ್ ಹಂಗಾಮಿಗಾಗಿ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಿಸಲು ಅನುಮೋದನೆ ನೀಡಿದೆ. ಭತ್ತ, ಹತ್ತಿ, ತೊಗರಿ, ಜೋಳ, ಎಣ್ಣೆ ಬೀಜಗಳು ಸೇರಿದಂತೆ ಪ್ರಮುಖ ಬೆಳೆಗಳಿಗೆ ಈ ಹೆಚ್ಚಳ ಅನ್ವಯವಾಗಲಿದೆ.

ಕೇಂದ್ರ ಸರ್ಕಾರದ ಈ ಕ್ರಮದ ಮುಖ್ಯ ಉದ್ದೇಶ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು ಹಾಗೂ ರೈತರನ್ನು ಬೆಳೆ ವೈವಿಧ್ಯೀಕರಣದತ್ತ ಉತ್ತೇಜಿಸುವುದಾಗಿದೆ. ವಿಶೇಷವಾಗಿ ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಮತ್ತು ಹತ್ತಿ ಬೆಳೆಗಳಿಗೆ ಹೆಚ್ಚು ಪ್ರಮಾಣದಲ್ಲಿ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ.

2026-27ರ ಖರೀಫ್ ಹಂಗಾಮಿನಿಂದ ಸಾಮಾನ್ಯ ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 72 ರೂಪಾಯಿ ಹೆಚ್ಚಿಸಿ 2,441 ರೂಪಾಯಿಗೆ ನಿಗದಿಪಡಿಸಲಾಗಿದೆ. ಎ ದರ್ಜೆಯ ಭತ್ತಕ್ಕೆ 2,461 ರೂಪಾಯಿ ಕನಿಷ್ಠ ಬೆಂಬಲ ಬೆಲೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ.

ಹತ್ತಿಗೆ ಪ್ರತಿ ಕ್ವಿಂಟಲ್‌ಗೆ 557 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಇದರೊಂದಿಗೆ ಸಾಮಾನ್ಯ ಹತ್ತಿಯ ಕನಿಷ್ಠ ಬೆಂಬಲ ಬೆಲೆ 8,267 ರೂಪಾಯಿ ಹಾಗೂ ಉತ್ತಮ ತಳಿಯ ಹತ್ತಿಗೆ 8,667 ರೂಪಾಯಿ ಆಗಿದೆ. ಇದು ಈ ಬಾರಿ ಘೋಷಿಸಲಾದ ಬೆಳೆಗಳ ಪೈಕಿ ಎರಡನೇ ಅತಿ ಹೆಚ್ಚು ಏರಿಕೆಯಾಗಿದೆ.

ಸೂರ್ಯಕಾಂತಿ ಬೀಜದ ಕನಿಷ್ಠ ಬೆಂಬಲ ಬೆಲೆ ಕ್ವಿಂಟಲ್‌ಗೆ 622 ರೂಪಾಯಿ ಏರಿಕೆಯಾಗಿ 8,343 ರೂಪಾಯಿಗೆ ತಲುಪಿದೆ. ನೈಜರ್‌ಸೀಡ್‌ಗೆ 515 ರೂಪಾಯಿ ಹೆಚ್ಚಳವಾಗಿದ್ದು, ಅದರ ಬೆಲೆ 10,052 ರೂಪಾಯಿಗೆ ಏರಿದೆ. ಎಳ್ಳಿನ ಕನಿಷ್ಠ ಬೆಂಬಲ ಬೆಲೆ 500 ರೂಪಾಯಿ ಹೆಚ್ಚಳದೊಂದಿಗೆ 10,346 ರೂಪಾಯಿಗೆ ನಿಗದಿಯಾಗಿದೆ.



