ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೊನೆಗೂ ರಚನೆಯಾಯ್ತು ಜನನಾಯಕ ವಿಜಯ್‌ ಸರ್ಕಾರ; ತಮಿಳುನಾಡಿನಲ್ಲಿ ರಾಜಕೀಯ ಪ್ರಹಸನ ಹೇಗಿತ್ತು? ಇದುವರೆಗೆ ಏನೆಲ್ಲ ಬೆಳವಣಿಗೆ ನಡೆದವು?

Tamil Nadu Government Formation: ಯಾವುದೇ ಥ್ರಿಲ್ಲರ್‌ ಸಿನಿಮಾಕ್ಕೆ ಕಡಿಮೆ ಇಲ್ಲದಂತೆ ಕ್ಷಣಕ್ಕೊಂದು ತಿರುವು ನೀಡುತ್ತಿದ್ದ ತಮಿಳುನಾಡಿನ ರಾಜಕೀಯದ ನಾಟಕೀಯ ಬೆಳವನಿಗೆಗೆ ಇದೀಗ ತಾರ್ಕಿಕ ಅಂತ್ಯ ಸಿಕ್ಕಿದೆ. ದಳಪತಿ ವಿಜಯ್‌ ಬಹುಮತ ಸಾಬೀತುಪಡಿಸಿದ್ದು, ಭಾನುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವಿಜಯ್‌ ಮತ್ತು ರಾಜೇಂದ್ರ ಅರ್ಲೆಕರ್‌

ಚೆನ್ನೈ, ಮೇ 9: ಇದುವರೆಗೆ ರೀಲ್‌ನಲ್ಲಿ ರಾಜಕಾರಣಿಯಾಗಿ ಮಿಂಚುತ್ತಿದ್ದ ಕಾಲಿವುಡ್‌ ಸ್ಟಾರ್‌, ದಳಪತಿ ವಿಜಯ್‌ ಜೋಸೆಫ್‌ (Thalapathy Vijay) ಇದೀಗ ರಿಯಲ್‌ ಆಗಿ ಸರ್ಕಾರ ರಚಿಸಲು ಸಜ್ಜಾಗಿದ್ದಾರೆ. ಕೇವಲ 2 ವರ್ಷಗಳ ಹಿಂದೆಯಷ್ಟೇ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಸ್ಥಾಪಿಸಿದ್ದ ವಿಜಯ್‌ ಯಾರೂ ಊಹಿಸದ ರೀತಿಯಲ್ಲಿ ತಮಿಳುನಾಡು ರಾಜಕೀಯದ ವ್ಯಾಕರಣವನ್ನೇ ಬದಲಾಯಿಸಿ ಬಿಟ್ಟಿದ್ದಾರೆ. ಡಿಎಂಕೆ, ಎಐಎಡಿಎಂಕೆಯಂತಹ ಪ್ರಾದೇಶಿಕ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿ ಮೊದಲ ಪ್ರಯತ್ನದಲ್ಲೇ ಶತಕದ ಸಾಧನೆ ಮಾಡಿದ್ದಾರೆ. ಇದೀಗ ಮಿತ್ರಪಕ್ಷಗಳ ಸಹಾಯದಿಂದ ಬಹುಮತ ಸಾಬೀತುಪಡಿಸಿದ್ದು, ಭಾನುವಾರ (ಮೇ 10) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆ ಮೂಲಕ 5 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಪ್ರಹಸನಕ್ಕೆ ತೆರೆ ಬಿದ್ದಿದೆ.

ಶನಿವಾರ ತಮಿಳುನಾಡಿನಲ್ಲಿ ಬಿರುಸಿನ ಚಟುವಟಿಕೆ ನಡೆದವು. ಸಂಜೆ ವಿಜಯ್‌ ಲೋಕಭವನಕ್ಕೆ ತೆರಳಿ ತಮಗೆ 120 ಶಾಸಕ ಬೆಂಬಲವಿರುವುದಾಗಿ ರಾಜ್ಯಪಾಲ ರಾಜೇಂದ್ರ ಅರ್ಲೆಕರ್‌ ಅವರಿಗೆ ದಾಖಲೆ ಸಲ್ಲಿಸಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ರಾಜ್ಯಪಾಲರು ಸರ್ಕಾರ ರಚಿಸಲು ವಿಜಯ್‌ ಅವರನ್ನು ಆಹ್ವಾನಿಸಿದರು. ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಚೆನ್ನೈಯ ನೆಹರೂ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿಯಾಗಿ ವಿಜಯ್‌ ಮತ್ತು ಇತರ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ಬಹುಮತ ಸಾಬೀತುಪಡಿಸಿದ ವಿಜಯ್‌:



5 ದಿನಗಳ ರಾಜಕೀಯ ಪ್ರಹಸನ ಹೇಗಿತ್ತು?

