ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕದನ ವಿರಾಮದಂತೆ ಅಮೆರಿಕ- ಭಾರತ ವ್ಯಾಪಾರ ಒಪ್ಪಂದದ ಘೋಷಣೆ: ಮೋದಿ ವಿರುದ್ಧ ಕಾಂಗ್ರೆಸ್ ಟೀಕೆ

ಯಾವುದೋ ದೊಡ್ಡ ಕದನ ವಿರಾಮದಂತೆ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಈ ಒಪ್ಪಂದದಿಂದ ರೈತರಿಗೆ ಭಾರಿ ಪ್ರಯೋಜನವಿದೆ ಎನ್ನಲಾಗುತ್ತಿದೆ. ಅದು ಏನು ಎಂಬುದನ್ನು ವಿವರವಾಗಿ ತಿಳಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.

ವ್ಯಾಪಾರ ಒಪ್ಪಂದದ ಪರಿಣಾಮದ ಬಗ್ಗೆ ತಿಳಿಸಿ: ಎನ್ ಡಿಎಗೆ ಕಾಂಗ್ರೆಸ್ ಸವಾಲು

ಸಂಗ್ರಹ ಚಿತ್ರ -

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ (US-India trade deal) ಬಗ್ಗೆ ಘೋಷಣೆ ಮಾಡಿದ್ದಾರೆ. ಇದು ಯಾವುದೋ ದೊಡ್ಡ ಕದನ ವಿರಾಮದಂತೆ (Ceasefire) ನಡೆದಿದೆ ಎಂದಿರುವ ಕಾಂಗ್ರೆಸ್ (Congress) ಒಪ್ಪಂದದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಅಮೆರಿಕ ಮತ್ತು ಭಾರತ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಹೇಳಿದ್ದು, ಇದರಡಿಯಲ್ಲಿ ಅಮೆರಿಕವು ಭಾರತೀಯ ಸರಕುಗಳ ಮೇಲಿನ ಪರಸ್ಪರ ಸುಂಕವನ್ನು ಶೇ. 25 ರಿಂದ 18ಕ್ಕೆ ಇಳಿಸಲಿದೆ ಎಂದು ತಿಳಿಸಿದ್ದಾರೆ. ಈ ಒಪ್ಪಂದದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕು ಮತ್ತು ಒಪ್ಪಂದವು ಭಾರತೀಯ ರೈತರು, ವ್ಯಾಪಾರಿಗಳು ಮತ್ತು ಉದ್ಯಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಬೇಕು ಎಂದು ಹೇಳಿದೆ.

ಈ ಕುರಿತು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಷಿಯಲ್‌ನಲ್ಲಿ ಘೋಷಿಸಿದ್ದಾರೆ. ಅವರು ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೋರಿಕೆಯ ಮೇರೆಗೆ ಒಪ್ಪಂದವನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಇದೊಂದು ಪ್ರಮುಖ ವ್ಯಾಪಾರ ನಿರ್ಧಾರ. ಭಾರತ ಸರ್ಕಾರದ ಬದಲು ಅಮೆರಿಕ ಅಧ್ಯಕ್ಷರು ಏಕಪಕ್ಷೀಯವಾಗಿ ಏಕೆ ಘೋಷಿಸಿದರು ಎಂದು ಪ್ರಶ್ನಿಸಿದೆ.

