ಭವಿಷ್ಯಕ್ಕೆ ತಯಾರಿ: ಸ್ವರಕ್ಷಣೆಗಾಗಿ 2,500ಕ್ಕೂ ಹೆಚ್ಚು ಯುವಕರಿಗೆ ದೊಣ್ಣೆ ವಿತರಿಸಿದ ಉತ್ತರ ಪ್ರದೇಶ ಸಚಿವ
Suheldev Bharatiya Samaj Party: ಉತ್ತರ ಪ್ರದೇಶದ ಸಚಿವ ಓಂ ಪ್ರಕಾಶ್ ರಾಜ್‌ಭರ್, ತಮ್ಮ ಪಕ್ಷದಿಂದ ರಚಿಸಲ್ಪಟ್ಟ ರಾಷ್ಟ್ರೀಯ ಸುಹೇಲ್‌ದೇವ್ ಸೇನೆಯ 2,500ಕ್ಕೂ ಹೆಚ್ಚು ಯುವಕರಿಗೆ ಸ್ವರಕ್ಷಣೆಗೆ ಕೋಲುಗಳನ್ನು ವಿತರಿಸಿದ್ದಾರೆ. ಈ ಕ್ರಮವು ಯುವಕರಿಗೆ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿತುಕೊಳ್ಳಲು, ಶಾರೀರಿಕ ಹಾಗೂ ಮಾನಸಿಕವಾಗಿ ಸಜ್ಜಾಗಲು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಯುವಕರಿಗೆ ದೊಣ್ಣೆ ವಿತರಿಸಿದ ಉತ್ತರ ಪ್ರದೇಶ ಸಚಿವ -
ಲಖನೌ, ಜ. 19: ಉತ್ತರ ಪ್ರದೇಶದ ಸಚಿವ ಮತ್ತು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (SBSP) ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ (Om Prakash Rajbhar) ಅಜಂಗಢದಲ್ಲಿ ಸ್ವರಕ್ಷಣೆಗಾಗಿ 2,500ಕ್ಕೂ ಹೆಚ್ಚು ಮಂದಿಗೆ ದೊಣ್ಣೆ ವಿತರಿಸುವ ಮೂಲಕ ದೇಶಾದ್ಯಂತ ಭಾರಿ ಚರ್ಚೆ ಹುಟ್ಟು ಹಾಕಿದ್ದಾರೆ. ತಮ್ಮ ಪಕ್ಷದಿಂದ ರಚಿಸಲ್ಪಟ್ಟ ರಾಷ್ಟ್ರೀಯ ಸುಹೇಲ್‌ದೇವ್ ಸೇನೆಯ (Rashtriya Suheldev Sena) 2,500ಕ್ಕೂ ಹೆಚ್ಚು ಕಾರ್ಯಕರ್ತರಿಗೆ ದೊಣ್ಣೆ ವಿತರಿಸಿದ್ದಾರೆ.
ದೊಣ್ಣೆಯನ್ನು ಪರವಾನಗಿ ಇಲ್ಲದ ಆಯುಧ ಎಂದು ಉಲ್ಲೇಖಿಸಿದ ರಾಜ್‌ಭರ್, ರಾಷ್ಟ್ರೀಯ ಸುಹೇಲ್‌ದೇವ್ ಸೇನೆಯ ಉದ್ದೇಶವು ಯುವಕರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಿ ಜಾಗೃತಿ ಮೂಡಿಸುವುದಾಗಿದೆ. ಇದರಿಂದ ಅವರು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ದೊಣ್ಣೆ ಹಿಂಸಾಚಾರಕ್ಕೆ ಅಲ್ಲ, ಸ್ವರಕ್ಷಣೆ ಮತ್ತು ಭಯೋತ್ಪಾದನ ತಡೆಯುವ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತಿವೆ ಎಂದು ಉತ್ತರ ಪ್ರದೇಶದ ಸಚಿವ ಸುಹೇಲ್‌ದೇವ್ ಹೇಳಿದರು. ಇದಕ್ಕೆ ಯಾವುದೇ ಪರವಾನಗಿ ಇಲ್ಲ. ನಾವು ಅವರನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸುತ್ತಿದ್ದೇವೆ ಎಂದರು. ತರಬೇತಿ ಪಡೆದ ಸದಸ್ಯರು ರಸ್ತೆ ಅಪಘಾತಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಂತಹ ತುರ್ತು ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಸಹಾಯ ಮಾಡುವ ಮೂಲಕ ಮತ್ತು ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ನೆರವಾಗುತ್ತಾರೆ ಎಂದು ವಿವರಿಸಿದ್ದಾರೆ.
ಇಲ್ಲಿದೆ ವಿಡಿಯೊ:
VIDEO | Azamgarh: UP Minister Om Prakash Rajbhar distributes sticks for self defence at party training camp; calls them 'unlicensed weapons', says it will keep them safe.
