ನವದೆಹಲಿ, ಆ.18: ವಂದೇ ಮಾತರಂ (Vande Mataram) ವಿವಾದದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಮಹಾತ್ಮಾ ಗಾಂಧಿ ವಿರುದ್ಧವೂ ಪ್ರಕರಣ ದಾಖಲಿಸಿ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಮತ್ತು ನಂತರ ಗೋವಾದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಪಠಣದ ಕುರಿತು ನಡೆಯುತ್ತಿರುವ ವಿವಾದಗಳ ಮಧ್ಯೆ, ಮಲ್ಲಿಕಾರ್ಜುನ ಖರ್ಗೆ ಅವರು, ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ (Rahul Gandhi) ವಿರುದ್ಧ ದಾಖಲಾಗಿರುವ ದೂರನ್ನು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಗೀತೆಯನ್ನು ಅದರ ಹಿಂದಿನ ಆವೃತ್ತಿಯಲ್ಲಿ ಹಾಡುವುದು ಅಪರಾಧವಾಗಿದ್ದರೆ, ಮಹಾತ್ಮಾ ಗಾಂಧಿ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ವಿರುದ್ಧವೂ ದೂರು ದಾಖಲಿಸಬೇಕು ಎಂದು ಅವರು ಹೇಳಿದರು.
ಶನಿವಾರ (ಆ.15) ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗೀತೆಯ ಪೂರ್ಣ ಪಠಣವನ್ನು ನಿಲ್ಲಿಸುವಂತೆ ಸೂಚಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮೇಲೆ ಬಿಜೆಪಿ ವಾಗ್ದಾಳಿ ನಡೆಸಿತ್ತು. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿ, ನಂತರ ವಂದೇ ಮಾತರಂ ಗೀತೆ ಹಾಡಲಾಯಿತು.
ವಂದೇ ಮಾತರಂ ವಿವಾದ: ಕ್ಷಮೆಯಾಚಿಸುವಂತೆ ಸೋನಿಯಾ ಗಾಂಧಿಗೆ ಒತ್ತಾಯಿಸಿದ ಬಂಕಿಮ್ ಚಟ್ಟೋಪಾಧ್ಯಾಯರ ಕುಟುಂಬ
ಗಾಯಕರು ಪೂರ್ಣ ಆವೃತ್ತಿಯನ್ನು ಹಾಡಲು ಮುಂದಾದಾಗ ಸೋನಿಯಾ ಗಾಂಧಿ ಅವರು, ಖರ್ಗೆ ಕಡೆಗೆ ಸನ್ನೆ ಮಾಡಿ ನಂತರ ಪೂರ್ಣ ಹಾಡನ್ನು ಹಾಡದಂತೆ ನಿಲ್ಲಿಸಿದರು ಎನ್ನಲಾಗಿದೆ. ಇದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಬಹಳ ಸಮಯದಿಂದ ನಿಂತಿದ್ದ ಖರ್ಗೆಗೆ ಕುರ್ಚಿ ವ್ಯವಸ್ಥೆ ಮಾಡುವಂತೆ ಸೋನಿಯಾ ಗಾಂಧಿ ಸನ್ನೆ ಮಾಡಿದರು ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ವಂದೇ ಮಾತರಂ ಹಾಡುವಿಕೆಯನ್ನು ಅಡ್ಡಿಪಡಿಸಲು ಯತ್ನಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸುವಂತೆ ಕೋರಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಸೋಮವಾರ (ಆ.17) ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
“ಮಹಾತ್ಮಾ ಗಾಂಧಿಯವರು ಹಾಡಿದ ಅದೇ ವಂದೇ ಮಾತರಂ ಗೀತೆಯನ್ನೇ ನಾವೂ ಹಾಡಿದ್ದೇವೆ. ಜವಾಹರಲಾಲ್ ನೆಹರು ಅವರು ಹಾಡಿದ್ದನ್ನೇ ನಾವೂ ಹಾಡಿದ್ದೇವೆ. ಕಳೆದ 18 ವರ್ಷಗಳಿಂದ ಅವರು ಏನನ್ನು ಹಾಡಿದ್ದಾರೋ, ಅದನ್ನೇ ನಾವೂ ಹಾಡಿದ್ದೇವೆ. ಇದರಲ್ಲಿ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರ್ಕಾರ ಇಷ್ಟೇ ಗೀತೆಯನ್ನು ಹಾಡಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಕೂಡ ಕಳೆದ 12 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮತ್ತು ಇಷ್ಟು ವರ್ಷಗಳಿಂದ ಅದೇ ವಂದೇ ಮಾತರಂ ಗೀತೆಯನ್ನೇ ಹಾಡುತ್ತಾ ಬಂದಿದ್ದಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ʼವಂದೇ ಮಾತರಂʼ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ: ಇನ್ಮುಂದೆ ಸಿಗಲಿದೆ ಕಾನೂನು ರಕ್ಷಣೆ
“ಒಂದು ವೇಳೆ ಇದು ಅಪರಾಧವಾಗಿದ್ದರೆ, ಅವರು ಕಳೆದ 18 ವರ್ಷಗಳಿಂದ ಇದೇ ಅಪರಾಧವನ್ನು ಮಾಡುತ್ತಿದ್ದಾರೆ ಎಂದರ್ಥ. ಇದು ನಿಜಕ್ಕೂ ಅಪರಾಧವೇ ಆಗಿದ್ದರೆ, ಮೊದಲು ಮಹಾತ್ಮಾ ಗಾಂಧಿಯವರ ವಿರುದ್ಧ ಕೇಸ್ ದಾಖಲಿಸಲಿ. ನೆಹರು ಅವರ ವಿರುದ್ಧವೂ ಕೇಸ್ ದಾಖಲಿಸಲಿ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ಸಭೆಗಳು, ಶಾಲೆಗಳು ಮತ್ತು ಅಧಿಕೃತ ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ಇತರ ಸ್ಥಳಗಳಲ್ಲಿ ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡುವುದನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿತು. ವಂದೇ ಮಾತರಂ ಹಾಡುವಿಕೆಯನ್ನು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ಅಥವಾ ತಡೆಯುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿತು.