ಕೊನೆಗೂ ವಿಜಯ್‌ಗೆ ಬೆಂಬಲ ಸೂಚಿಸಿದ ವಿಸಿಕೆ; ಟಿವಿಕೆ ಸಂಖ್ಯಾ ಬಲ 118ಕ್ಕೆ ಏರಿಕೆ
ತಮಿಳುನಾಡು ರಾಜಕೀಯಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಕೊನೆಗೂ ವಿಜಯ್‌ಗೆ ವಿಸಿಕೆ ಬೆಂಬಲ ಸೂಚಿಸಿದ್ದು, ಟಿವಿಕೆ ಸಂಖ್ಯಾ ಬಲ 118ಕ್ಕೆ ಏರಿದೆ. ಆ ಮೂಲಕ ಸರ್ಕಾರ ರಚನೆಗೆ ಅಗತ್ಯವಾದ ಬಹುಮತ ಸಿಕ್ಕಂತಾಗಿದೆ. ಸರ್ಕಾರ ರಚಿಸಲು ರಾಜ್ಯಪಾಲರು ವಿಜಯ್‌ಗೆ ಆಹ್ವಾನ ನೀಡಿದ್ದು, ಶನಿವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ವಿಜಯ್ (ಸಂಗ್ರಹ ಚಿತ್ರ) -
ಚೆನ್ನೈ, ಮೇ 8: ಅಕ್ಷರಶಃ ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದೆ (Tamil Nadu Govt Formation). ಕೊನೆಗೂ ವಿಜಯ್‌ಗೆ (Vijay) ವಿಸಿಕೆ ಬೆಂಬಲ ಸೂಚಿಸಿದ್ದು, ಟಿವಿಕೆ ಸಂಖ್ಯಾ ಬಲ 118ಕ್ಕೆ ಏರಿದೆ. ಆ ಮೂಲಕ ಸರ್ಕಾರ ರಚನೆಗೆ ಅಗತ್ಯವಾದ ಸರಳ ಬಹುಮತ ಸಿಕ್ಕಂತಾಗಿದೆ. ಈ ಮೊದಲು ವಿಸಿಕೆ ಬೆಂಬಲ ಹಿಂಪಡೆದಿತ್ತು. ಆ ಮೂಲಕ ವಿಜಯ್ ಬೆಂಬಲ 116ಕ್ಕೆ ಕುಸಿದಿತ್ತು. ಇದೀಗ ವಿಸಿಕೆ ನೇರವಾಗಿ ರಾಜ್ಯಪಾಲರಿಗೆ ಬೆಂಬಲ ಪತ್ರವನ್ನು ಇಮೇಲ್ ಮಾಡಿದೆ. ಆ ಮೂಲಕ ವಿಜಯ್ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.
ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಈಗಾಗಲೇ ಸರ್ಕಾರ ರಚಿಸುವಂತೆ ವಿಜಯ್‌ಗೆ ಆಹ್ವಾನ ಕಳುಹಿಸಿದ್ದಾರೆ ಎನ್ನಲಾಗಿದೆ. ಆದರೆ ಶನಿವಾರ ಬೆಳಗ್ಗೆ ಚೆನ್ನೈಯಲ್ಲಿ ನಡೆಯಬೇಕಿದ್ದ ವಿಜಯ್ ಪ್ರಮಾಣ ವಚನ ಸಮಾರಂಭ ರದ್ದಾಗಿದೆ.
ಕಣ್ಣಾಮುಚ್ಚಾಲೆ
ಶುಕ್ರವಾರ ತಮಿಳುನಾಡು ರಾಜಕೀಯ ಬಿಡುವಿಲ್ಲದೆ ಚಟುವಟಿಕೆಗೆ ಸಾಕ್ಷಿಯಾಯಿತು. 107 ಸ್ಥಾನ ಪಡೆದ ಟಿವಿಕೆಗೆ ಗುರುವಾರ ಕಾಂಗ್ರೆಸ್‌ನ ಐವರು ಶಾಸಕರು ಬೆಂಬಲ ಸೂಚಿಸಿದ್ದರು. ಆ ಮೂಲಕ ವಿಜಯ್ ಸಂಖ್ಯಾಬಲ 112ಕ್ಕೆ ಏರಿತು. ಅದಾದ ಬಳಿಕ ಶುಕ್ರವಾರ ಎಡಂಗದ (ಸಿಪಿಐ ಮತ್ತು ಸಿಪಿಎಂ) ನಾಲ್ವರು, ಮುಸ್ಲಿಂ ಲೀಗ್‌ನ ಮತ್ತು ವಿಸಿಕೆಯ ತಲಾ ಇಬ್ಬರು ಶಾಸಕರು ಬೆಂಬಲ ನೀಡುವುದಾಗಿ ಹೇಳಿದರು. ಆ ಮೂಲಕ ವಿಜಯ್‌ಗೆ 120 ಶಾಸಕರ ಬಲ ದೊರೆಯಿತು.
