ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಣ್ಣುಗಳಿಗೆ ಇಲಿ ಪಾಷಾಣ ಸವರಿದ ಬೀದಿಬದಿ ವ್ಯಾಪಾರಿ; ಶಾಕಿಂಗ್‌ ವಿಡಿಯೊ ಕ್ಯಾಮರಾದಲ್ಲಿ ಸೆರೆ

Viral Video: ಮುಂಬೈಯಲ್ಲಿ ಬೀದಿಬದಿ ವ್ಯಾಪಾರಿಯೊಬ್ಬ ಇಲಿ ವಿಷವನ್ನು ಹಣ್ಣುಗಳಿಗೆ ಸವರುತ್ತಿರುವುದು ಕಂಡು ಬಂದಿದೆ. ಸದ್ಯ ಆತನ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಂಭೀರ ಚರ್ಚೆ ಹುಟ್ಟುಹಾಕಿದೆ. ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಇಬ್ಬರನ್ನು ಬಂಧಿಸಲಾಗಿದೆ.

ಹಣ್ಣುಗಳಿಗೆ ಇಲಿ ಪಾಷಾಣ ಸವರಿದ ಬೀದಿಬದಿ ವ್ಯಾಪಾರಿ

ಹಣ್ನಿಗೆ ವಿಷ ಪಾಷಾಣ ಸವರಿದ ವ್ಯಾಪಾರಿ. -

Ramesh Ballamoole
Ramesh Ballamoole Feb 25, 2026 11:22 PM

ಮುಂಬೈ, ಫೆ. 25: ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಬೆಳೆಯುವ ತರಕಾರಿಗಳಲ್ಲಿ ಅಪಾಯಕಾರಿ ಸೀಸದ ಅಂಶ ಮಿತಿ ಮೀರಿದ ಪರಮಾಣದಲ್ಲಿ ಕಂಡು ಬಂದಿದೆ ಎನ್ನುವ ಸುದ್ದಿ ಸದ್ಯ ತೀವ್ರ ಕಳವಳ ಹುಟ್ಟುಹಾಕಿದೆ. ಈ ಮಧ್ಯೆ ಮಹಾರಾಷ್ಟ್ರದ ಮುಂಬೈಯಲ್ಲಿ ನಡೆದ ಘಟನೆಯೊಂದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೀದಿಬದಿ ವ್ಯಾಪಾರಿಯೊಬ್ಬ ಇಲಿ ಪಾಷಾಣವನ್ನು ಹಣ್ಣುಗಳಿಗೆ ಸವರುತ್ತಿರುವುದು ಕಂಡು ಬಂದಿದೆ (Viral Video). ಸದ್ಯ ಆತನ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಂಭೀರ ಚರ್ಚೆ ಹುಟ್ಟುಹಾಕಿದೆ.

ಮಾರಾಟಕ್ಕಿಟ್ಟಿರುವ ಹಣ್ಣುಗಳಿಗೆ ವ್ಯಾಪಾರಿ ವಿಷ ಸವರುತ್ತಿರುವ ಆಘಾತಕಾರಿ ಘಟನೆ ಮುಂಬೈಯ ಮಲಾಡ್‌ ವೆಸ್ಟ್‌ನಲ್ಲಿ ನಡೆದಿದೆ. ಈ ಕೃತ್ಯದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಇಬ್ಬರು ವ್ಯಾಪಾರಿಗಳನ್ನು ಬಂಧಿಸಲಾಗಿದೆ.

ಸ್ಥಳೀಯ ನಿವಾಸಿಗಳು ದೂರು ನೀಡಿದ ಬಳಿಕ ವಿಡಿಯೊ ಸಾಕ್ಷಿಯ ಆಧಾರದಲ್ಲಿ ಮಲಾಡ್‌ ಪೊಲೀಸರು ಇಬ್ಬರು ಹಣ್ಣಿನ ವ್ಯಾಪಾರಿಗಳನ್ನು ಬಂಧಿಸಿದ್ದಾರೆ. ಜತೆಗೆ ಇಲಿ ವಿಷ ರಾಟೋಲ್‌ (Ratol) ಅನ್ನು ವಶಕ್ಕೆ ಪಡೆಯಲಾಗಿದೆ. ಇಲಿಯನ್ನು ಕೊಲ್ಲಲು ಸಾಮಾನ್ಯವಾಗಿ ಬಳಸಲಾಗುವ ರಾಟೋಲ್‌ ವಿಷಯುಕ್ತ ಔಷಧವಾಗಿದ್ದ ಎಲ್ಲ ಅಂಗಡಿ, ಮೆಡಿಕಲ್‌ಗಳಲ್ಲಿ ಸುಲಭವಾಗಿ ದೊರೆಯುತ್ತದೆ. ಇದು ಯೆಲ್ಲೋ ಫಾಸ್ಪರಸ್‌ ಎನ್ನುವ ವಿಷಕಾರಿ ರಾಸಾಯನಿಕವನ್ನು ಒಳಗೊಂಡಿದೆ. ಸದ್ಯ ಹಣ್ಣಿನ ವ್ಯಾಪಾರಿಯ ಬಳಿ ಇದು ಪತ್ತೆಯಾಗಿದೆ.

