ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಸುರಿದ ಭಾರಿ ಮಳೆ, ಭೂಕುಸಿತ ಮತ್ತು ಪ್ರತಿಕೂಲ ಹವಾಮಾನದ ಕಾರಣದಿಂದ ಸ್ಥಗಿತಗೊಂಡಿದ್ದ ವೈಷ್ಣೋ ದೇವಿ ಯಾತ್ರೆ (Vaishno Devi Yatra) ಪುನರಾರಂಭಕ್ಕೆ ಮುಹೂರ್ತ ನಿಗದಿಯಾಗಿದೆ. ʼʼಸೆಪ್ಟೆಂಬರ್ 14ರಂದು ವೈಷ್ಣೋ ದೇವಿ ಯಾತ್ರೆಯನ್ನು ಮತ್ತೆ ಆರಂಭಿಸಲಾಗುತ್ತದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭೂಕುಸಿತ, ಮೇಘಸ್ಫೋಟ ಸೇರಿದಂತೆ ಪ್ರತಿಕೂಲ ಹವಾಮಾನದ ಕಾರಣದಿಂದ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ವೈಷ್ಣೋದೇವಿ ದೇವಾಲಯದ ಯಾತ್ರೆ ಕಳೆದ 19 ದಿನಗಳಿಂದ ಸ್ಥಗಿತಗೊಂಡಿತ್ತು.
ʼʼಜೈ ಮಾತಾಜಿ. ವಾತಾವರಣ ಉತ್ತಮವಾಗಿದ್ದರೆ ವೈಷ್ಣೋ ದೇವಿ ಯಾತ್ರೆ ಸೆಪ್ಟೆಂಬರ್ 14ರಂದು ಪುನರಾರಂಭಗೊಳ್ಳಲಿದೆ. ವಿವರಗಳಿಗೆ ಮತ್ತು ಬುಕ್ಕಿಂಗ್‌ಗಾಗಿ ವೆಬ್‌ಸೈಟ್ ವಿಳಾಸ www.maavaishnodevi.orgಗೆ ಭೇಟಿ ನೀಡಿʼʼ ಎಂದು ಶ್ರೀ ಮಾತಾ ವೈಷ್ಣೋ ದೇವಿ ಶ್ರಿನ್ ಬೋರ್ಡ್ (SMVDB) ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಎಸ್‌ಎಂವಿಡಿಬಿ ಎಕ್ಸ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: Vaishno Devi Landslide: ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆ; ವೈಷ್ಣೋದೇವಿ ಮಾರ್ಗ ಮಧ್ಯೆ ಗುಡ್ಡ ಕುಸಿದು 15 ಮಂದಿ ಸಾವು
ಏನಾಗಿತ್ತು?
ಆಗಸ್ಟ್ 26ರಂದು ಭಾರಿ ಮಳೆಯ ಕಾರಣದಿಂದ ತ್ರಿಕೂಟ ಬೆಟ್ಟದಲ್ಲಿ ಭೂಕುಸಿತ ಉಂಟಾಗಿತ್ತು. ಈ ವೇಳೆ ಸುಮಾರು 34 ಯಾತ್ರಿಕರು ಜೀವ ಕಳೆದುಕೊಂಡು ಹಲವರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯಾಡಳಿತ ವೈಷ್ಣೋ ದೇವಿ ಯಾತ್ರೆಯನ್ನು ಸ್ಥಗಿತಗೊಳಿಸಿತ್ತು. ಅದಾದ ಬಳಿಕ ಈ ದಾರಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಹೀಗಾಗಿ ನೂರಾರು ಮಂದಿ ಕತ್ರಾದಲ್ಲಿ ಉಳಿದು ಯಾತ್ರೆ ಪುನರಾರಂಭಕ್ಕೆ ಕಾಯುತ್ತಿದ್ದರು. ಈ ನಿರ್ಧಾರದಿಂದ ಅವರಿಗೆ ಸಮಾಧಾನವಾದಂತಾಗಿದೆ. ಅದಾಗ್ಯೂ ಈ ನಿರ್ಧಾರ ಹವಾಮಾನವನ್ನು ಹೊಂದಿಕೊಂಡಿದೆ.
ದೇವಸ್ಥಾನದ ಆಡಳಿತ ಮಂಡಳಿ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದು, ಭಕ್ತರ ಅನುಕೂಲಕ್ಕಾಗಿ ವ್ಯವಸ್ಥೆ ಮಾಡುತ್ತಿದೆ. ವೈಷ್ಣೋ ದೇವಿ ದೇವಸ್ಥಾನ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಭಕ್ತರು ದೇಶದ ವಿವಿದ ಭಾಗಗಳಿಂದ ಆಗಮಿಸುತ್ತಾರೆ. ದುರ್ಗಾ ದೇವಿಯ ಅವತಾರವಾದ ಮಾತಾ ವೈಷ್ಣೋ ದೇವಿಯ ಈ ದೇಗುಲ ಜಮ್ಮು ಮತ್ತು ಕಾಶ್ಮೀರದ ತ್ರಿಕೂಟ ಬೆಟ್ಟದಲ್ಲಿದೆ.