#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Union Budget 2025: ಜವಾಹರಲಾಲ್‌ ನೆಹರೂ, ಮನಮೋಹನ್‌ ಸಿಂಗ್‌...: ಕೇಂದ್ರ ಬಜೆಟ್‌ ಮಂಡಿಸಿದ ಪ್ರಧಾನಿಗಳಿವರು

ಈ ಸಾಲಿನ ಕೇಂದ್ರ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಫೆ. 1ರ ಬೆಳಗ್ಗೆ 11 ಗಂಟೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡಿಸಲಿದ್ದಾರೆ. ಭಾರತದ ಹಣಕಾಸು ಕ್ಯಾಲೆಂಡರ್‌ನಲ್ಲಿ ಬಜೆಟ್‌ ಮಂಡನೆ ಎನ್ನುವುದು ಒಂದು ಪ್ರಮುಖ ಘಟ್ಟ ಎನಿಸಿಕೊಂಡಿರುವ ಬಜೆಟ್‌ ಅನ್ನು ಪ್ರಧಾನ ಮಂತ್ರಿಗಳೂ ಮಂಡಿಸಿದ್ದಾರೆ. ಬಜೆಟ್‌ ಮಂಡಿಸಿದ ಪ್ರಧಾನಿಗಳ ವಿವರ ಇಲ್ಲಿದೆ.

ಕೇಂದ್ರ ಬಜೆಟ್‌ ಮಂಡಿಸಿದ ಪ್ರಧಾನ ಮಂತ್ರಿಗಳಿವರು

ಇಂದಿರಾ ಗಾಂಧಿ, ಜವಾಹರಲಾಲ್‌ ನೆಹರೂ, ಮನಮೋಹನ್‌ ಸಿಂಗ್‌.

Profile Ramesh B Jan 31, 2025 5:50 PM

ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಶನಿವಾರ (ಫೆ. 1) ಬಜೆಟ್‌ ಮಂಡಿಸಲಿದ್ದಾರೆ (Union Budget 2025). 8ನೇ ಬಾರಿಗೆ ಅವರು ಮುಂಗಡ ಪತ್ರವನ್ನು ಮಂಡಿಸುತ್ತಿದ್ದು, ಇದಕ್ಕಾಗಿ ಸಿದ್ದತೆ ನಡೆಸಲಾಗಿದೆ. ಮೋದಿ 3.0 (Modi 3.0) ಸರ್ಕಾರದ 2ನೇ ಬಜೆಟ್‌ ಇದಾಗಿದ್ದು, ಜನಪ್ರಿಯ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಈಗಾಗಲೇ ನಿರೀಕ್ಷೆ ಗರಿಗೆದರಿದೆ. ಭಾರತದ ಹಣಕಾಸು ಕ್ಯಾಲೆಂಡರ್‌ನಲ್ಲಿ ಬಜೆಟ್‌ ಮಂಡನೆ ಎನ್ನುವುದು ಒಂದು ಪ್ರಮುಖ ಘಟ್ಟ ಎನಿಸಿಕೊಂಡಿದೆ. ಬಜೆಟ್‌ನಲ್ಲಿ ಇಡೀ ವರ್ಷದ ಆಯ-ವ್ಯಯವನ್ನು ಲೆಕ್ಕ ಹಾಕಲಾಗುತ್ತದೆ.

ವಿಶೇಷ ಎಂದರೆ ಭಾರತದ ಪ್ರಧಾನಿಗಳಾಗಿದ್ದವರೂ ಬಜೆಟ್‌ ಮಂಡಿಸಿದ ಇತಿಹಾಸವಿದೆ. ಇಲ್ಲಿದೆ ಬಜೆಟ್‌ ಮಂಡಿಸಿದ ಐವರು ಪ್ರಧಾನ ಮಂತ್ರಿಗಳ ವಿವರ.

ಜವಾಹರಲಾಲ್‌ ನೆಹರೂ

ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು 1958ರಲ್ಲಿ ಬಜೆಟ್‌ ಮಂಡಿಸಿದ್ದರು. ಮುಂಡ್ರಾ ಹಗರಣ ಬಯಲಾದ ನಂತರ ಅಂದಿನ ಹಣಕಾಸು ಸಚಿವ ಟಿ.ಟಿ.ಕೃಷ್ಣಮಾಚಾರಿ ಅವರು ಆ ವರ್ಷದ ಫೆಬ್ರವರಿ 12ರಂದು ರಾಜೀನಾಮೆ ನೀಡಬೇಕಾಯಿತು. ಇದರ ಪರಿಣಾಮವಾಗಿ ನೆಹರೂ ಹಣಕಾಸು ಸಚಿವಾಲಯದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು ಮತ್ತು ಬಜೆಟ್ ಮಂಡಿಸಿದರು.

