ಚೆನ್ನೈ, ಡಿ. 2: ಕಾಲಿವುಡ್ ನಟ, ರಾಜಕಾರಣಿ ದಳಪತಿ ವಿಜಯ್‌ಗೆ (Vijay) ಭಾರಿ ಹಿನ್ನಡೆಯಾಗಿದ್ದು, ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷ ಆಯೋಜಿಸಿದ್ದ ಪುದುಚೆರಿ ರೋಡ್ ಶೋ ರದ್ದಾಗಿದೆ. ಡಿಸೆಂಬರ್ 5ರಂದು ಪಕ್ಷ ಆಯೋಜಿಸಲು ಉದ್ದೇಶಿಸಿದ್ದ ರ‍್ಯಾಲಿಗೆ ಪುದುಚೆರಿ ಪೊಲೀಸರು ಅನುಮತಿ ನೀಡಿಲ್ಲ. ಆ ಮೂಲಕ ವಿಜಯ್‌ಗೆ ಭಾರಿ ಮುಖಭಂಗವಾಗಿದೆ. ರೋಡ್ ಶೋ ಬದಲಾಗಿ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ ಆಯೋಜಿಸಿದ್ದ ಚುನಾವಣಾ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ ಸುಮಾರು 41 ಮಂದಿ ಅಸುನೀಗಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೋಡ್ ಶೋಗೆ ಅನುಮತಿ ಸಿಕ್ಕಿಲ್ಲ ಎನ್ನಲಾಗಿದೆ.
ಈಗಾಗಲೇ ಪಕ್ಷದ ಹಿರಿಯ ನಾಯಕರಾದ ಆನಂದ್ ಮತ್ತು ಆಧವ್ ಅರ್ಜುನ್ ರೋಡ್ ಶೋಗೆ ಸಿದ್ಧತೆ ನಡೆಸಿದ್ದು, ಅದರ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ. ಕರೂರು ಕಾಲ್ತುಳಿದ ಬಳಿಕ ಸಾಕಷ್ಟು ಹಿನ್ನಡೆ ಅನುಭವಿಸಿದ್ದ ವಿಜಯ್ ಅವರ ರಾಜಕೀಯ ಚಟುವಟಿಕೆಯನ್ನು ಮತ್ತೆ ಕೇಂದ್ರಾಡಳಿತ ಪ್ರದೇಶದಲ್ಲಿ ಭರ್ಜರಿಯಾಗಿ ಆರಂಭಿಸುವ ಉದ್ದೇಶ ಹೊಂದಿದ್ದ ಪಕ್ಷಕ್ಕೆ ಇದು ಬಲವಾದ ಹೊಡೆತ ನೀಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಟಿವಿಕೆ ಪುದುಚೆರಿ ರೋಡ್ ಶೋಗೆ ಅನುಮತಿ ನಿರಾಕರಿಸಿದ ಪೊಲೀಸರು:
ಎನ್‌ಡಿಟಿವಿ ಜತೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಾಕಷ್ಟು ಪರಿಶೀಲನೆ, ಸಮಾಲೋಚನೆ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ. ʼʼನಾವು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೆ ನಿರಂತರ ಸಭೆ ನಡೆಸಿದ ಬಳಿಕವಷ್ಟೇ ನಾವು ಅನುಮತಿ ನಿರಾಕರಿಸಿದ್ದೇವೆʼʼ ಎಂದು ತಿಳಿಸಿದ್ದಾರೆ. ಆ ಮೂಲಕ ಇದರ ಹಿಂದ ಎರಾಜಕೀಯ ಪಿತೂರಿ ಇದೆ ಎನ್ನುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ʼʼಪುದುಚೆರಿಯಲ್ಲಿರುವ ಕಿರಿದಾದ ರಸ್ತೆ ಸಾಕಷ್ಟು ಅಪಾಯಕಾರಿ ಎನಿಸಿಕೊಂಡಿದೆ. ವಿಜಯ್ ರೋಡ್ ಶೋಗಾಗಿ ಸಾವಿರಾರು ಮಂದಿ ಜಮಾಯಿಸುವ ಸಾಧ್ಯತೆ ಇರುವುದರಿಂದ ಅನುಮತಿ ನೀಡಿಲ್ಲʼʼ ಎಂದು ವಿವರಿಸಿದ್ದಾರೆ.
