Vaishno Devi Landslide: ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆ; ವೈಷ್ಣೋದೇವಿ ಮಾರ್ಗ ಮಧ್ಯೆ ಗುಡ್ಡ ಕುಸಿದು 15 ಮಂದಿ ಸಾವು
Jammu Kashmir: ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ವೈಷ್ಣೋದೇವಿ ಮಾರ್ಗದ ಅರ್ಧಕುವರಿಯ ಇಂದ್ರಪ್ರಸ್ಥ ಭೋಜನಾಲಯದ ಬಳಿ ಭೂಕುಸಿತ ಸಂಭವಿಸಿ ಕನಿಷ್ಠ 15 ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಹಲವೆಡೆ ಭಾರಿ ಮಳೆಯಾಗುತ್ತಿದ್ದು, ವೈಷ್ಣೋದೇವಿ ಮಾರ್ಗದ ಅರ್ಧಕುವರಿಯ ಇಂದ್ರಪ್ರಸ್ಥ ಭೋಜನಾಲಯದ ಬಳಿ ಭೂಕುಸಿತ ಸಂಭವಿಸಿ (Vaishno Devi Landslide) ಕನಿಷ್ಠ 15 ಯಾತ್ರಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ ನ್ಯೂಸ್18 ವೆಬ್‌ಸೈಟ್ ವರದಿ ಮಾಡಿದೆ. ಮೃತದೇಹಗಳನ್ನು ಕತ್ರಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಕನಿಷ್ಠ 6 ಯಾತ್ರಿಕರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಇದಕ್ಕಾಗಿ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿಯು ಕೈ ಜೋಡಿಸಿದೆ.
Rescue and Relief Operations in Ardhkuwari, Katra, Jammu region
— 🇮🇳CRPF🇮🇳 (@crpfindia) August 26, 2025
Due to continuous heavy rain in Katra and nearby area today, landslides near Ardhkuwari injured several pilgrims. 6 Bn #CRPF's troopers swiftly launched rescue ops, safely evacuating the injured to CHC Katra. The… pic.twitter.com/eD3rKpsdMx
ವೈಷ್ಣೋದೇವಿ ಭೂಕುಸಿತದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದುಃಖ ವ್ಯಕ್ತಪಡಿಸಿದ್ದು, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಮತ್ತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ʼʼಸ್ಥಳೀಯ ಅಧಿಕಾರಿಗಳು ಮತ್ತು ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿವೆʼʼ ಎಂದು ಅವರು ಹೇಳಿದ್ದಾರೆ.
ವೈಷ್ಣೋದೇವಿ ಯಾತ್ರೆ ಸ್ಥಗಿತ
ಈ ಪ್ರದೇಶದಲ್ಲಿ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ವೈಷ್ಣೋದೇವಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ದೇವಾಲಯ ಮಂಡಳಿ ತಿಳಿಸಿದೆ. ಪ್ರಮುಖ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವುದರಿಂದ ಜಮ್ಮುವಿನ ಹಲವು ಜಿಲ್ಲೆಗಳಲ್ಲಿ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ದೇವಾಲಯ ಮಂಡಳಿಯ ಮೂಲಕ ನೀಡಲಾದ ಎಚ್ಚರಿಕೆಯನ್ನು ಪಾಲಿಸುವಂತೆ ಅಧಿಕಾರಿಗಳು ಯಾತ್ರಿಕರಿಗೆ ಸೂಚಿಸಿದ್ದಾರೆ.
ರೆಡ್ ಅಲರ್ಟ್ ಘೋಷಣೆ
ಭಾರತೀಯ ಹವಾಮಾನ ಇಲಾಖೆ (IMD) ಜಮ್ಮು ಮತ್ತು ಕಾಶ್ಮೀರದಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಗುಡುಗು ಸಹಿತ ಮತ್ತಷ್ಟು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಕಥುವಾ, ಸಾಂಬಾ, ದೋಡಾ, ಜಮ್ಮು, ರಾಂಬನ್ ಮತ್ತು ಕಿಶ್ತ್ವಾರ್ ಜಿಲ್ಲೆಗಲ ಜನರು ಅತೀವ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಚೆನಾಬ್ ನದಿ ಅಪಾಯದ ಮಟ್ಟಮೀರಿ ಹರಿಯುತ್ತಿದ್ದು, ದುರ್ಬಲ ಪ್ರದೇಶಗಳಲ್ಲಿ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ (SDRF) ತಂಡಗಳನ್ನು ನಿಯೋಜಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Cloudburst: ಕಾಶ್ಮೀರದ ಕಥುವಾದಲ್ಲಿ ಮೇಘಸ್ಫೋಟ: ನಾಲ್ವರು ಸಾವು, ಹಲವರಿಗೆ ಗಾಯ
ದೋಡಾದಲ್ಲಿ ಮೇಘಸ್ಪೋಟ; ಪ್ರವಾಹಕ್ಕೆ ಸಿಲುಕಿ ನಾಲ್ವರ ಸಾವು
ಇನ್ನು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಮಂಗಳವಾರ (ಆಗಸ್ಟ್ 26) ಭಾರಿ ಮೇಘಸ್ಪೋಟ ಸಂಭವಿಸಿದೆ. ಮೇಘಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಭಾರಿ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಜಮ್ಮು ವಿಭಾಗದಾದ್ಯಂತ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಜನರು ಜಲಮೂಲಗಳು ಮತ್ತು ಭೂಕುಸಿತ ಪೀಡಿತ ಪ್ರದೇಶಗಳಿಂದ ದೂರವಿರಲು ಸೂಚಿಸಲಾಗಿದೆ. ವಾರಾಂತ್ಯದಲ್ಲಿ ಜಮ್ಮುವಿನಲ್ಲಿ ದಾಖಲೆಯ ಮಳೆಯಾಗಿದ್ದು, 24 ಗಂಟೆಗಳಲ್ಲಿ 190.4 ಮಿಮೀ ವರ್ಷಧಾರೆ ಸುರಿದಿದೆ. ಇದು ಆಗಸ್ಟ್‌ನಲ್ಲಿ ಸುರಿದ ಶತಮಾನದ ಎರಡನೇ ಅತಿ ಹೆಚ್ಚು ಮಳೆಯಾಗಿದೆ.