ಸಿನಿಮಾಗಳಲ್ಲಿ ಕ್ಷಣಕ್ಕೊಂದು ಟ್ವಿಸ್ಟ್‌ ನೀಡಿ ಪ್ರೇಕ್ಷಕರನ್ನು ಸೀಟಿನಂಚಿಗೆ ಕೂರಿಸುತ್ತಿದ್ದ ವಿಜಯ್‌ ಅವರಿಗೇ ಕೆಲವು ದಿನಗಳಿಂದ ಅದೆ ರೀತಿಯ ಅನುಭವ ಎದುರಾಗಿತ್ತು. ಬೆಂಬಲ ನೀಡುವ-ಹಿಂಪಡೆಯುವ ಮೂಲಕ ಮಿತ್ರಪಕ್ಷಗಳು ಅವರನ್ನು ಗೊಂದಲಕ್ಕೆ ದೂಡಿದವು. ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುವ ಮೂಲಕ ತಮಿಳುನಾಡು ರಾಜಕೀಯ ದೇಶದ ಗಮನ ಸೆಳೆದಿತ್ತು. ಹಾಗಾದರೆ ಇದುವರೆಗೆ ನಡೆದ ಬೆಳವಣಿಗೆಗಳು ಏನೇನು ಎನ್ನುವುದನ್ನು ಸಂಕ್ಷಿಪ್ತವಾಗಿ ನೋಡಿಕೊಂಡು ಬರೋಣ.

ಕೊನೆಗೂ ವಿಜಯ್‌ಗೆ ಬೆಂಬಲ ಸೂಚಿಸಿದ ವಿಸಿಕೆ; ಟಿವಿಕೆ ಸಂಖ್ಯಾ ಬಲ 118ಕ್ಕೆ ಏರಿಕೆ

ಏಪ್ರಿಲ್‌ 23ರಂದು ತಮಿಳುನಾಡು ವಿಧಾನಸಭೆಗೆ ಒಂದೇ ಹಂತದಲ್ಲಿ ನಡೆದ ಮತದಾನದ ಫಲಿತಾಂಶ ಮೇ 4ರಂದು ಪ್ರಕಟಗೊಂಡಾಗ ಇಡೀ ದೇಶವೇ ಅಚ್ಚರಿಗೆ ಒಳಗಾಯ್ತು. ಕೇವಲ 2 ವರ್ಷ ಪ್ರಾಯದ ʼಶಿಶುʼ ಟಿವಿಕೆ ಅಂತಹದ್ದೊಂದು ಮ್ಯಾಜಿಕ್‌ ಮಾಡಿತ್ತು. ಒಟ್ಟು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್‌ ಅವರ ಟಿವಿಕೆ ಬರೋಬ್ಬರಿ 107 ಕಡೆ ಜಯಗಳಿಸಿತು. ಆದರೆ ಬಹುಮತಕ್ಕೆ ಅಗತ್ಯವಾದ 118 ಶಾಸಕರ ಬಲ ಗಿಟ್ಟಿಸಿಕೊಳ್ಳುವಲ್ಲಿ ಸ್ವಲ್ಪದರಲ್ಲೇ ಎಡವಿತು. ಆಗ ನೋಡಿ ಸರ್ಕಾರ ರಚನೆಯ ನಾಟಕೀಯ ಬೆಳವಣಿಗೆಗಳು ಆರಂಭವಾದವು.

ಸರಳ ಬಹುಮತಕ್ಕೆ ಟಿವಿಕೆಗೆ 11 ಶಾಸಕ ಬೆಂಬಲ ಅಗತ್ಯವಿತ್ತು. ಮೊದಲಿಗೆ ಡಿಎಂಕೆ ಮೈತ್ರಿಕೂಟದ ಭಾಗವಾಗಿದ್ದ, 5 ಶಾಸಕ ಸ್ಥಾನ ಹೊಂದಿರುವ ಕಾಂಗ್ರೆಸ್‌ ಬೆಂಬಲ ಸೂಚಿಸಿತು. ಈ ನಡೆಗೆ ಡಿಎಂಕೆ ನಾಯಕರು ಅಸಾಮಾಧನ ವ್ಯಕ್ತಪಡಿಸಿದ್ದಲ್ಲದೆ ಇನ್ನುಮುಂದೆ ಕಾಂಗ್ರೆಸ್‌ ತಮ್ಮ ಮಿತ್ರಪಕ್ಷವಲ್ಲ ಎಂದು ಷರಾ ಬರೆದುಬಿಟ್ಟರು.

