ಅಸ್ಸಾಂ: ಭೀಕರ ಪ್ರವಾಹದಲ್ಲಿ (Flood) ಸಿಲುಕಿದ್ದ ಸುಮಾರು 2,000 ಹೆಚ್ಚು ಜನರನ್ನು ರಕ್ಷಿಸಿರುವ ಈತ ಈಗ ಹೀರೋ ಎನಿಸಿಕೊಂಡಿದ್ದಾನೆ. ತರಬೇತಿ ಪಡೆದಿಲ್ಲ, ಮೋಟಾರು ದೋಣಿ ಹೊಂದಿಲ್ಲ.. ಆದರೂ ಅಸ್ಸಾಂ ಪ್ರವಾಹದ (Assam Floods) ಸಂತ್ರಸ್ತರ (flood victims) ರಕ್ಷಣೆ ಕಾರ್ಯದಲ್ಲಿ (rescue opperation) ಮುಂಚೂಣಿಯಲ್ಲಿ ನಿಂತು ಮಾನವೀಯ ಧರ್ಮದ ಪರಿಚಯ ಮಾಡಿಕೊಟ್ಟಿದ್ದಾನೆ ಶ್ರವಣ್ ಕುಮಾರ್. 10ನೇ ತರಗತಿಯಲ್ಲಿ ಶಾಲೆ ಬಿಟ್ಟ ಬಳಿಕ ಈತ ತನ್ನ ಮತ್ತು ಕುಟುಂಬದ ಹೊಟ್ಟೆ ಪಾಡಿಗಾಗಿ ಉರುವಲು ಸಂಗ್ರಹ ಕೆಲಸವನ್ನು ಮಾಡಿಕೊಂಡು ಬಂದಿದ್ದಾನೆ.
ಮಳೆಗಾಲದಲ್ಲಿ ಬಿಹುಬೋರ್‌ನ ಡಿಖೋವ್ ನದಿಯ ಕೆಳಭಾಗಕ್ಕೆ ತೇಲಿಕೊಂಡು ಬರುವ ಮರದ ದಿಮ್ಮಿಗಳನ್ನು ಸಂಗ್ರಹಿಸಲೆಂದು ಜುಲೈ 19 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಶ್ರವಣ್ ಕುಮಾರ್ ಹೋಗಿದ್ದಾನೆ. ಆಗ ಆತನಿಗೆ ಮುಂದೆ ತಾನು ರಕ್ಷಣಾ ಕಾರ್ಯಾಚರಣೆ ತಂಡದ ಭಾಗವಾಗುತ್ತೇನೆ ಎಂಬ ಅರಿವು ಕೂಡ ಇರಲಿಲ್ಲ.
ನದಿ ವರ್ತನೆಯಲ್ಲಿ ಆಗಿರುವ ಬದಲಾವಣೆಯನ್ನು ಗುರುತಿಸಿ ಶ್ರವಣ್ ಕುಮಾರ್ ತಕ್ಷಣವೇ ಅಪಾಯವನ್ನು ಅರಿತುಕೊಂಡನು. ಸೂರ್ಯೋದಯಕ್ಕೂ ಮುಂಚಿತವಾಗಿ ಪ್ರವಾಹ ನೀರು ನೆರೆಹೊರೆಯ ಪ್ರದೇಶವನ್ನು ಮುಳುಗಿಸಲು ಪ್ರಾರಂಭಿಸಿದಾಗ ಅವನು ತನ್ನ ತಾಯಿ ಮತ್ತು ಸಹೋದರರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ. ಆದರೆ ತನ್ನ ಕುಟುಂಬದಂತೆ ಇನ್ನು ಅನೇಕ ಕುಟುಂಬಗಳು ಸಂಕಷ್ಟದಲ್ಲಿರುವುದನ್ನು ಮನಗಂಡು ಆತ ಇತರರ ಸಹಾಯಕ್ಕೆಂದು ಮರಳಿದ. ಯಾವುದೇ ರಕ್ಷಣಾ ತರಬೇತಿ ಪಡೆಯದೇ ಇದ್ದರೂ, ಮೋಟಾರು ದೋಣಿ ಹೊಂದಿಲ್ಲದಿದ್ದರೂ ಕೂಡ ನದಿಯ ವರ್ತನೆ, ಸ್ಥಳೀಯ ಪ್ರದೇಶದ ಬಗ್ಗೆ ಅರಿತಿದ್ದರಿಂದ ತನ್ನ ಸ್ನೇಹಿತರನ್ನು ಕೂಡಿಸಿಕೊಂಡು ಸ್ಥಳೀಯರ ರಕ್ಷಣೆಗೆ ಧಾವಿಸಿದನು. ಅನುಭವಿ ದೋಣಿ ಚಲಾಯಿಸುವವರು ಹೆದರುವ ಪ್ರದೇಶಗಳಿಗೆ ಹೋಗಿ ಅವರು ಅಪಾಯದಲ್ಲಿದ್ದ ಸಂತ್ರಸ್ತರ ರಕ್ಷಣೆಯನ್ನು ಮಾಡಿದರು.
