2 ಗಂಟೆಗಳಲ್ಲಿ 250 ಕಿಲೋ ಮೀಟರ್... ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಮೊದಲ ಬಾರಿಗೆ ದಾನಿಯ ಹೃದಯ ಸಾಗಾಟ: ರೈಲ್ವೆಯ ಇತಿಹಾಸದಲ್ಲಿ ಸಾಧನೆ
Vande Bharat Express: ಭಾರತೀಯ ರೈಲ್ವೆ ಮೊದಲ ಬಾರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಗುಜರಾತ್‌ನಿಂದ ಸೂರತ್‌ನಿಂದ ಅಹಮದಾಬಾದ್‌ಗೆ ಜೀವಂತ ದಾನಿಯ ಹೃದಯವನ್ನು ಯಶಸ್ವಿಯಾಗಿ ಸಾಗಿಸಿತು. ಹಸಿರು ಮಾರ್ಗದ ನೆರವಿನಿಂದ ಹೃದಯವನ್ನು ನಿಗದಿತ ಸಮಯಕ್ಕೆ ಆಸ್ಪತ್ರೆಗೆ ತಲುಪಿಸಿ, ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯ ಜೀವ ಉಳಿಸಲಾಯಿತು.
ವಂದೇ ಭಾರತ್ (ಸಾಂದರ್ಭಿಕ ಚಿತ್ರ) -
ಗಾಂಧಿನಗರ, ಆ. 1: ಭಾರತೀಯ ರೈಲ್ವೆ ವೈದ್ಯಕೀಯ ತುರ್ತು ಸೇವೆಯಲ್ಲಿ(Medical Emergency Service) ಹೊಸ ಇತಿಹಾಸ ನಿರ್ಮಿಸಿದೆ. ಮೊದಲ ಬಾರಿಗೆ ಜೀವಂತ ದಾನಿಯ ಹೃದಯವನ್ನು (Live Donor Heart) ಗುಜರಾತ್‌ನ ಸೂರತ್‌ನಿಂದ ಅಹಮದಾಬಾದ್‌ಗೆ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿನ ಮೂಲಕ ಸುಮಾರು 250 ಕಿ.ಮೀ. ದೂರ ಅತ್ಯಂತ ವೇಗವಾಗಿ ಸಾಗಿಸಿ, ಗಂಭೀರ ಹೃದಯ ರೋಗಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ.
ಈ ಸಮಯ ಸೂಕ್ಷ್ಮ ಕಾರ್ಯಾಚರಣೆಯಲ್ಲಿ ರೈಲ್ವೆ ರಕ್ಷಣಾ ಪಡೆ (RPF), ಗುಜರಾತ್ ಪೊಲೀಸ್, ಭಾರತೀಯ ರೈಲ್ವೆ ಹಾಗೂ ವೈದ್ಯಕೀಯ ತಂಡಗಳು ಅತ್ಯುತ್ತಮ ಸಮನ್ವಯ ಪ್ರದರ್ಶಿಸಿದವು. ಸೂರತ್‌ನಿಂದ ಹೊರಟ ಹೃದಯವನ್ನು 20901 ಮುಂಬೈ ಸೆಂಟ್ರಲ್ ಗಾಂಧಿ ನಗರ ಕ್ಯಾಪಿಟಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಅಹಮದಾಬಾದ್‌ಗೆ ತರಲಾಯಿತು. ರೈಲು ನಿಗದಿತ ಸಮಯಕ್ಕೆ ಅಹಮದಾಬಾದ್ ತಲುಪಿದ ಬಳಿಕ, ಅಲ್ಲಿಂದ ಯುಎನ್ ಮೆಹತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್‌ಗೆ ವಿಶೇಷ 'ಗ್ರೀನ್ ಕಾರಿಡಾರ್' ಮೂಲಕ ಯಾವುದೇ ಅಡೆತಡೆ ಇಲ್ಲದೆ ತಲುಪಿಸಲಾಯಿತು.
ವಿಡಿಯೊ ನೋಡಿ:
A heartbeat of hope, delivered on time!
— Ministry of Railways (@RailMinIndia) July 31, 2026
For the first time, a 'live human heart' was transported by Vande Bharat Express from Surat to Ahmedabad for a life-saving transplant.
A remarkable example of seamless coordination between Indian Railways and State Administration- where… pic.twitter.com/eFx7IRuquD
ಹೃದಯ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಪ್ರತಿ ಕ್ಷಣವೂ ಅತ್ಯಂತ ಅಮೂಲ್ಯವಾಗಿರುವುದರಿಂದ, ಹೃದಯವನ್ನು ನಿಗದಿತ ಅವಧಿಯೊಳಗೆ ಆಸ್ಪತ್ರೆಗೆ ತಲುಪಿಸುವುದು ಅತ್ಯಗತ್ಯವಾಗಿತ್ತು. ಹೃದಯವನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿಸಿದ ಪರಿಣಾಮ ವೈದ್ಯರು ತಕ್ಷಣವೇ ಶಸ್ತ್ರಚಿಕಿತ್ಸೆ ಆರಂಭಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗೆ ಹೊಸ ಜೀವನ ದೊರೆತಿದೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಈ ಸಾಧನೆಯನ್ನು "ಸೇವೆಯ ಅಪೂರ್ವ ಮಾದರಿ" ಎಂದು ಬಣ್ಣಿಸಿ, ಭಾರತೀಯ ರೈಲ್ವೆ, RPF, ಗುಜರಾತ್ ಪೊಲೀಸ್ ಹಾಗೂ ವೈದ್ಯಕೀಯ ಸಿಬ್ಬಂದಿಯ ಸಮನ್ವಯದ ಕಾರ್ಯವನ್ನು ಶ್ಲಾಘಿಸಿದರು.
ಯುಎನ್ ಮೆಹತಾ ಇನ್‌ಸ್ಟಿಟ್ಯೂಟ್‌ನಲ್ಲಿ ಇದುವರೆಗೆ 77 ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿದ್ದು, ಈ ಸಾಧನೆ ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲಾಗಿದೆ ಎಂದು ಹೇಳಿದರು. ಅಹಮದಾಬಾದ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವೇದ್ ಪ್ರಕಾಶ್ ಅವರ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಗ, ಸಮಯಪಾಲನೆ ಮತ್ತು ವಿಶ್ವಾಸಾರ್ಹತೆಯೇ ಈ ಜೀವ ರಕ್ಷಕ ಕಾರ್ಯಾಚರಣೆಯ ಯಶಸ್ಸಿಗೆ ಪ್ರಮುಖ ಕಾರಣ.
ಈ ಘಟನೆ ಭಾರತೀಯ ರೈಲ್ವೆ ಕೇವಲ ಪ್ರಯಾಣಿಕರು ಮತ್ತು ಸರಕು ಸಾಗಣೆಗೆ ಮಾತ್ರ ಸೀಮಿತವಾಗಿಲ್ಲ, ಅಗತ್ಯದ ಸಂದರ್ಭದಲ್ಲಿ ಜೀವ ಉಳಿಸುವ ಆರೋಗ್ಯ ಸೇವೆಗಳಲ್ಲಿಯೂ ಪ್ರಮುಖ ಪಾತ್ರ ವಹಿಸಬಲ್ಲದು ಎಂಬುದನ್ನು ಸಾಬೀತುಪಡಿಸಿದೆ.