Vaishno Devi Yatra: ಭಾರೀ ಪ್ರವಾಹದಿಂದ ವೈಷ್ಣೋದೇವಿ ಯಾತ್ರೆ ತಾತ್ಕಾಲಿಕ ಸ್ಥಗಿತ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಕಾರಣ ವೈಷ್ಣೋದೇವಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಅಕ್ಟೋಬರ್ 5ರಿಂದ 7 ರ ವರೆಗೆ ನಿಷೇಧ ಹೇರಿದ್ದು, ಹವಾಮಾನ ಇಲಾಖೆ ನೀಡಿದ ಮಾಹಿತಿ ಆಧಾರದ ಮೇಲೆ ಈ ಆದೇಶ ಹೊರಡಿಸಲಾಗಿದೆ.

ವೈಷ್ಣೋದೇವಿ ಯಾತ್ರೆ -

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪ್ರದೇಶದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ. ಈ ಹಿನ್ನಲೆ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ವೈಷ್ಣೋದೇವಿ ದೇವಸ್ಥಾನಕ್ಕೆ (Vaishno Devi Temple) ನಾಳೆಯಿಂದ ಮೂರು ದಿನಗಳ ಕಾಲ ಯಾತ್ರೆಯನ್ನು (Vaishno Devi Yatra) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ದೇವಳದ ಶ್ರೈನ್ ಬೋರ್ಡ್ ಅಧಿಕೃತ ಮಾಹಿತಿ ಹೊರಡಿಸಿದ್ದು, ಹವಾಮಾನ ಇಲಾಖೆ ನೀಡಿದ ಮಾಹಿತಿ ಆಧಾರದ ಮೇಲೆ ದೇವಳದ ಆಡಳಿತ ಈ ನಿರ್ಧಾರ ತೆಗೆದುಕೊಂಡಿದೆ.
ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಯಾತ್ರೆಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನು ವೈಷ್ಣೋ ದೇವಿ ದೇವಾಲಯವು ಭಾರತದ ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ತ್ರಿಕೂಟ ಬೆಟ್ಟಗಳಲ್ಲಿ ನೆಲೆಗೊಂಡಿರುವ ಈ ದೇವಾಲಯವು ದುರ್ಗಾ ದೇವಿಯ ಅವತಾರವೆಂದು ಪರಿಗಣಿಸಲ್ಪಟ್ಟ ಮಾತಾ ವೈಷ್ಣೋ ದೇವಿಗೆ ಸಮರ್ಪಿತವಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ದೇವಿಯ ಆಶೀರ್ವಾದ ಪಡೆಯಲು ಈ ಪವಿತ್ರ ಗುಹಾ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಕಳೆದ ನವರಾತ್ರಿ ಸಂದರ್ಭದಲ್ಲಿಯೂ ಸುಮಾರು 1.70 ಲಕ್ಷಕ್ಕೂ ಹೆಚ್ಚು ಭಕ್ತರು ಶ್ರೀ ಮಾತಾ ವೈಷ್ಣೋ ದೇವಿ ದೇವಾಲಯಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಯಾತ್ರೆಗೆ ಆಗಮಿಸಿದ ಭಕ್ತಾದಿಗಳಿಗೆ ಯಾವುದೇ ಅಡಚಣೆಗಳು ಎದುರಾಗಿಲ್ಲ
ಎಂದು ಮಾಹಿತಿ ನೀಡಿದ್ದಾರೆ.
ಭಾರತ ಹವಾಮಾನ ಇಲಾಖೆ (IMD) ಅನಾನುಕೂಲಕರ ಹವಾಮಾನ ಎಚ್ಚರಿಕೆಯ ನೀಡಿದ್ದು, ಈ ಹಿನ್ನೆಲೆಯಲ್ಲಿ ಅಕ್ಟೋಬರ್ 5ರಿಂದ 7ರವರೆಗೆ ಶ್ರೀ ಮಾತಾ ವೈಷ್ಣೋ ದೇವಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಶ್ರೈನ್ ಬೋರ್ಡ್ ತನ್ನ ಅಧಿಕೃತ X (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಪ್ರಕಟಿಸಿದೆ.
ಅಕ್ಟೋಬರ್ 8ರಿಂದ ಯಾತ್ರೆ ಪುನರಾರಂಭವಾಗಲಿದೆ ಎಂದು ಬೋರ್ಡ್ ತಿಳಿಸಿದ್ದು, ದೇವಳ ಪ್ರವೇಶಾತಿ ಹಾಗೂ ಪುನಾರಂಭಕ್ಕೆ ಸೇರಿದಂತೆ ಇತರೆ ಮಾಹಿತಿಗಳನ್ನು ಭಕ್ತರು ಅಧಿಕೃತ ಪೇಜ್ ಗಳ ಮೂಲಕ ಪಡೆಯುವಂತೆ ಮನವಿ ಮಾಡಿದೆ.
ಇನ್ನು ಕಳೆದ ಆಗಸ್ಟ್ 26ರಂದು ಭಾರೀ ಮಳೆಯಿಂದಾಗಿ ತ್ರಿಕೂಟ ಬೆಟ್ಟಗಳಲ್ಲಿ ದೊಡ್ಡ ಭೂಕುಸಿತ ಸಂಭವಿಸಿತ್ತು. ಭಾರೀ ಮಳೆ, ಪ್ರವಾಹದಿಂದ ಈ ಪ್ರದೇಶದಲ್ಲಿ ಸಾವು-ನೋವುಗಳು ಸಂಭವಿಸಿದ್ದವು. ಈ ದುರಂತ ಘಟನೆಯಲ್ಲಿ 34 ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದರು, ಇನ್ನೂ ಅನೇಕರು ಗಾಯಗೊಂದಿದ್ದರು. ಈ ಪರಿಸ್ಥಿತಿಯ ತೀವ್ರತೆಯನ್ನು ಪರಿಗಣಿಸಿ, ಆಡಳಿತವು ತಕ್ಷಣವೇ ವೈಷ್ಣೋದೇವಿ ಯಾತ್ರೆಯನ್ನು ಸ್ಥಗಿತಗೊಳಿಸಿತ್ತು.