ಶುಕ್ರವಾರ ಸಂಜೆ ರಾಜ್ಯಪಾಲರನ್ನು ಭೇಟಿಯಾದ ವಿಜಯ್ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ಈ ವೇಳೆ ಟಿವಿಕೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತು. ವಿಜಯ್ ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಪ್ರಕಟಿಸಿದವು. ಆದರೆ ರಾತ್ರಿಯಾಗುತ್ತಿದ್ದಂತೆ ಸನ್ನುವೇಶ ಮತ್ತೆ ಬದಲಾಯ್ತು.
ತಮಿಳುನಾಡು ರಾಜಕೀಯ ಥ್ರಿಲ್ಲರ್‌ಗೆ ಮತ್ತೊಂದು ಟ್ವಿಸ್ಟ್; ಬಹುಮತ ಸಾಮೀತುಪಡಿಸುವಲ್ಲಿ ಮತ್ತೆ ಎಡವಿದ ವಿಜಯ್
ದಿಢೀರ್ ಟ್ವಿಸ್ಟ್
ಅಲ್ಲಿಗೆ ತಮಿಳುನಾಡಿನ ರಾಜಕೀಯ ಪ್ರಹಸನ ಮುಗಿಯಿತು ಎಂದು ನಿಟ್ಟುಸಿರುವ ಬಿಡುವಷ್ಟರಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಯಿತು. ಮುಸ್ಲಿಂ ಲೀಗ್‌ನ ಶಾಸಕರು ಬೆಂಬಲ ವಾಪಸ್ ಪಡೆದರು. ಅಲ್ಲಿಗೆ ವಿಜಯ್ ಸಂಖ್ಯಾಬಲ 118ಕ್ಕೆ ಇಳಿಯಿತು. ಇದೇ ವೇಳೆ ವಿಸಿಕೆ ಡಿಸಿಎಂ ಹುದ್ದೆಗೆ ಬೇಡಿಕೆ ಇರಿಸಿ ಅದು ಈಡೇರದಿದ್ದಾಗ ಬೆಂಬಲ ವಾಪಸ್ ಪಡೆಯುವುದಾಗಿ ಘೋಷಿಸಿತು. ಅಲ್ಲಿಗೆ ಟಿವಿಕೆಯ ಸಂಖ್ಯಾ ಬಲ 116ಕ್ಕೆ ಕುಸಿತು. ಶನಿವಾರ ವಿಜಯ್ ಪ್ರಮಾಣ ವಚನ ಸ್ವೀಕಾರ ಅನಿಶ್ಚಿತೆಗೆ ಹೊರಳಿತು.
ಬಳಿಕ ಟಿವಿಕೆ ನಾಯಕರು ವಿಸಿಕೆ ಮುಖಂಡರ ಮನವೊಲಿಸಲು ಯಶಸ್ವಿಯಾದರು. ಹೀಗಾಗಿ ವಿಸಿಕೆ ಶಾಸಕರು ನೇರವಾಗಿ ರಾಜ್ಯಪಾಲರಿಗೆ ಬೆಂಬಲ ಪತ್ರ ಸಲ್ಲಿಸಿದರು. ಇದರಿಂದ ವಿಜಯ್ ಮ್ಯಾಜಿಕ್ ನಂಬರ್ 118 ತಲುಪಿದ್ದಾರೆ ಎನ್ನಲಾಗಿದೆ. ಆದರೆ ಪ್ರಮಾನ ವಚನ ಸ್ವೀಕಾರದ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಇತ್ತ ಡಿಎಂಕೆ ಮತ್ತು ಎಐಎಡಿಎಂಕೆ ಬೆಳವಣಿಗೆಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಲೇ ಇದೆ. ಇನ್ನು ಮತ್ತೆ ಈ ಪ್ರಹಸನ ಯಾವ ತಿರುವು ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.