ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಗೋಧಿ ಸಂಗ್ರಹ ಕುರಿತು ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಜತೆ ಸಚಿವ ಪ್ರಲ್ಹಾದ್‌ ಜೋಶಿ ಪರಿಶೀಲನಾ ಸಭೆ

Pralhad Joshi: ಕೇಂದ್ರ ಸರ್ಕಾರ 2025-26ರ ರಬಿ ಮಾರುಕಟ್ಟೆ ಋತುವಿನಲ್ಲಿ ವಿವಿಧ ರಾಜ್ಯಗಳಿಂದ 31 ಮೆಟ್ರಿಕ್‌ ಟನ್‌ ಗೋಧಿ ಸಂಗ್ರಹ ನಿರೀಕ್ಷಿಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಅವರು ಇಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಗೋಧಿ ಸಂಗ್ರಹ: ಯೋಗಿ ಆದಿತ್ಯನಾಥ್‌ ಜತೆ ಪ್ರಲ್ಹಾದ್‌ ಜೋಶಿ ಪರಿಶೀಲನಾ ಸಭೆ

Profile Siddalinga Swamy Apr 10, 2025 7:52 PM

ನವದೆಹಲಿ: ಕೇಂದ್ರ ಸರ್ಕಾರ 2025-26ರ ರಬಿ ಮಾರುಕಟ್ಟೆ ಋತುವಿನಲ್ಲಿ ವಿವಿಧ ರಾಜ್ಯಗಳಿಂದ 31 ಮೆಟ್ರಿಕ್‌ ಟನ್‌ ಗೋಧಿ ಸಂಗ್ರಹ ನಿರೀಕ್ಷಿಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರು ಇಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಅವರೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ. ಬುಧವಾರ ಬೆಳಗ್ಗೆ, ಸಿಎಂ ಯೋಗಿ ಆದಿತ್ಯನಾಥ್‌ ಅವರ ಸಮ್ಮುಖದಲ್ಲಿ ಉತ್ತರ ಪ್ರದೇಶ ಸರ್ಕಾರದೊಂದಿಗೆ ಪರಿಶೀಲನಾ ಸಭೆ ನಡೆಸಿದ ಕೇಂದ್ರ ಸಚಿವರು, ಯುಪಿಯಲ್ಲಿ ಪ್ರಸ್ತುತ ಗೋಧಿ ದಾಸ್ತಾನು, ಸಂಗ್ರಹ ಕುರಿತು ಮಾಹಿತಿ ಪಡೆದುಕೊಂಡರು. ಉತ್ತರ ಪ್ರದೇಶ ಸರ್ಕಾರ ಏಪ್ರಿಲ್‌ ಮೊದಲ ವಾರದಲ್ಲಿ 1 ಲಕ್ಷ ಟನ್ ಗೋಧಿ ಸಂಗ್ರಹಿಸಿದ ಬಗ್ಗೆ ಶ್ಲಾಘಿಸಿದರು.

ಗೋಧಿ ಉತ್ಪಾದನೆಯಲ್ಲಿ ಉತ್ತರ ಪ್ರದೇಶ ಮುಂದಿದ್ದು, ಹೆಚ್ಚಿನ ಮಟ್ಟದಲ್ಲಿ ಗೋಧಿ ಸಂಗ್ರಹಿಸಬೇಕೆಂದು ಸಲಹೆ-ಸೂಚನೆ ನೀಡಿದ ಸಚಿವ ಜೋಶಿ ಅವರು, ಕೇಂದ್ರ ಸರ್ಕಾರ ಈ ಬಾರಿ ವಿವಿಧ ಏಜಿನ್ಸಿಗಳಿಂದ ಏಪ್ರಿಲ್-ಜೂನ್ ಅವಧಿಯಲ್ಲಿ 31 MT ಗೋಧಿ ಸಂಗ್ರಹವನ್ನು ಅಂದಾಜಿಸಿದೆ. ಇದಕ್ಕೆ ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯಗಳು ಕೊಡುಗೆ ನೀಡಬೇಕು ಎಂದು ಹೇಳಿದರು.

2025-26ರ ರಬಿ ಮಾರುಕಟ್ಟೆ ಋತುವಿನಲ್ಲಿ (ಏಪ್ರಿಲ್-ಜೂನ್) 31 MT ಗೋಧಿ ಸಂಗ್ರಹವನ್ನು ಅಂದಾಜಿಸಿದ್ದು, ಇದು 2024-25ರ ಹಂಗಾಮಿನ 26.6 MT ಗಿಂತ ಶೇ.26ರಷ್ಟು ಹೆಚ್ಚಾಗಿದೆ. ಪ್ರಸ್ತುತ, ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (FCI) ಏಪ್ರಿಲ್ 1ಕ್ಕೆ 7.46 MT ಬಫರ್ ವಿರುದ್ಧ 13.55 MT ಗೋಧಿ ದಾಸ್ತಾನು ಹೊಂದಿದೆ ಎಂದು ತಿಳಿಸಿದರು.

