ದೆಹಲಿಯಲ್ಲಿ ಭಯೋತ್ಪಾದನಾ ದಾಳಿ ಎಚ್ಚರಿಕೆ ಬೆನ್ನಲ್ಲೇ ಪಂಜಾಬ್, ಕಾಶ್ಮೀರದಲ್ಲಿ ಐಇಡಿ ಪತ್ತೆ; ಹೈ ಅಲರ್ಟ್
Terror Attack: ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಸಂಘಟನೆಯಿಂದ ದೆಹಲಿಯಲ್ಲಿ ಭಯೋತ್ಪಾದನಾ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ ಕೆಲವೇ ದಿನಗಳ ನಂತರ ಪಂಜಾಬ್ ಮತ್ತು ಕಾಶ್ಮೀರದಲ್ಲಿ ಎರಡು ಐಇಡಿಗಳು ಪತ್ತೆಯಾಗಿವೆ. ಪಂಜಾಬ್‌ನ ಅಮೃತಸರದಲ್ಲಿ ರಯ್ಯಾ ಪೊಲೀಸ್ ಪೋಸ್ಟ್ ಸಮೀಪ ಸಂಶಯಾಸ್ಪದ ಚೀಲದಲ್ಲಿ ಐಇಡಿ ಪತ್ತೆಯಾಗಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಫೆ. 21: ಪಂಜಾಬ್ ಮತ್ತು ಕಾಶ್ಮೀರದಲ್ಲಿ ಎರಡು ಐಇಡಿಗಳು ಪತ್ತೆಯಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ (IEDs found in Punjab and Kashmir). ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಸಂಘಟನೆಯಿಂದ ದೆಹಲಿಯಲ್ಲಿ ಭಯೋತ್ಪಾದನಾ ದಾಳಿಯ (terror attack) ಬಗ್ಗೆ ಎಚ್ಚರಿಕೆ ನೀಡಿತ್ತು. ನಂತರ ಭಾರತದಲ್ಲಿ ಭದ್ರತಾ ಸಂಸ್ಥೆಗಳು ಹೈ ಅಲರ್ಟ್ ಘೋಷಿಸಿವೆ. ಇದಾದ ಕೆಲವೇ ದಿನಗಳಲ್ಲಿ ಐಇಡಿ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಪಂಜಾಬ್‌ನ ಅಮೃತಸರದಲ್ಲಿ ಶುಕ್ರವಾರ (ಫೆಬ್ರವರಿ 20) ರಯ್ಯಾ ಪೊಲೀಸ್ ಪೋಸ್ಟ್ ಸಮೀಪ ಸಂಶಯಾಸ್ಪದ ಚೀಲದಲ್ಲಿ ಐಇಡಿ ಪತ್ತೆಯಾಗಿದೆ. ತಕ್ಷಣವೇ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕಾಗಿಮಿಸಿ, ಐಇಡಿಯನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಷ್ಟಾಚಾರದ ಪ್ರಕಾರ, ಅದನ್ನು ನಿಷ್ಕ್ರಿಯಗೊಳಿಸಲಾಯಿತು ಎಂದು ಎಸ್‌ಎಸ್‌ಪಿ ಸೊಹೈಲ್ ಖಾಸಿಂ ಮಿರ್ ಹೇಳಿದರು.
ಅದೇ ದಿನ, ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಯ ಸಫಾಪೋರಾದಲ್ಲಿ ಮತ್ತೊಂದು ಐಇಡಿ ಪತ್ತೆಯಾಗಿದೆ. ಸೇನೆಯ ಬಾಂಬ್ ಪತ್ತೆ ದಳ (ಬಿಡಿಎಸ್) ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಐಇಡಿಯನ್ನು ಪತ್ತೆಹಚ್ಚಿ ಕೆಲವೇ ಗಂಟೆಗಳಲ್ಲಿ ಅದನ್ನು ನಿಷ್ಕ್ರಿಯಗೊಳಿಸಿದರು.
