ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇರಾನ್ ಬಂದರಿನ ಮೇಲೆ ಅಮೆರಿಕ ದಿಗ್ಬಂಧನ: ಸಿಂಗಾಪುರ, ಕುವೈತ್ ವಿದೇಶಾಂಗ ಸಚಿವರ ಜೊತೆ ಜೈಶಂಕರ್ ಮಾತುಕತೆ

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟು ಈಗ ಭಾರತೀಯರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸೋಮವಾರ ಕುವೈತ್, ಸಿಂಗಾಪುರ ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಿದ್ದು, ಈ ಸಂದರ್ಭದಲ್ಲಿ ಗಲ್ಫ್ ರಾಷ್ಟ್ರದಲ್ಲಿರುವ ಭಾರತೀಯರ ಸುರಕ್ಷತೆ, ಯೋಗ ಕ್ಷೇಮದ ಕುರಿತು ಸಂವಾದ ನಡೆಸಿದರು.

ಎಸ್ ಜೈಶಂಕರ್ (ಸಂಗ್ರಹ ಚಿತ್ರ)

ನವದೆಹಲಿ: ಇರಾನ್ ಬಂದರುಗಳ (Iran port) ಮೇಲೆ ಅಮೆರಿಕ ನಿರ್ಬಂಧ (US blockade) ವಿಧಿಸಿದ ಬಳಿಕ ವಿದೇಶಾಂಗ ಸಚಿವ ಎಸ್ ಜೈಶಂಕರ್ (External Affairs Minister S Jaishankar) ಅವರು ಸೋಮವಾರ ಕುವೈತ್ (Kuwait), ಸಿಂಗಾಪುರ (Singapore) ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಅವರು ಗಲ್ಫ್ ರಾಷ್ಟ್ರದಲ್ಲಿರುವ ಭಾರತೀಯರ ಸುರಕ್ಷತೆ, ಯೋಗ ಕ್ಷೇಮದ ಕುರಿತು ಕೂಡ ಚರ್ಚಿಸಿದ್ದಾರೆ. ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣವನ್ನು ಬಿಡಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರ್ಮುಜ್ ಜಲಮಾರ್ಗದಲ್ಲಿ ದಿಗ್ಬಂಧನಕ್ಕೆ ಸೋಮವಾರ ಆದೇಶಿಸಿದ್ದರು.

ಅಮೆರಿಕದ ನಿರ್ಬಂಧ ಜಾರಿಯಾಗುತ್ತಿದ್ದಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕುವೈತ್ ಮತ್ತು ಸಿಂಗಾಪುರದ ವಿದೇಶಾಂಗ ಸಚಿವರ ಜೊತೆ ಮಾತನಾಡಿದರು. ಅಮೆರಿಕದ ದಿಗ್ಬಂಧನದಿಂದ ಪಶ್ಚಿಮ ಏಷ್ಯಾದಲ್ಲಿ ಉಂಟಾಗಬಹುದಾದ ಪರಿಣಾಮಗಳ ಕುರಿತು ಚರ್ಚೆ ನಡೆಸಿದರು.

ಶಾಂತಿ ಮಾತುಕತೆ ವೇಳೆ ಇರಾನ್‌ಗೆ ಅಮೆರಿಕ ಹಾಕಿದ್ದ ಕಂಡೀಷನ್‌ ಏನು?

ಕುವೈತ್ ವಿದೇಶಾಂಗ ಸಚಿವ ಶೇಖ್ ಜರಾಹ್ ಜಾಬರ್ ಅಲ್-ಅಹ್ಮದ್ ಅಲ್-ಸಬಾಹ್ ಅವರೊಂದಿಗಿನ ಸಂವಾದ ನಡೆಸಿದ ಜೈಶಂಕರ್, ಗಲ್ಫ್ ರಾಷ್ಟ್ರದಲ್ಲಿರುವ ಭಾರತೀಯ ಸಮುದಾಯದ ಯೋಗಕ್ಷೇಮದ ಕುರಿತು ವಿಚಾರಿಸಿದರು. ಅವರ ಸುರಕ್ಷತೆ ಕ್ರಮಗಳ ಕುರಿತು ಮಾತನಾಡಿದರು.

ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡ ಜೈಶಂಕರ್, ಕುವೈತ್‌ನ ವಿದೇಶಾಂಗ ಸಚಿವ ಶೇಖ್ ಜರಾಹ್ ಜಾಬರ್ ಅಲ್-ಅಹ್ಮದ್ ಅಲ್-ಸಬಾಹ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಪ್ರಾದೇಶಿಕ ಪರಿಸ್ಥಿತಿ ಮತ್ತು ಭಾರತೀಯ ಸಮುದಾಯದ ಯೋಗಕ್ಷೇಮದ ಕುರಿತು ನಾವು ಚರ್ಚಿಸಿದೆವು ಎಂದು ಹೇಳಿದರು.

ಸಿಂಗಾಪುರದ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಅವರು ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಅದರ ಪರಿಣಾಮಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ತಿಳಿಸಿದ ಜೈಶಂಕರ್, ವಿವಿಯನ್‌ಬಾಲಾ ಅವರೊಂದಿಗೆ ಮಾತನಾಡಲು ಯಾವಾಗಲೂ ಸಂತೋಷವಾಗುತ್ತದೆ. ನಮ್ಮ ಚರ್ಚೆಗಳು ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತು ಅದರ ಪರಿಣಾಮಗಳ ಬಗ್ಗೆ ನಡೆಯಿತು ಎಂದು ತಿಳಿಸಿದರು.

ಹೊರ್ಮುಜ್ ಜಲಸಂಧಿಯಲ್ಲಿ ಸಮರ ಭೀತಿ: "ಸುಟ್ಟು ಹಾಕುತ್ತೇವೆ" ಎಂದು ಇರಾನ್‌ಗೆ ಟ್ರಂಪ್ ವಾರ್ನಿಂಗ್

ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ಆರಂಭವಾದ ಸಂಘರ್ಷ ಕಳೆದ ವಾರದಲ್ಲಿ ಅಂತ್ಯಗೊಳ್ಳುವ ಸೂಚನೆ ಇತ್ತು. ಆದರೆ ಇಸ್ಲಾಮಾಬಾದ್‌ನಲ್ಲಿ ಈ ಕುರಿತು ನಡೆದ ಮಾತುಕತೆ ವಿಫಲವಾದ ಪರಿಣಾಮ ಈಗ ಸಂಘರ್ಷ ತೀವ್ರಗೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರ್ಮುಜ್ ಜಲ ಮಾರ್ಗದಲ್ಲಿ ಇರಾನ್ ಬಂದರುಗಳಿಗೆ ಸಾಗುವ ಮತ್ತು ಅಲ್ಲಿಂದ ಹೊರ ಬರುವ ಹಡಗುಗಳನ್ನು ತಡೆಯಲು ದಿಗ್ಬಂಧನ ವಿಧಿಸಿ ಆದೇಶಿಸಿದ್ದು,ಇದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಿದೆ.

ವಿದ್ಯಾ ಇರ್ವತ್ತೂರು

View all posts by this author