ಲಖನೌ: ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯಲ್ಲಿ ಕುಸಿದ ಕಲ್ಲು ಕ್ವಾರಿಯ ಅವಶೇಷಗಳಿಂದ ಇನ್ನೂ ಐದು ಶವಗಳು ಪತ್ತೆಯಾಗಿದ್ದು , ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (Stone Quarry Collapse) ಬಲಿಯಾದ ವ್ಯಕ್ತಿಯನ್ನು ಓಬ್ರಾದ ಪನಾರಿ ನಿವಾಸಿ ಇಂದ್ರಜಿತ್ (30) ಎಂದು ಗುರುತಿಸಲಾಗಿದೆ. ಇತರ ವ್ಯಕ್ತಿಗಳನ್ನು ಇಂದ್ರಜಿತ್ ಅವರ ಸಹೋದರ ಸಂತೋಷ್ ಯಾದವ್ (30), ರವೀಂದ್ರ ಅಲಿಯಾಸ್ ನಾನಕ್ (18), ರಾಮ್‌ಖೇಲವನ್ (32) ಮತ್ತು ಕೃಪಾಶಂಕರ್ ಎಂದು ಗುರುತಿಸಲಾಗಿದೆ ಎಂದು ಸೋನ್‌ಭದ್ರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿಎನ್ ಸಿಂಗ್ ತಿಳಿಸಿದ್ದಾರೆ.
ಶನಿವಾರ ಸಂಜೆ ಬಿಲ್ಲಿ ಮಾರ್ಕುಂಡಿ ಗಣಿಗಾರಿಕೆ ಪ್ರದೇಶದ ಕುಸಿತದ ನಂತರ ಸ್ಥಳಕ್ಕೆ ಭೇಟಿ ನೀಡಿದ ಉತ್ತರ ಪ್ರದೇಶದ ಸಚಿವ ಮತ್ತು ಸ್ಥಳೀಯ ಶಾಸಕ ಸಂಜೀವ್ ಕುಮಾರ್ ಗೊಂಡ್, "ಸುಮಾರು ಒಂದು ಡಜನ್ ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರಬಹುದು ಎಂದು ಹೇಳಿದ್ದರು. ವಾರಣಾಸಿ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಪಿಯೂಷ್ ಮೊರ್ಡಿಯಾ ಮಾತನಾಡಿ, ಹಲವಾರು ಭಾರವಾದ ಕಲ್ಲುಗಳು ಇರುವುದರಿಂದ ಅವಶೇಷಗಳನ್ನು ತೆರವುಗೊಳಿಸಲು ಸಮಯ ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದರು.
ಕೃಷ್ಣ ಮೈನಿಂಗ್ ವರ್ಕ್ಸ್ ನಿರ್ವಹಿಸುತ್ತಿದ್ದ ಕಲ್ಲು ಕ್ವಾರಿಯ ಒಂದು ಭಾಗ ಕುಸಿದು ಬಿದ್ದಿತ್ತು. ಪರ್ಸೋಯ್ ಟೋಲಾದ ನಿವಾಸಿ ಛೋಟು ಯಾದವ್ ನೀಡಿದ ದೂರಿನ ಮೇರೆಗೆ, ಕೃಷ್ಣ ಮೈನಿಂಗ್ ವರ್ಕ್ಸ್‌ನ ಮಾಲೀಕರು ಮತ್ತು ಅವರ ವ್ಯವಹಾರ ಪಾಲುದಾರರಾದ ಓಬ್ರಾ ನಿವಾಸಿಗಳಾದ ಮಧುಸೂದನ್ ಸಿಂಗ್ ಮತ್ತು ದಿಲೀಪ್ ಕೇಶರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ. ಮೂವರು ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ. ಸಮಾಜವಾದಿ ಪಕ್ಷದ ರಾಬರ್ಟ್ಸ್‌ಗಂಜ್ ಸಂಸದ ಚೋಟೆಲಾಲ್ ಖರ್ವಾರ್, ಸ್ಥಳೀಯ ಪೊಲೀಸರೊಂದಿಗೆ ಶಾಮೀಲಾಗಿ ಮಾಫಿಯಾ ಗಣಿ ಅಕ್ರಮವಾಗಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಲ್ಲುಗಳ ಕೆಳಗೆ 12 ರಿಂದ 15 ಜನರು ಸಿಲುಕಿರುವ ಸಾಧ್ಯತೆಯಿದೆ. ಬುಡಕಟ್ಟು ಜನಾಂಗದವರು ಹಲವು ವಿಧಗಳಲ್ಲಿ ಕೊಲ್ಲಲ್ಪಡುತ್ತಿದ್ದಾರೆ ಮತ್ತು ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಪ್ರತಿ ತಿಂಗಳು ಒಂದು ಅಥವಾ ಎರಡು ಇಂತಹ ಘಟನೆಗಳು ಸಂಭವಿಸುತ್ತವೆ, ಆದರೆ ಗಣಿಗಾರಿಕೆ ಮಾಫಿಯಾ ಎಲ್ಲವನ್ನೂ ಹೇಗೆ ನಿರ್ವಹಿಸುತ್ತದೆ ಎಂಬುದು ಇನ್ನೂ ತಿಳಿದಿಲ್ಲ" ಎಂದು ಅವರು ಆರೋಪಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ಪರಿಹಾರ ಮತ್ತು ಪ್ರತಿ ಕುಟುಂಬಕ್ಕೂ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.