ರೈತರಿಗೆ ಅವಕಾಶದ ಬಾಗಿಲು ತೆರೆಯಲಿದೆ ಭಾರತ- ಅಮೆರಿಕ ಒಪ್ಪಂದ: ಪಿಯೂಷ್ ಗೋಯಲ್

ಭಾರತವು ತನ್ನ ಮಾರುಕಟ್ಟೆಯನ್ನು ಅಮೆರಿಕನ್ ಉತ್ಪನ್ನಗಳಿಗೆ ಸಂಪೂರ್ಣವಾಗಿ ತೆರೆಯಲು ತಯಾರಿ ನಡೆಸುತ್ತಿದೆ. ಇದು ಸ್ಥಳೀಯ ವ್ಯವಹಾರಗಳಿಗೆ ಹಾನಿ ಮಾಡಬಹುದು ಎಂದಿರುವ ಕಾಂಗ್ರೆಸ್, ಇದು ಭಾರತೀಯ ಉದ್ಯಮ, ವ್ಯಾಪಾರಿಗಳು ಮತ್ತು ರೈತರ ಮೇಲೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಭಾರತದ ಕೃಷಿ ವಲಯವನ್ನು ಅಮೆರಿಕಕ್ಕೆ ತೆರೆಯುವ ಬಗ್ಗೆಯೂ ಈ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದ್ದು, ಇದು ಭಾರತೀಯ ರೈತರ ಹಿತಾಸಕ್ತಿ ಮತ್ತು ಭದ್ರತೆಯನ್ನು ರಕ್ಷಿಸಲು ಸರ್ಕಾರ ಹೇಗೆ ಯೋಜಿಸಿದೆ ಎಂಬುದನ್ನು ಪ್ರಶ್ನಿಸಿದ್ದು, ಒಪ್ಪಂದದ ವಿವರವನ್ನು ಸ್ಪಷ್ಟಪಡಿಸಬೇಕು, ಭಾರತೀಯ ರೈತರ ಭದ್ರತೆ ಮತ್ತು ಹಿತಾಸಕ್ತಿ ಹೇಗೆ ಖಚಿತಪಡಿಸಿಡಿಕೊಳ್ಳಲಾಗಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ತಿಳಿಸಿದೆ.



ಅಲ್ಲದೇ ರಷ್ಯಾ ತೈಲ ಖರೀದಿ ಬಗ್ಗೆಯೂ ಪ್ರಶ್ನಿಸಿರುವ ಕಾಂಗ್ರೆಸ್, ಭಾರತ ಸರ್ಕಾರ ರಷ್ಯಾದಿಂದ ತೈಲ ಖರೀದಿಸುವುದಿಲ್ಲ. ಬದಲಿಗೆ ಅಮೆರಿಕ ಮತ್ತು ವೆನೆಜುವೆಲಾದಿಂದ ಖರೀದಿಸುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಮೋದಿ ಸರ್ಕಾರ ಈ ಷರತ್ತಿಗೆ ಒಪ್ಪಿಕೊಂಡಿದೆಯೇ ಎಂಬುದನ್ನು ತಿಳಿಸಲಿ ಎಂದು ಕಾಂಗ್ರೆಸ್ ಹೇಳಿದೆ.

ಭಾರತ-ಅಮೆರಿಕ ನಡುವೆ ವ್ಯಾಪಾರ ಒಪ್ಪಂದ; ಪ್ರಧಾನಿ ಮೋದಿಯನ್ನು ಸನ್ಮಾನಿಸಿದ NDA ಸಂಸದರು

ಭಾರತ ಅಮೆರಿಕದಿಂದ ಹೆಚ್ಚಿನ ಸರಕುಗಳನ್ನು ಖರೀದಿಸಲಿದೆ ಎಂದು ಟ್ರಂಪ್ ಹೇಳಿದ್ದು, ಹಾಗಾದರೆ ಭಾರತ ಸರ್ಕಾರದ ಸ್ವಂತ ಮೇಕ್ ಇನ್ ಇಂಡಿಯಾ ಅಭಿಯಾನದ ಅರ್ಥವೇನು ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ವಿವರಗಳನ್ನು ತಿಳಿದುಕೊಳ್ಳುವ ಹಕ್ಕು ಭಾರತೀಯರಿಗೆ ಇದೆ. ಆದ್ದರಿಂದ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ವಿವರಗಳನ್ನು ಹಂಚಿಕೊಳ್ಳಬೇಕು ಎಂದು ತಿಳಿಸಿದೆ.