ಎಣ್ಣೆಕಾಳುಗಳಲ್ಲಿ ಸೋಯಾಬೀನ್‌ (ಹಳದಿ) ಕನಿಷ್ಠ ಬೆಂಬಲ ಬೆಲೆ 380 ರೂಪಾಯಿ ಏರಿಕೆಯಾಗಿ 5,708 ರೂಪಾಯಿ ಆಗಿದ್ದು, ನೆಲಗಡಲೆ ಬೆಂಬಲ ಬೆಲೆ 254 ರೂಪಾಯಿ ಹೆಚ್ಚಳದೊಂದಿಗೆ 7,517 ರೂಪಾಯಿಗೆ ತಲುಪಿದೆ.

ದ್ವಿದಳ ಧಾನ್ಯಗಳಲ್ಲಿ ತೊಗರಿಗೆ 450 ರೂಪಾಯಿ ಹೆಚ್ಚಳ ಮಾಡಿ 8,450 ರೂಪಾಯಿ ನಿಗದಿ ಮಾಡಲಾಗಿದೆ. ಉದ್ದಿನ ಬೇಳೆಗೆ 400 ರೂಪಾಯಿ ಹೆಚ್ಚಳದೊಂದಿಗೆ 8,200 ರೂಪಾಯಿ ಕನಿಷ್ಠ ಬೆಂಬಲ ಬೆಲೆ ಸಿಗಲಿದ್ದು, ಹೆಸರುಬೇಳೆಗೆ 12 ರೂಪಾಯಿ ಹೆಚ್ಚಳದೊಂದಿಗೆ 8,780 ರೂಪಾಯಿ ಕನಿಷ್ಠ ಬೆಂಬಲ ಬೆಲೆ ಲಭ್ಯವಾಗಲಿದೆ.

ಇನ್ನೂ, ಜೋಳ (ಹೈಬ್ರಿಡ್) ಕನಿಷ್ಠ ಬೆಂಬಲ ಬೆಲೆ 324 ರೂಪಾಯಿ ಹೆಚ್ಚಳದೊಂದಿಗೆ 4,023 ರೂಪಾಯಿಗೆ ಏರಿಕೆಯಾಗಿದೆ. ಮಾಲ್ದಂಡಿ ತಳಿಯ ಜೋಳಕ್ಕೆ 4,073 ರೂಪಾಯಿ ನಿಗದಿ ಮಾಡಲಾಗಿದೆ. ಸಜ್ಜೆಗೆ 125 ರೂಪಾಯಿ ಹೆಚ್ಚಳವಾಗಿದ್ದು, ಕನಿಷ್ಠ ಬೆಂಬಲ ಬೆಲೆ 2,900 ರೂಪಾಯಿ ಆಗಿದೆ. ರಾಗಿಗೆ 319 ರೂಪಾಯಿ ಹೆಚ್ಚಿಸಿ 5,205 ರೂಪಾಯಿ ಹಾಗೂ ಮೆಕ್ಕೆಜೋಳಕ್ಕೆ 10 ರೂಪಾಯಿ ಹೆಚ್ಚಿಸಿ 2,410 ರೂಪಾಯಿ ನಿಗದಿ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಅಶ್ವಿನಿ ವೈಷ್ಣವ್, ರೈತರಿಗೆ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಶೇಕಡಾ ಲಾಭ ದೊರೆಯುವಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೆಸರುಕಾಳಿಗೆ 61%, ಸಜ್ಜೆ ಮತ್ತು ಮೆಕ್ಕೆಜೋಳಕ್ಕೆ 56% ಹಾಗೂ ತೊಗರಿಗೆ 54% ಲಾಭ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಉಳಿದ ಬೆಳೆಗಳಿಗೂ ಕನಿಷ್ಠ 50% ಲಾಭ ಖಚಿತಪಡಿಸುವ ಉದ್ದೇಶದಿಂದ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ. ರೈತರ ಬೆಳೆ ಖರೀದಿಗಾಗಿ ಒಟ್ಟು 2.60 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ವಾರ್ಷಿಕ ಸಂಗ್ರಹಣೆ 824.41 ಲಕ್ಷ ಟನ್ ಆಗಲಿದೆ ಎಂದು ಸರ್ಕಾರ ಅಂದಾಜಿಸಿದೆ.