ಬೆಳಗ್ಗೆ 10 ರಿಂದ ಮಧ್ಯರಾತ್ರಿಯವರೆಗೂ ಮರುದಿನ ಮತ್ತೆ ಅವರ ತಂಡ ಅವಿರತವಾಗಿ ದುಡಿದು ಸುಮಾರು 2,000 ಮಂದಿಯನ್ನು ರಕ್ಷಿಸಿತು. ಮುಳುಗಿದ ಮನೆಗಳಿಂದ ಮಕ್ಕಲು, ಚಲಿಸಲು ಸಾಧ್ಯವಾಗದ ವೃದ್ಧರು, ಛಾವಣಿಗಳ ಮೇಲೆ ನಿಂತು ರಕ್ಷಣೆಗಾಗಿ ಕೂಗುತ್ತಿದ್ದ ಗರ್ಭಿಣಿಯರು ಮತ್ತು ರೋಗಿಗಳನ್ನು ರಕ್ಷಿಸಿದರು. ಸಂಪೂರ್ಣ ಕತ್ತಲೆಯಲ್ಲಿ ಕೂಡ ನಾವು ಕಾರ್ಯಾಚರಣೆ ನಡೆಸಿದೆವು. ಆದರೆ ಅದು ಅತ್ಯಂತ ಭಯಾನಕವಾಗಿತ್ತು ಎಂದಿದ್ದಾರೆ ಶ್ರವಣ್.
ಅಪಾಯಕಾರಿ ತೇಲುವ ಮರದ ದಿಮ್ಮಿಗಳು ಪ್ರವಾಹದಲ್ಲಿ ಹರಿದು ಬರುತ್ತಿತ್ತು. ತಾವು ಚಲಾಯಿಸುತ್ತಿದ್ದ ದೋಣಿಯು ದುರ್ಬಲವಾಗಿತ್ತು. ಆದರೂ ಒಂದರ ಹಿಂದೆ ಒಂದರಂತೆ ಹಳ್ಳಿಗಳು ಮುಳುಗುತ್ತಿದ್ದುದರಿಂದ ಇರುವ ಸೌಲಭ್ಯವನ್ನು ಬಳಸಿಕೊಂಡು ರಕ್ಷಣೆಗೆ ಮುಂದಾದೆವು. ರಕ್ಷಣಾ ಕಾರ್ಯಾಚರಣೆ ಮುಗಿಯುವ ಹೊತ್ತಿಗೆ ಐದು ಹಳ್ಳಿಗಳ ಸುಮಾರು 2,000 ಜನರನ್ನು ರಕ್ಷಿಸಿದೆವು ಎಂದಿದ್ದಾರೆ ಶ್ರವಣ್ ಕುಮಾರ್.
ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಬಂದ್; ಅಮರನಾಥ ಯಾತ್ರೆ ಸ್ಥಗಿತ
ಜುಲೈ 19 ರಂದು ಉಂಟಾದ ಪ್ರವಾಹ ಶಿವಸಾಗರ್‌ನ ನಜೀರಾ ಜಿಲ್ಲೆಯಾದ್ಯಂತ ವ್ಯಾಪಕ ಹಾನಿಯನ್ನು ಉಂಟು ಮಾಡಿದೆ. ಹಲವಾರು ಹಳ್ಳಿಗಳು ಮುಳುಗಿದ್ದು, ರಸ್ತೆಗಳು ಕೊಚ್ಚಿ ಹೋಗಿವೆ. ವಿದ್ಯುತ್ ಮತ್ತು ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಅಸ್ಸಾಂನಲ್ಲಿ ಪ್ರವಾಹದಿಂದ ಪೀಡಿತವಾದ ಜಿಲ್ಲೆಗಳ ಸಂಖ್ಯೆ ಐದರಿಂದ ಏಳಕ್ಕೆ ಏರಿದ್ದು, ಪ್ರವಾಹ ಪೀಡಿತ ಸಂತ್ರಸ್ತರ ಸಂಖ್ಯೆ 1.92 ಲಕ್ಷಕ್ಕೆ ಏರಿಕೆಯಾಗಿದೆ. ಪ್ರವಾಹದಿಂದ ಈವರೆಗೆ 82 ಮಂದಿ ಸಾವನ್ನಪ್ಪಿದ್ದಾರೆ. ಶಿವಸಾಗರ್‌ನಲ್ಲಿರುವ ದಿಖೋವ್ ಮತ್ತು ಗೋಲಾಘಾಟ್ ಜಿಲ್ಲೆಯ ನುಮಲಿಗಢದಲ್ಲಿರುವ ಧನ್ಸಿರಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.