ಇದೇ ವೇಳೆ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಮಾತನಾಡಿ, ಉತ್ತರ ಪ್ರದೇಶ ಸರ್ಕಾರ ಗೋಧಿ ಸಂಗ್ರಹಕ್ಕೆ ಅಗತ್ಯ ಕ್ರಮ ಕೈಗೊಂಡಿದೆ. 5,780 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಅಧಿಕಾರಿಗಳ ಪ್ರಕಾರ 20,409 ರೈತರು ಇಲ್ಲಿ ಗೋಧಿ ಮಾರಾಟ ಮಾಡಿದ್ದಾರೆ ಎಂದರು. ಖರೀದಿ ಕೇಂದ್ರಗಳಲ್ಲಿ ರೈತರು 100 ಕ್ವಿಂಟಾಲ್‌ವರೆಗೆ ಗೋಧಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ, ರಜಾ ದಿನಗಳಲ್ಲಿಯೂ ಖರೀದಿ ಕೇಂದ್ರಗಳನ್ನು ತೆರೆದಿಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಸಚಿವ ಜೋಶಿ ಅವರು ಉತ್ತರ ಪ್ರದೇಶದಲ್ಲಿ ಪಿಎಂ ಕುಸುಮ್ ಮತ್ತು ಪಿಎಂ ಸೂರ್ಯ ಘರ್ ಯೋಜನೆ ಪ್ರಗತಿ ಬಗ್ಗೆಯೂ ಚರ್ಚೆ ನಡೆಸಿದರು. ನಮ್ಮ ರಾಜ್ಯದ ಜನಸಾಮಾನ್ಯರಿಗೆ ಕಡಿಮೆ ವೆಚ್ಚದ ಸೌರಶಕ್ತಿ ಅನುಷ್ಠಾನವನ್ನು ಖಚಿತಪಡಿಸಲಾಗಿದೆ. ಉತ್ತರ ಪ್ರದೇಶ 2027ರ ವೇಳೆಗೆ 22 ಸಾವಿರ ಮೆಗಾವ್ಯಾಟ್‌ಗಿಂತ ಹೆಚ್ಚಿನ ಸೌರ ವಿದ್ಯುತ್‌ ಉತ್ಪಾದನೆ ಗುರಿ ಹೊಂದಿದೆ. ಅಲ್ಲದೇ, ಪಿಎಂ ಸೂರ್ಯ ಘರ್ ಯೋಜನೆಯಡಿ ಸ್ವೀಕರಿಸಿದ ಅರ್ಜಿಗಳಿಗೆ ಅಭಿಯಾನ ನಡೆಸುವ ಮೂಲಕ ಸೌರ ಫಲಕಗಳನ್ನು ವಿತರಿಸಲು ನಿರ್ದೇಶನ ನೀಡಲಾಗಿದೆ ಎಂದು ಅವರು ಸಚಿವರ ಗಮನ ಸೆಳೆದರು.

ಈ ಸುದ್ದಿಯನ್ನೂ ಓದಿ | V.Somanna: ರೈಲ್ವೆ ಯೋಜನೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರದಿಂದ 2 ಸಾವಿರ ಕೋಟಿ ರೂ. ಅನುದಾನ; ವಿ.ಸೋಮಣ್ಣ

ಸೂರ್ಯ ಘರ್‌ ಫಲಾನುಭವಿಗಳ ಭೇಟಿ

ಇದೇ ಸಂದರ್ಭದಲ್ಲಿ ಸಚಿವ ಜೋಶಿ ಅವರು ಲಖ್ನೋದಲ್ಲಿ ಸೂರ್ಯ ಘರ್‌ ಯೋಜನೆಯಡಿ ಅಳವಡಿಸಿದ ಸೌರ ಸ್ಥಾವರ, ಮೇಲ್ಛಾವಣಿ ಘಟಕಗಳನ್ನು ವೀಕ್ಷಿಸಿದರು. ಸೂರ್ಯ ಘರ್‌ ಫಲಾನುಭವಿ ಉಮೇಶ ರಾವತ್‌ ಎಂಬುವರು, ₹̇1.80 ಲಕ್ಷ ವೆಚ್ಚದಲ್ಲಿ ಸೌರ ಮೇಲ್ಛಾವಣಿ ಅಳವಡಿಸಿಕೊಂಡಿದ್ದು, ಸರ್ಕಾರದಿಂದ ₹̇1.08 ಲಕ್ಷ ಸಬ್ಸಿಡಿ ಬಂದಿದೆ. ಈ ಯೋಜನೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಮೊದಲು ₹2000, ₹ 3000 ವಿದ್ಯುತ್‌ ಬಿಲ್‌ ಭರಿಸುತ್ತಿದ್ದೆ. ಇದೀಗ ಕೇವಲ ₹ 150-200ಕ್ಕೆ ಇಳಿದಿದೆ ಎಂದು ಸಂತಸ ಹಂಚಿಕೊಂಡರು.