ನವದೆಹಲಿ, ಫೆ.20: 2026ರ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ ನಡೆಯುತ್ತಿದ್ದು, ಹಲವು ದೇಶದ ಟೆಕ್ ದೈತ್ಯರು ಭಾಗವಹಿಸಿದ್ದಾರೆ. (AI Summit) ಇದೇ ವೇಳೆ, ಇಂಡಿಯಾ–ಅಮೆರಿಕ ವ್ಯಾಪಾರ ಒಪ್ಪಂದದ (India-US trade deal) ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿ ಬಟ್ಟೆ ತೆಗೆದು ಪ್ರತಿಭಟನೆ ನಡೆಸಿದೆ. ಕಾರ್ಯಕ್ರಮ ನಡೆಯುತ್ತಿದ್ದ ಪಕ್ಕದಲ್ಲೇ ಈ ಪ್ರತಿಭಟನೆ ನಡೆಸಲಾಗಿದೆ. ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಒಂದು ಹಾಲ್‌ನಲ್ಲಿ ಇದ್ದವರು ಹೊರಗಿನಿಂದ ಘೋಷಣೆ ಕೂಗುತ್ತಿರುವ ಜನರ ಶಬ್ಧವನ್ನು ಕೇಳಿದರು. ಏನಾಗಿದೆ ಎಂದು ಹೊರಗೆ ಹೋಗಿ ನೋಡಿದಾಗ, ಯೂತ್ ಕಾಂಗ್ರೆಸ್ ಸದಸ್ಯರ ಗುಂಪೊಂದು ಶರ್ಟ್ ಇಲ್ಲದೆ ಪ್ರತಿಭಟಿಸುತ್ತಿದ್ದರು. ನಂತರ ಆ ಗುಂಪು ಘೋಷಣೆಗಳನ್ನು ಕೂಗುತ್ತಾ, ತಮ್ಮ ಟೀ-ಶರ್ಟ್‌ಗಳನ್ನು ಹಿಡಿದು ಒಳಗೆ ನುಗ್ಗಿದರು.
ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದ ಮಾಡಿದ್ದನ್ನು ವಿರೋಧಿಸಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಮೆರಿಕ ಜೊತೆ ಸಹಿ ಹಾಕಿದ ಹೊಸ ವ್ಯಾಪಾರ ನೀತಿಯಿಂದ ಭಾರತಕ್ಕೆ ನ್ಯಾಯಯುತ ಪ್ರಯೋಜನಗಳು ಸಿಕ್ಕಿಲ್ಲ ಎಂದು ವಿರೋಧ ಪಕ್ಷ ಕಾಂಗ್ರೆಸ್ ಮೊದಲಿನಿಂದಲೂ ಆರೋಪಿಸುತ್ತಲೇ ಬಂದಿದೆ.
ವಿಡಿಯೊ ವೀಕ್ಷಿಸಿ:
ಘಟನಾ ಸ್ಥಳದಲ್ಲಿ ಕನಿಷ್ಠ ನಾಲ್ವರು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವರನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಕೃಷ್ಣ ಹರಿ, ಬಿಹಾರ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕುಂದನ್ ಯಾದವ್, ಯುಪಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಜಯ್ ಕುಮಾರ್ ಮತ್ತು ಯುವ ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ನರಸಿಂಹ ಯಾದವ್ ಎಂದು ಗುರುತಿಸಲಾಗಿದೆ.
ಕಾರ್ಯಕ್ರಮವನ್ನು ಅಡ್ಡಿಪಡಿಸಲು ಕಾಂಗ್ರೆಸ್ ಕಾರ್ಯಕರ್ತರು ಪೂರ್ವಯೋಜನೆ ಮಾಡಿಕೊಂಡಿದ್ದರು. ಹೈ-ಸಿಕ್ಯುರಿಟಿ ಸ್ಥಳಕ್ಕೆ ಪ್ರವೇಶಿಸಲು ಅಗತ್ಯವಾದ ಕ್ಯೂಆರ್ ಕೋಡ್‌ಗಳನ್ನು ಪಡೆದುಕೊಂಡಿದ್ದರು. ಪೊಲೀಸರು ಅವರನ್ನು ಗುರುತಿಸಲು ಮುಖ ಗುರುತು ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಎಲ್ಲರನ್ನೂ ಬಂಧಿಸಲಾಗುತ್ತದೆ ಎಂದು ಕೂಡ ಹೇಳಲಾಗಿದೆ.
ಮತ್ತೆ ಭಾರತ- ಪಾಕ್ ಕದನದ ಕುರಿತು ಡೊನಾಲ್ಡ್ ಟ್ರಂಪ್ ಹೇಳಿಕೆ; ಈ ಬಾರಿ ಹೇಳಿದ್ದೇನು?
ಇನ್ನು ಬಿಜೆಪಿಯು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಅಸೂಯೆ ಪಟ್ಟಿದೆ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ಹೇಳಿದರು. ಭಾರತವು ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ದಾಪುಗಾಲು ಹಾಕುತ್ತಿರುವ ಸಮಯದಲ್ಲಿ, ಕಾಂಗ್ರೆಸ್ ದೇಶವನ್ನು ಮುಜುಗರಕ್ಕೀಡುಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಇದು ರಾಜಕೀಯ ವಿರೋಧವಲ್ಲ, ಇದು ಭಾರತದ ಜಾಗತಿಕ ಇಮೇಜ್ ಅನ್ನು ಹಾಳುಮಾಡುವ ಪ್ರಯತ್ನ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮೆರಿಕದೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದ ಭಾಗವಾಗಿ, ಭಾರತವು ಅಮೆರಿಕದ ಎಲ್ಲಾ ಕೈಗಾರಿಕಾ ವಸ್ತುಗಳ ಮೇಲಿನ ಸುಂಕಗಳನ್ನು ರದ್ದುಪಡಿಸುವುದು ಅಥವಾ ಕಡಿತಗೊಳಿಸಲು ತೀರ್ಮಾನಿಸಿದೆ. ಜೊತೆಗೆ, ಧಾನ್ಯಗಳು, ಪಶು ಆಹಾರಕ್ಕಾಗಿ ಬಳಸುವ ಕೆಂಪು ಜೋಳ, ತಾಜಾ ಮತ್ತು ಸಂಸ್ಕರಿತ ಹಣ್ಣುಗಳು, ಸೋಯಾಬಿನ್ ಎಣ್ಣೆ, ವೈನ್ ಮತ್ತು ಮದ್ಯ ಸೇರಿದಂತೆ ವಿವಿಧ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲೂ ಸುಂಕ ಕಡಿತ ಅಥವಾ ರದ್ದುಪಡಿಸಲಾಗುತ್ತದೆ.
ಭಾರತ ಮುಂದುವರಿಯಲು ಎಲ್ಲರೂ ಬೆಂಬಲಿಸಬೇಕಾದ ಸಮಯ ಇದು ಎಂದು ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದರು. ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಅವರು ತರಾಟೆಗೆ ತೆಗೆದುಕೊಂಡರು.