ಕಾಂಗ್ರೆಸ್‌ ಬೆಂಬಲದ ಹೊರತಾಗಿಯೂ ಟಿವಿಕೆಗೆ ಸರ್ಕಾರ ರಚನೆಗೆ ಅಗತ್ಯವಾದ ಬಹುಮತ ಸಿಗಲಿಲ್ಲ. ಒಟ್ಟು 112 ಸಂಖ್ಯಾಬಲದೊಂದಿಗೆ ಸರ್ಕಾರ ರಚಚೆಗೆ ಇನ್ನೂ 6 ಶಾಸಕರ ಕೊರತೆ ಎದುರಿಸಿತು. ಇದೇ ವೇಳೆ ನಾಲ್ವರು ಶಾಸಕರನ್ನು ಹೊಂದಿರುವ ಎಡಪಕ್ಷಗಳು ವಿಜಯ್‌ ಬೆನ್ನಿಗೆ ನಿಂತವು. ಅಲ್ಲಿಗೆ ಸಂಖ್ಯಾಬಲ 116ಕ್ಕೇರಿತು. ಆಗಲೂ 2 ಶಾಸಕರ ಕೊರತೆ ಕಂಡುಬಂತು. ಮುಂದೆ ನಡೆದಿದ್ದೇ ಯಾವುದೇ ಥ್ರಿಲ್ಲರ್‌ ಸಿನಿಮಾಕ್ಕೆ ಕಡಿಮೆ ಇಲ್ಲದ ನಾಟಕೀಯ ಬೆಳವಣಿಗೆ.

ʻಜನ ನಾಯಗನ್‌ʼ ಚಿತ್ರದ ಟೈಟಲ್‌ ಕಾರ್ಡ್‌ನಲ್ಲಿ ಭರ್ಜರಿ ಚೇಂಜ್: ವಿಜಯ್‌ ಫ್ಯಾನ್ಸ್‌ ಸಖತ್‌ ಥ್ರಿಲ್!

ಬಳಿಕ ತಲಾ 2 ಸ್ಥಾನಗಳನ್ನು ಹೊಂದಿರುವ ವಿಡುದಲೈ ಚಿರುತೈಗಳ್‌ (VCK) ಮತ್ತು ಮುಸ್ಲಿಂ ಲೀಗ್‌ ವಿಜಯ್‌ಗೆ ಬೆಂಬಲ ನೀಡುವ ಮೂಲಕ ಎಂಟ್ರಿ ಕೊಟ್ಟವು. ಇನ್ನೇನು ಪರಿಸ್ಥಿತಿ ತಿಳಿಯಾಯ್ತು ಎನ್ನುವಾಗಲೇ ಎದುರಾಯ್ತು ಟಿಸ್ಟ್‌ ಮೇಲೆ ಟ್ವಿಸ್ಟ್.‌ ವಿಸಿಕೆ ಮತ್ತು ಮುಸ್ಲಿಂ ಲೀಗ್‌ ಇದ್ದಕ್ಕಿದ್ದಂತೆ ವಿಜಯ್‌ಗೆ ನೀಡಿದ ಬೆಂಬಲ ಹಿಂಪಡೆದವು. ಆ ಮೂಲಕ ಟವಿಕೆ ಸಂಖ್ಯಾ ಬಲ 116ಕ್ಕೆ ಕುಸಿಯಿತು. ಮತ್ತೆ ಸರ್ಕಾರ ರಚನೆ ಎನ್ನುವುದು ಗಗನಕುಸುಮವಾಯ್ತು. ಒಂದು ಹಂತದಲ್ಲಿ ವಿಜಯ್‌ಗೆ ಸರ್ಕಾರ ರಚಿಸಲು ಸಾಧ್ಯವಿಲ್ಲ, ಬದ್ಧ ಶತ್ರುಗಳಾದ ಡಿಎಂಕೆ-ಎಐಎಡಿಎಂಕೆ ಅಧಿಕಾರಕ್ಕೆ ಬರಲಿವೆ ಎನ್ನುವ ಸನ್ನಿವೇಶವೂ ನಿರ್ಮಾಣವಾಯ್ತು. ಕೊನೆಗೆ ಟಿವಿಕೆ ನಾಯಕರು ಮಾತುಕತೆ ನಡೆಸಿ ವಿಸಿಕೆ ಮತ್ತು ಮುಸ್ಲಿಂ ಲೀಗ್‌ ಪಕ್ಷಗಳ ಮನವೊಲಿಸಲು ಯಶಸ್ವಿಯಾದರು. ಹೀಗಾಗಿ ಟಿವಿಕೆ ಮತ್ತೆ 120 ಸಂಖ್ಯಾಬಲಕ್ಕೆ ತಲುಪಿದ್ದು, ಭಾನುವಾರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author