ಇನ್ನೂ ಆರಿಲ್ಲ ಕಾಲ್ತುಳಿತದ ಕಿಚ್ಚು; ವಿಜಯ್ ಮನೆಗೆ ಮತ್ತೆ ಬಾಂಬ್ ಬೆದರಿಕೆ
ಮೈದಾನದಲ್ಲಿ ರ‍್ಯಾಲಿ ನಡೆಸಲು ಸಲಹೆ
ಇದರ ಬದಲು ಸಾಂಪ್ರದಾಯಿಕ ಸಾರ್ವಜನಿಕ ಸಭೆಯನ್ನು ಆಯೋಜಿಸಬಹುದು. ಇದರಿಂದ ಸುರಕ್ಷತಾ ಕ್ರಮ ಕೈಗೊಳ್ಳಲು ಸುಲಭವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡಿನಾದ್ಯಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಮತ್ತು ಹಿಂದಿನ ಫ್ರೆಂಚ್ ವಸಾಹತು ಪ್ರದೇಶದಲ್ಲಿ ಗಣನೀಯ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ವಿಜಯ್‌ಗೆ ಪುದುಚೇರಿ ರೋಡ್ ಶೋ ಪ್ರಮುಖ ಎನಿಸಿಕೊಂಡಿದೆ. ಇಲ್ಲಿ ಟಿವಿಕೆ ತನ್ನ ಛಾಪು ಮೂಡಿಸುವ ಯೋಜನೆ ಹಾಕಿಕೊಂಡಿದೆ.
ಕಾಲಿವುಡ್‌ನಲ್ಲಿ ಸ್ಟಾರ್ ನಾಯಕನಾಗಿ ಮಿಂಚುತ್ತಿರುವ ವಿಜಯ್ 2024ರಲ್ಲಿ ಟಿವಿಕೆ ಪಕ್ಷ ಹುಟ್ಟುಹಾಕಿ ರಾಜಕೀಯಕ್ಕೆ ಧುಮುಕಿದ್ದಾರೆ. ಮುಂದಿನ ವರ್ಷ ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷ ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ನನ್ನ ಹೃದಯ ಒಡೆದುಹೋಗಿದೆ; ಕಾಲ್ತುಳಿತದ ಬಳಿಕ ವಿಜಯ್ ಮೊದಲ ರಿಯಾಕ್ಷನ್
ಕರೂರು ದುರಂತ
ಕರೂರು ಕಾಲ್ತುಳಿತದ ಕಾರಣಕ್ಕೆ ಸದ್ಯ ಸಾರ್ವಜನಿಕ ಕಾರ್ಯಕ್ರಮಗಳನ್ನು ಬಹಳ ಎಚ್ಚರಿಕೆಯಿಂದ ಆಯೋಜಿಸಲು ಸರ್ಕಾರ ಮುಂದಾಗಿದೆ. ಜಯ ಸಂದಣಿ ನಿಯಂತ್ರನಕ್ಕೆ ಸಾಕಷ್ಟು ಕ್ರಮ ಕೈಗೊಂಡ ಮೇಲಷ್ಟೇ ಅನುಮತಿ ನೀಡುವುದಾಗಿ ತಿಳಿಸಿದೆ. ಅನುಮತಿಗಾಗಿ ಅರ್ಜಿ ಸಲ್ಲಿಕೆಯಾದ ಬಳಿಕ ಪೊಲೀಸರು ಸೂಕ್ತ ಪರಿಶೀಲನೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಸದ್ಯ ಕರೂರು ದುರಂತವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕಾಲ್ತುಳಿತಕ್ಕೆ ಕಾರಣ ಪರಿಶೀಲಿಸಲಾಗುತ್ತಿದೆ.