ಮೊರಾರ್ಜಿ ದೇಸಾಯಿ

1977ರಿಂದ 1979ರವರೆಗೆ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಅವರು ಭಾರತದಲ್ಲಿ ಅತಿ ಹೆಚ್ಚು ಕೇಂದ್ರ ಬಜೆಟ್ ಮಂಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಅವರು 8 ವಾರ್ಷಿಕ ಮತ್ತು 2 ಮಧ್ಯಂತರ ಬಜೆಟ್ ಸೇರಿದಂತೆ ಒಟ್ಟು 10 ಬಜೆಟ್‌ ಮಂಡಿಸಿದ್ದಾರೆ. ಹಣಕಾಸು ಸಚಿವರೂ ಆಗಿದ್ದ ಅವರು 1959ರಿಂದ 1963ರವರೆಗೆ ಸತತ ಮುಂಗಡ ಪತ್ರ ಮಂಡಿಸಿದ್ದರು. ಜತೆಗೆ 1962ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದರು. ಅವರು 1967, 1968 ಮತ್ತು 1969ರ ಬಜೆಟ್‌ಗಳನ್ನು ಮಂಡಿಸಿದ್ದು, ಇದರಲ್ಲಿ 1967ರ ಮಧ್ಯಂತರ ಬಜೆಟ್ ಕೂಡ ಸೇರಿದೆ.

ಇಂದಿರಾ ಗಾಂಧಿ

ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಬಜೆಟ್ ಮಂಡಿಸಿದ್ದರು. ಮೊರಾರ್ಜಿ ದೇಸಾಯಿ ಅವರ ರಾಜೀನಾಮೆಯ ನಂತರ 1969ರಲ್ಲಿ ಇಂದಿರಾ ಗಾಂಧಿ ಅವರು ಹಣಕಾಸು ಸಚಿವಾಲಯದ ನಿಯಂತ್ರಣವನ್ನು ಕೈಗೆತ್ತಿಕೊಂಡಿದ್ದರು. ಅವರು 1970ರ ಕೇಂದ್ರ ಬಜೆಟ್ ಮಂಡಿಸಿದರು. 1 ವರ್ಷದ ನಂತರ ಅವರು ಗೃಹ ಸಚಿವ ಯಶವಂತರಾವ್ ಚವಾಣ್ ಅವರನ್ನು ಹೊಸ ಹಣಕಾಸು ಸಚಿವರನ್ನಾಗಿ ನೇಮಿಸಿದರು.

ರಾಜೀವ್‌ ಗಾಂಧಿ

ಹಣಕಾಸು ಸಚಿವರಾಗಿದ್ದ ವಿ.ಪಿ.ಸಿಂಗ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿದ ನಂತರ 1987ರ ಜನವರಿ ಮತ್ತು ಜುಲೈ ನಡುವೆ ಹಣಕಾಸು ಸಚಿವಾಲಯದ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಧಾನಿ ರಾಜೀವ್ ಗಾಂಧಿ ಬಜೆಟ್‌ ಮಂಡಿಸಿದ್ದರು.

ಈ ಸುದ್ದಿಯನ್ನೂ ಓದಿ: Union Budget 2025: ವಾರ್ಷಿಕ 10 ಲಕ್ಷ ರೂ. ತನಕ ಆದಾಯ ತೆರಿಗೆ ಮುಕ್ತ ಘೋಷಣೆ? ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ? ಬಜೆಟ್‌ ನಿರೀಕ್ಷೆಗಳೇನು?

ಮನಮೋಹನ್ ಸಿಂಗ್

ಮನಮೋಹನ್ ಸಿಂಗ್ ಅವರು 1991ರಿಂದ 1996ರವರೆಗೆ ಪಿ.ವಿ.ನರಸಿಂಹ ರಾವ್ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ಮಂಡಿಸಿದ 1991ರ ಬಜೆಟ್ ಅನ್ನು ಭಾರತದ ಅತ್ಯಂತ ಕ್ರಾಂತಿಕಾರಕ ಬಜೆಟ್ ಎಂದು ಪರಿಗಣಿಸಲಾಗುತ್ತದೆ. ಇದು ವರ್ಷಗಳ ನಿಶ್ಚಲತೆಯ ನಂತರ ಭಾರತೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣವನ್ನು ಒಳಗೊಂಡಿತ್ತು. ಮನಮೋಹನ್‌ ಸಿಂಗ್ ಮಂಡಿಸಿದ 1994ರ ಬಜೆಟ್ ಸೇವಾ ತೆರಿಗೆಯನ್ನು ಪರಿಚಯಿಸಿತ್ತು. ಇದು ಸರ್ಕಾರಕ್ಕೆ ಆದಾಯದ ಪ್ರಮುಖ ಮೂಲವಾಗಿದೆ.