ಮತ್ತೆ ಪಾಕ್ ನಾಟಕ ಬಟಾಬಯಲು! ದೇಶದಲ್ಲಿ ಭಯೋತ್ಪಾದನೆ ಇದೆ ಎಂದು ಒಪ್ಪಿಕೊಂಡ ಸಂಸದೆ
ಉತ್ತರ ಕಾಶ್ಮೀರದಲ್ಲಿ ಕಳೆದ ವಾರದಲ್ಲಿ ಪತ್ತೆಯಾದ ಮೂರನೇ ಐಇಡಿ ಇದಾಗಿದೆ. ಗುರುವಾರ (ಫೆಬ್ರವರಿ 19) ತಂಗ್‌ಮರಾಗ್ ರಸ್ತೆಯಲ್ಲಿ ಒಂದು ಮತ್ತು ಬಾರಾಮುಲ್ಲಾದಲ್ಲಿ ಒಂದು ಐಇಡಿ ಪತ್ತೆಯಾಗಿದೆ. ದೆಹಲಿಯ ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಗುರಿಯಾಗಿಸಿಕೊಂಡು ಲಷ್ಕರ್ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಫೆಬ್ರವರಿ 6ರಂದು ಪಾಕಿಸ್ತಾನದ ಇಸ್ಲಾಮಾಬಾದ್‌ನ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 30ಕ್ಕೂ ಹೆಚ್ಚು ಜನರು ಮೃತಪಟ್ಟ ಘಟನೆಗೆ ಸೇಡು ತೀರಿಸಿಕೊಳ್ಳಲು ಹಫೀಜ್ ಸಯೀದ್ ನೇತೃತ್ವದ ಸಂಘಟನೆ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಇಸ್ಲಾಮಿಕ್ ಸ್ಟೇಟ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಹಳೆಯ ದೆಹಲಿಯ ಚಾಂದನಿ ಚೌಕ್ ಪ್ರದೇಶದಲ್ಲಿರುವ ಒಂದು ದೇವಾಲಯವು ಭಯೋತ್ಪಾದಕರ ಗುರಿಗಳಲ್ಲೊಂದಾಗಿರಬಹುದು ಎಂದು ಗುಪ್ತಚರ ಮಾಹಿತಿಗಳು ಸೂಚಿಸಿವೆ. ಕೆಂಪು ಕೋಟೆಯ ಬಳಿ ಸೇರಿದಂತೆ ಸೂಕ್ಷ್ಮ ವಲಯಗಳಲ್ಲಿ ಮತ್ತು ಸುತ್ತಮುತ್ತ ಐಇಡಿ ದಾಳಿಯನ್ನು ಯೋಜಿಸುತ್ತಿರುವ ಭಯೋತ್ಪಾದಕರು ಈ ಪಿತೂರಿಯಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ.
ಮೂರು ತಿಂಗಳ ಹಿಂದೆ ಕೆಂಪು ಕೋಟೆಯ ಬಳಿ ನಡೆದ ಭೀಕರ ಕಾರು ಸ್ಫೋಟದಲ್ಲಿ 12 ಜನರು ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡ ನಂತರ ಅಲ್ಲಿಯೂ ಬಾಂಬ್ ದಾಳಿ ನಡೆದಿತ್ತು. ಈ ಸ್ಫೋಟದ ಹಿಂದೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಬೆಂಬಲಿತ ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್ ಕೈವಾಡವಿತ್ತು.
ಇತ್ತೀಚೆಗೆ, ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ತಂಡದ ವರದಿಯು ಕೆಂಪು ಕೋಟೆ ಸ್ಫೋಟದಲ್ಲಿ ಜೈಶ್-ಇ-ಮೊಹಮ್ಮದ್ ಕೈವಾಡವಿದೆ ಎಂದು ತಿಳಿಸಿತ್ತು.