ಹೊಸದಿಲ್ಲಿ: ಇರಾನ್‌ನ (Iran) ಪರಮಾಣು ಸೌಲಭ್ಯಗಳ (Nuclear Infrastructure) ಮೇಲೆ ಅಮೆರಿಕ ಸೇನೆ (US Military) 'ಆಪರೇಷನ್ ಮಿಡ್‌ನೈಟ್ ಹ್ಯಾಮರ್' ನಡೆಸಿದ್ದು, ಇದಕ್ಕೆ ಭಾರತೀಯ ವಾಯುಪ್ರದೇಶವನ್ನು ಬಳಸಿಕೊಂಡಿತು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸುದ್ದಿ ಹರಿದಾಡುತ್ತಿದೆ. ಆದರೆ ಆರೋಪವನ್ನು ಪತ್ರಿಕಾ ಮಾಹಿತಿ ಬ್ಯೂರೋ ಫ್ಯಾಕ್ಟ್ ಚೆಕ್ (Fact Check) ಘಟಕ ತಳ್ಳಿಹಾಕಿದೆ.
ಭಾನುವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪಿಬಿ ಫ್ಯಾಕ್ಟ್ ಚೆಕ್ ಘಟಕ, ಈ ಆರೋಪವನ್ನು ಸುಳ್ಳು ಎಂದು ಬಣ್ಣಿಸಿ, "ಆಪರೇಷನ್ ಮಿಡ್‌ನೈಟ್ ಹ್ಯಾಮರ್ ಸಂದರ್ಭದಲ್ಲಿಅಮೆರಿಕ ಭಾರತೀಯ ವಾಯುಪ್ರದೇಶವನ್ನು ಬಳಸಿಲ್ಲ" ಎಂದು ಸ್ಪಷ್ಟಪಡಿಸಿದೆ. ಅಮೆರಿಕ ಸೇನೆಯ ಜಂಟಿ ಸಿಬ್ಬಂದಿ ಮುಖ್ಯಸ್ಥ ಜನರಲ್ ಡಾನ್ ಕೇನ್ ಅವರ ಪತ್ರಿಕಾಗೋಷ್ಠಿಯನ್ನು ಉಲ್ಲೇಖಿಸಿ, ಅಮೆರಿಕ ವಿಮಾನಗಳು ಪರ್ಯಾಯ ಮಾರ್ಗಗಳನ್ನು ಬಳಸಿದ್ದವು ಎಂದು ತಿಳಿಸಲಾಗಿದೆ.
ಈ ಸುದ್ದಯನ್ನೂ ಓದಿ: Israel-Iran Conflict: ಇರಾನಿನ 6 ವಾಯು ನೆಲೆಗಳ ಮೇಲೆ ಇಸ್ರೇಲ್ ದಾಳಿ; 15 ಯುದ್ಧ ವಿಮಾನಗಳು ಧ್ವಂಸ, ವಿಡಿಯೋ ನೋಡಿ
ಈ ಕಾರ್ಯಾಚರಣೆಯು ಇರಾನ್‌ನ ನತಾಂಜ್, ಫೋರ್ಡೊ ಮತ್ತು ಇಸ್ಫಹಾನ್‌ನ ಭೂಗತ ಪರಮಾಣು ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡಿತ್ತು. ಜನರಲ್ ಕೇನ್ ಪೆಂಟಗನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಯಾವುದೇ ಅಮೆರಿಕ ವಿಮಾನವು ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿಲ್ಲ ಎಂದು ತೋರಿಸುವ ನಕ್ಷೆಯನ್ನು ಪ್ರಸ್ತುತಪಡಿಸಿದ್ದರು.
ಕಾರ್ಯಾಚರಣೆಯ ರಹಸ್ಯವನ್ನು ಕಾಪಾಡಲು ಅಮೆರಿಕ ಸೇನೆ ಹಲವು ತಂತ್ರಗಳನ್ನು ಬಳಸಿತು. ಇದರಲ್ಲಿ ಡಿಕಾಯ್‌ಗಳು ಸೇರಿವೆ ಎಂದು ಕೇನ್ ಹೇಳಿದ್ದರು. ಏಳು ಬಿ2 ಸ್ಪಿರಿಟ್ ಬಾಂಬರ್‌ಗಳನ್ನು ಒಳಗೊಂಡ ಪ್ರಮುಖ ತಂಡವು ಪೂರ್ವಕ್ಕೆ ಚಲಿಸಿತ್ತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಂತ ಯಶಸ್ವಿ ದಾಳಿಗಳು ಇರಾನ್‌ನ ಪರಮಾಣು ಸೌಲಭ್ಯಗಳನ್ನು ಗುರಿಯಾಗಿಟ್ಟಿದ್ದವು ಎಂದು ಘೋಷಿಸಿದ್ದಾರೆ. ಇರಾನ್ ಈ ದಾಳಿಗಳನ್ನು ಖಂಡಿಸಿ, ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಕರೆದಿದೆ. ಜತೆಗೆ ತನ್ನ ಪರಮಾಣು ಕಾರ್ಯಕ್ರಮವನ್ನು ಮುಂದುವರಿಸುವುದಾಗಿ ಘೋಷಿಸಿದೆ. ಈ ಕಾರ್ಯಾಚರಣೆಯನ್ನು ಅಮೆರಿಕದ ಸೆಂಟ್ರಲ್ ಕಮಾಂಡ್‌ನ ಜನರಲ್ ಎರಿಕ್ ಕುರಿಲ್ಲಾ ನೇತೃತ್ವದಲ್ಲಿ ನಡೆಸಲಾಯಿತು.