ಎನ್‌ಡಿಟಿವಿ ಪೋಸ್ಟ್‌ ಮಾಡಿರುವ ವಿಡಿಯೊ:



ಬಂಧಿತ ವ್ಯಾಪಾರಿಗಳನ್ನು ಮನೋಜ್‌ ಸಂಗಮ್‌ಲಾಲ್‌ ಕೇಸರ್ವಾಣಿ (42) ಮತ್ತು ರಾಹುಲ್‌ ಸದನ್‌ಲಾಲ್‌ ಕೇಸರ್ವಾಣಿ (25) ಎಂದು ಗುರುತಿಸಲಾಗಿದೆ. ಇವರಿಬ್ಬರು ಮಲಾಡ್‌ ವೆಸ್ಟ್‌ನ ರಾಜನ್‌ಪಾದ ನಿವಾಸಿಗಳು. ಇವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಲಾಗಿದೆ.

ಸಿಲಿಕಾನ್‌ ಸಿಟಿಗೆ ಬರುವ ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆ

ಪೊಲೀಸರ ಪ್ರಕಾರ, ರಾತ್ರಿ ತಮ್ಮ ದಾಸ್ತಾನಿಗೆ ಹಾನಿಯಾಗದಂತೆ ಇಲಿಗಳನ್ನು ತಡೆಯಲು ಔಷಧ ಬಳಸಿದ್ದಾಗಿ ಮಾರಾಟಗಾರರು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರೋಗ್ಯ ಅಧಿಕಾರಿಗಳು ಮತ್ತು ತಜ್ಞರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸೇವಿಸುವ ಆಹಾರಗಳಿಗೆ ಇಂತಹ ರಾಸಾಯನಿಕ ವಸ್ತುಗಳನ್ನು ಹಚ್ಚುವುದರಿಂದ ವಾಂತಿ, ಹೊಟ್ಟೆ ನೋವು, ಅಂಗಾಂಗ ಹಾನಿ ಉಂಟಾಗಬಹುದು ಎಂದಿದ್ದಾರೆ. ನಿರಂತರವಾಗಿ ಇದನ್ನು ಸೇವಿಸಿದರೆ ತೀವ್ರ ಅಪಾಯ ಉಂಟಾಗುವ ಸಾಧ್ಯತೆಯೂ ಇದೆ.

ವೈರಲ್‌ ವಿಡಿಯೊದಲ್ಲಿ ಏನಿದೆ?

ವೈರಲ್‌ ಆದ ವಿಡಿಯೊದಲ್ಲಿ ವ್ಯಾಪಾರಿಯೊಬ್ಬ ಕೈಯಲ್ಲಿ ಬಾಳೆ ಹಣ್ಣು ಹಿಡಿದು ಕ್ರೀಮ್‌ನಂತಹ ವಸ್ತು ಹಚ್ಚುತ್ತಿರುವುದು ಕಂಡುಬಂದಿದೆ. ಜತೆಗೆ ಆತನ ಬಳಿ ರಾಟೋಲ್‌ನ ಪ್ಯಾಕಟ್‌ ಕೂಡ ಕಾಣಿಸುತ್ತಿದೆ. ಸದ್ಯ ಈ ವಿಡಿಯೊ ನೋಡಿ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹವರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಇವರು ಮಾತ್ರವಲ್ಲ ಇತರ ವ್ಯಾಪಾರಿಗಳೂ ತಮ್ಮ ಸರಕನ್ನು ಕಾಪಾಡಲು ಇದೇ ರೀತಿಯ ಕ್ರಮ ಕೈಗೊಳ್ಳಬಹುದು. ಕೇವಲ ಒಂದೆರಡು ಪ್ರಕರಣ ಮಾತ್ರ ಬೆಳಕಿಗೆ ಬರುತ್ತಿದೆ ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನುಮುಂದೆ ಹಣ್ಣು ಖರೀದಿಸುವ ಮುನ್ನ ಎಚ್ಚರ ವಹಿಸಿ. ಅದರಲ್ಲೂ ಮನೆಯಲ್ಲಿನ ಹಿರಿಯರು, ಮಕ್ಕಳಿಗೆ ಹಣ್ಣು, ತರಕಾರಿ ಕೊಡುವ ಮುನ್ನ ಸರಿಯಾಗಿ ತೊಳೆಯಿರಿ ಎಂದು ಹಲವರು ತಿಳಿಸಿದ್ದಾರೆ.

ದೇಶದ ಇತರ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.