ದೆಹಲಿ, ಡಿ. 8: ಬಂಕಿಮ ಚಂದ್ರ ಚಟರ್ಜಿ ರಚಿಸಿದ ʼವಂದೇ ಮಾತರಂʼ (Vande Mataram) ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ನವೆಂಬರ್ 8ರಂದು ಲೋಕಸಭೆಯಲ್ಲಿ ವಿಶೇಷ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ (Jawaharlal Nehru) ವಿರುದ್ಧ ಕಿಡಿಕಾರಿದರು. ಮುಹಮ್ಮದ್ ಅಲಿ ಜಿನ್ನಾ ಅವರನ್ನು ಅನುಸರಿಸಿ ಜವಾಹರಲಾಲ್ ನೆಹರೂ 'ವಂದೇ ಮಾತರಂ' ಅನ್ನು ವಿರೋಧಿಸಿದ್ದರು ಮೋದಿ ಆರೋಪಿಸಿದರು. ಅದಾದ ಬಳಿ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಮಾತನಾಡಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು. ಮೋದಿ ಪ್ರಧಾನಿ ಹುದ್ದೆಯಲ್ಲಿರುವಷ್ಟು ಸಮಯ ನೆಹರೂ ದೇಶಕ್ಕಾಗಿ ಜೈಲಿನಲ್ಲಿ ಕಾಲ ಕಳೆದಿದ್ದರು ಎಂದು ವಾಗ್ದಾಳಿ ನಡೆಸಿದರು.
ನೆಹರೂ ಅವರನ್ನು ಟೀಕಿಸುವ ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರನ್ನು ಪ್ರಿಯಾಂಕಾ ತರಾಟೆಗೆ ತೆಗೆದುಕೊಂಡರು. ʼʼಮೋದಿ ಪ್ರಧಾನಿಯಾಗಿ ಸುಮಾರು 12 ವರ್ಷ ಕಳೆದಿದ್ದಾರೆ. ಹೆಚ್ಚುಕಮ್ಮಿ ಅಷ್ಟೇ ವರ್ಷಗಳ ಕಾಲ ನೆಹರೂ ಜೈಲಿನಲ್ಲಿದ್ದರು. ದೇಶ ಸ್ವತಂತ್ರ್ಯಗೊಂಡ ಸಮಯದಲ್ಲಿ ಸೆರೆವಾಸ ಅನುಭವಿಸಿದ್ದ ನೆಹರೂ ಬಳಿಕ ಪ್ರಧಾನಿಯಾದರು. ಅವರು ಸುಮಾರು 17 ವರ್ಷ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದರುʼʼ ಎಂದು ತಿಳಿಸಿದರು.
ಪ್ರಿಯಾಂಕಾ ಗಾಂಧಿ ಅವರ ಮಾತು:
ʼʼನೆಹರೂ ಅವರನ್ನು ನೀವು ಎಷ್ಟೇ ಟೀಕಿಸಿಬಹುದು. ಆದರೆ ಅವರು ಇಸ್ರೋ (Indian Space Research Organisation) ಸ್ಥಾಪಿಸದಿದ್ದರೆ ನಿಮಗೆ ಮಂಗಳಯಾನ ಕೈಗೊಳ್ಳಲು ಆಗುತ್ತಿರಲಿಲ್ಲ. ಅವರು ಡಿಆರ್‌ಡಿಒ ಆರಂಭಿಸದಿದ್ದರೆ ಈಗ ತೇಜಸ್ ಇರುತ್ತಿರಲಿಲ್ಲ. ಅವರ ಐಐಟಿ ಮತ್ತು ಐಐಎಂ ತೆರೆಯದಿದ್ದರೆ ಐಟಿ ಕ್ಷೇತ್ರ ಇಷ್ಟು ಬಲಗೊಳ್ಳುತ್ತಿರಲಿಲ್ಲ. ಎಐಐಎಂಎಸ್‌ಗೆ ಶಂಕು ಸ್ಥಾಪನೆ ನೆರವೇರಿಸದಿದ್ದರೆ ಕೊರೋನಾದಂತಹ ಸವಾಲು ಎದುರಿಸಲು ಹೇಗೆ ಸಾಧ್ಯವಿತ್ತು?ʼʼ ಎಂದು ಅವರು ಪ್ರಶ್ನಿಸಿದರು. ʼʼನೆಹರೂ ದೇಶಕ್ಕಾಗಿ ಜೀವಿಸಿದರು ಮತ್ತು ದೇಶಕ್ಕಾಗಿ ಪ್ರಾಣ ಅರ್ಪಿಸಿದರುʼʼ ಎಂದು ತಿಳಿಸಿದರು.
"ಜಿನ್ನಾಗೆ ಮಣಿದ ನೆಹರು ಭಾರತೀಯರಿಗೆ ಮೋಸ ಮಾಡಿದರು"; ಸಂಸತ್‌ನಲ್ಲಿ ಮೋದಿ ಹೀಗೆ ಹೇಳಿದ್ಯಾಕೆ?
ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ನೆಹರೂ ಸುಮಾರು 9 ಬಾರಿ ಜೈಲಿಗೆ ಹೋಗಿದ್ದರು. ಅವರು ಸುಮಾರು 3,200 ದಿನಗಳು ಅಂದರೆ ಬರೋಬ್ಬರಿ 9 ವರ್ಷಗಳ ಕಾಲ ಸೆರೆಮನೆಯಲ್ಲಿದ್ದರು. ಅಂತಹ ನೆಹರೂ ಅವರನ್ನು ಮೋದಿ ಅವಮಾನಿಸುತ್ತಿದ್ದಾರೆ ಎಂದು ಪ್ರಿಯಾಂಕಾ ಟೀಕಿಸಿದರು.
ಜವಾಹರಲಾಲ್ ನೆಹರೂ ಅವರಿಗೆ ಮೋದಿ ಮಾಡಿದ ಅವಮಾನಗಳ ಪಟ್ಟಿಯನ್ನು ತಯಾರಿಸುವಂತೆ ಅವರು ಸಲಹೆ ನೀಡಿದರು. "999 ಆಗಿರಲಿ ಅಥವಾ 9,999 ಆಗಿರಲಿ, ಒಂದು ಪಟ್ಟಿಯನ್ನು ಮಾಡಿ. ನಂತರ ನಾವು ʼವಂದೇ ಮಾತರಂʼ ಬಗ್ಗೆ 10 ಗಂಟೆಗಳ ಕಾಲ ಚರ್ಚೆ ನಡೆಸುವಂತೆ ಸಮಯ ನಿಗದಿ ಪಡಿಸಬಹುದು. ಎಷ್ಟು ಹೊತ್ತು ಬೇಕಾದರೂ ಅದರ ಬಗ್ಗೆ ಚರ್ಚಿಸಲು ನಾವು ಸಿದ್ಧ. ಆದರೆ ಈ ಸಂಸತ್ತಿನ ಅಮೂಲ್ಯ ಸಮಯವನ್ನು ಜನರು ನಮ್ಮನ್ನು ಆಯ್ಕೆ ಮಾಡಿದ ಕೆಲಸಕ್ಕಾಗಿ ಬಳಸೋಣʼʼ ಎಂದು ಹೇಳಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರವು ಮುಂದಿನ ವರ್ಷ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ʼವಂದೇ ಮಾತರಂʼ ಚರ್ಚೆಯನ್ನು ಆಯೋಜಿಸುತ್ತಿದೆ ಎಂದು ಆರೋಪಿಸಿದರು.