— Press Trust of India (@PTI_News) January 19, 2026
(Full VIDEO available on PTI Videos – https://t.co/n147TvrpG7) pic.twitter.com/mnqLSomUN7
ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್‌ಭರ್, ಸಮಾಜದಲ್ಲಿ ಶೇ. 60ಕ್ಕೂ ಹೆಚ್ಚು ಪೋಷಕರು ಮತ್ತು ಮಕ್ಕಳಿಗೆ ಶಿಕ್ಷಣ ಮತ್ತು ವೃತ್ತಿ ಆಯ್ಕೆಗಳ ಬಗ್ಗೆ ಅಗತ್ಯ ಮಾಹಿತಿಯ ಕೊರತೆ ಇದೆ ಎಂದು ಹೇಳಿದರು. ಸೈನಿಕರು, ಎಂಜಿನಿಯರ್‌ಗಳು, ವೈದ್ಯರಾಗಲು ಅಥವಾ ಶಿಕ್ಷಣ, ಪೊಲೀಸ್ ಮತ್ತು ಆರೋಗ್ಯ ಸೇವೆಗಳಂತಹ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಯಾವ ವಿಷಯಗಳನ್ನು ಅಧ್ಯಯನ ಮಾಡಬೇಕೆಂದು ಅನೇಕ ವಿದ್ಯಾರ್ಥಿಗಳಿಗೆ ತಿಳಿದಿಲ್ಲ ಎಂದರು.
ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಸಿದ್ಧತೆ; ಇಂದು ನಾಮಪತ್ರ ಸಲ್ಲಿಕೆ
ವಿದ್ಯಾರ್ಥಿಗಳು ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತವನ್ನು ಓದಿದ ಬಳಿಕ ಪದವಿ ಪಡೆದದ್ದು ವ್ಯರ್ಥವಾಯ್ತು ಎಂದು ಹೇಳುತ್ತಾರೆ. ಯುವಜನರನ್ನು ಚಿಕ್ಕವಯಸ್ಸಿನಿಂದಲೇ ಶಾರೀರಿಕ ಮತ್ತು ಮಾನಸಿಕವಾಗಿ ಸಜ್ಜುಗೊಳಿಸುವುದೇ ನಮ್ಮ ಉದ್ದೇಶ ಎಂದು ಅವರು ಹೇಳಿದರು. ಅಲ್ಲದೆ, ತರಬೇತುದಾರರು ವಿದ್ಯಾರ್ಥಿಗಳಿಗೆ ವೃತ್ತಿ ಪ್ರಧಾನ ಶಿಕ್ಷಣ ಮತ್ತು ಶಾರೀರಿಕ ಫಿಟ್‌ನೆಸ್ ಕುರಿತಂತೆ ಮಾರ್ಗದರ್ಶನ ನೀಡುತ್ತಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಸುಹೇಲ್‌ದೇವ್ ಸೇನಾ ಅನ್ಯಾಯ, ದೌರ್ಜನ್ಯ, ಭ್ರಷ್ಟಾಚಾರ ಮತ್ತು ಶೋಷಣೆಯ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಹೋರಾಡುತ್ತದೆ. ಜತೆಗೆ ಸಮುದಾಯ ಸೇವೆಯ ಮೂಲಕ ನೈಸರ್ಗಿಕ ವಿಪತ್ತು ಸಂದರ್ಭಗಳಲ್ಲಿ ಮತ್ತು ಸಾಮಾಜಿಕ ಸಮಸ್ಯೆಗಳಲ್ಲಿಯೂ ಕೆಲಸ ಮಾಡುತ್ತದೆ ಎಂದು ರಾಜ್‌ಭರ್ ಹೇಳಿದರು.
ಕಳೆದ ತಿಂಗಳು, ಹಿಂದೂ ರಕ್ಷಾ ದಳ ಎಂಬ ಬಲಪಂಥೀಯ ಸಂಘಟನೆಯ ಮುಖಂಡರು ಗಾಜಿಯಾಬಾದ್‌ನ ಶಾಲಿಮಾರ್ ಗಾರ್ಡನ್ ಎಕ್ಸ್ -2 ಪ್ರದೇಶದಲ್ಲಿರುವ ತಮ್ಮ ಕಚೇರಿಯ ಬಳಿ ಕತ್ತಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಿತರಿಸಿದ್ದರು. ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿ ಉಂಟಾದರೆ ಸ್ವರಕ್ಷಣೆಗೆ ಈ ಆಯುಧಗಳು ಬಳಸಲಾಗುವುದೆಂದು ವಾದಿಸಿದ್ದರು.
ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಶಾಲಿಮಾರ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ 40 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ವಿಡಿಯೊದಲ್ಲಿ ಹಲವರು ಕತ್ತಿಗಳನ್ನು ಹಿಡಿದು, ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.