ವಾಷಿಂಗ್ಟನ್: ಅಮೆರಿಕ ಹಾಗೂ ಭಾರತದ ನಡುವೆ ನಡೆಯುತ್ತಿರುವ ತೆರಿಗೆ ಯುದ್ಧ ಶೀಘ್ರದಲ್ಲಿಯೇ ಮುಕ್ತಾಯಗೊಳ್ಳಬಹುದು ಎಂದು (US-India Trade War) ಹೇಳಲಾಗುತ್ತಿದೆ. ಭಾರತದ ಮೇಲೆ ದಂಡ ರೂಪವಾಗಿ ಅಮೆರಿಕ ವಿಧಿಸಿರುವ ಶೇ. 25 ಟ್ಯಾರಿಫ್ (Tariffs) ಅನ್ನು ಸದ್ಯದಲ್ಲೇ ಹಿಂಪಡೆದುಕೊಳ್ಳಬಹುದು ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತನಾಗೇಶ್ವರನ್ (V Anantha Nageswaran) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಶೇ. 25ರಷ್ಟಿರುವ ಪ್ರತಿಸುಂಕವನ್ನು ಅಥವಾ ಬೇಸ್ಲೈನ್ ಟ್ಯಾರಿಫ್ ಅನ್ನು ಶೇ. 10 ಅಥವಾ 15ಕ್ಕೆ ಇಳಿಸಬಹುದು ಎಂದೂ ಸಿಇಎ ಅಭಿಪ್ರಾಯಪಟ್ಟಿದ್ದಾರೆ. ಅಂದರೆ, ಭಾರತದ ಸರಕುಗಳ ಮೇಲೆ ಅಮೆರಿಕ ಪ್ರಸಕ್ತ ಹಾಕಿರುವ ಶೇ. 50 ಒಟ್ಟು ಸುಂಕವು ಶೇ 10-15ಕ್ಕೆ ಇಳಿಕೆಯಾಗಬಹುದು.
ಕೋಲ್ಕತ್ತಾದಲ್ಲಿ ವ್ಯಾಪಾರಿಗಳ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಇಎ, ಮುಂದಿನ ಎರಡು ಎರಡು ತಿಂಗಳಲ್ಲಿ ಹೆಚ್ಚುವರಿ ದಂಡ ರೂಪದ ಸುಂಕ ರದ್ದಾಗಬಹುದು. ಪ್ರತಿಸುಂಕವು ಶೇ 10ರಿಂದ ಶೇ. 15ರಷ್ಟಕ್ಕೆ ಇಳಿಕೆಯಾಗಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಕೆಲ ದಿನಗಳ ಹಿಂದಷ್ಟೇ ಅಮೆರಿಕದ ವ್ಯಾಪಾರ ಪ್ರತಿನಿಧಿ ಬ್ರೆಂಡಾನ್ ಲಿಂಚ್ ಹಾಗೂ ಭಾರತದ ವ್ಯಾಪಾರ ಸಂಧಾನಕಾರ ರಾಜೇಶ್ ಅಗರ್ವಾಲ್ ಇಬ್ಬರೂ ವ್ಯಕ್ತಿಗತವಾಗಿ ಭೇಟಿಯಾಗಿ ಮಾತನಾಡಿದ್ದರು. ಟ್ಯಾರಿಫ್ ಕ್ರಮ ಬಂದ ಬಳಿಕ ಅವರಿಬ್ಬರು ನೇರವಾಗಿ ಸಂಧಿಸಿದ್ದು ಇದೇ ಮೊದಲು ಎನ್ನಲಾಗಿದೆ. ಈ ಭೇಟಿ ಬಳಿಕ ಟ್ಯಾರಿಫ್ ಕ್ರಮ ನಿಲ್ಲುವ ಕೆಲ ಸೂಚನೆ ಸಿಕ್ಕಿರುವ ಸಾಧ್ಯತೆ ಇದೆ.
ಪ್ರಸ್ತುತ ವಾರ್ಷಿಕ 850 ಶತಕೋಟಿ ಡಾಲರ್‌ಗಳಷ್ಟಿರುವ ಭಾರತದ ರಫ್ತು ಬೆಳವಣಿಗೆ, ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ. 25 ರಷ್ಟು ಪ್ರತಿನಿಧಿಸುವ 1 ಟ್ರಿಲಿಯನ್ ಡಾಲರ್‌ಗಳನ್ನು ತಲುಪುವ ಹಾದಿಯಲ್ಲಿದೆ ಎಂದು ಅನಂತನಾಗೇಶ್ವರನ್ ತಿಳಿಸಿದ್ದಾರೆ. ಮೆರಿಕದ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ಕಾರಣಕ್ಕೆ ಭಾರತದ ಮೇಲೆ ಮೊದಲಿಗೆ ಅದು ಶೇ 25ರಷ್ಟು ಪ್ರತಿಸುಂಕ ವಿಧಿಸಿತು. ನಂತರ, ರಷ್ಯನ್ ತೈಲ ಖರೀದಿಸಲಾಗುತ್ತಿದೆ ಎನ್ನುವ ಕಾರಣಕ್ಕೆ ದಂಡ ರೂಪದಲ್ಲಿ ಹೆಚ್ಚುವರಿಯಾಗಿ ಶೇ. 25 ಸುಂಕ ಹಾಕಿತು. ಆಗಸ್ಟ್ 27ರಿಂದ ಭಾರತದ ಸರಕುಗಳ ಮೇಲೆ ಅಮೆರಿಕ ಶೇ. 50ರಷ್ಟು ಸುಂಕ ವಸೂಲಿ ಮಾಡುತ್ತಿದೆ.
ಈ ಸುದ್ದಿಯನ್ನೂ ಓದಿ: Trade Deal: ಅಮೆರಿಕ-ಭಾರತ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗೆ ಮರುಜೀವ; ಎರಡೂ ದೇಶಗಳಿಂದ ಸಕಾರಾತ್ಮಕ ಸ್ಪಂದನೆ
ಅಮೆರಿಕಕ್ಕೆ ಭಾರತದಿಂದ ರಫ್ತಾಗುವ ಸರಕುಗಳಲ್ಲಿ ಶೇ. 55ರಷ್ಟವು ಶೇ. 50ರ ಸುಂಕಕ್ಕೆ ಬಲಿಯಾಗುತ್ತಿವೆ. ಜವಳಿ, ರಾಸಾಯನಿಕ, ಒಡವೆ, ಯಂತ್ರೋಪಕರಣ ಇತ್ಯಾದಿ ವಸ್ತುಗಳು ಹಾಗೂ ಉದ್ದಿಮೆಗಳಿಗೆ ಹಿನ್ನಡೆಯಾಗುತ್ತಿದೆ. ಆದರೆ ಇದೀಗ ಅದು ಇಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.