Actor Vijay: ಕರೂರು ಕಾಲ್ತುಳಿತ ದುರಂತದ ಬೆನ್ನಲ್ಲೇ ಮತ್ತೊಂದು ರ‍್ಯಾಲಿಗೆ ಸಜ್ಜಾದ ದಳಪತಿ ವಿಜಯ್
Tamilaga Vettri Kazhagam: ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ ಆಯೋಜಿಸಿದ್ದ ರ‍್ಯಾಲಿಯಲ್ಲಿ 41 ಮಂದಿ ಅಸುನೀಗಿದ್ದರು. ಇದರ ಬೆನ್ನಲ್ಲೇ ಪಕ್ಷ ಮತ್ತೊಂದು ರ‍್ಯಾಲಿ ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಡಿಸೆಂಬರ್ 4ರಂದು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ರ‍್ಯಾಲಿ ಆಯೋಜಿಸಲು ಒಪ್ಪಿಗೆ ನೀಡುವಂತೆ ಪಕ್ಷ ಅರ್ಜಿ ಸಲ್ಲಿಸಿದೆ.
ನಟ ವಿಜಯ್ (ಸಂಗ್ರಹ ಚಿತ್ರ). -
ಚೆನ್ನೈ, ನ. 20: ತಮಿಳು ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ (Actor Vijay) ಇದೀಗ ಮತ್ತೊಂದು ಚುನಾವಣಾ ರ‍್ಯಾಲಿಗೆ ಸಿದ್ಧತೆ ನಡೆಸಿದ್ದಾರೆ. ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷ ಆಯೋಜಿಸಿದ್ದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದ ತಿಂಗಳುಗಳ ಬಳಿಕ ಇದೀಗ ಬೃಹತ್ ಸಭೆ ನಡೆಸಲು ಯೋಜನೆ ರೂಪಿಸಲಾಗುತ್ತಿದೆ. ಡಿಸೆಂಬರ್ 4ರಂದು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ರ‍್ಯಾಲಿ ಆಯೋಜಿಸಲು ಒಪ್ಪಿಗೆ ನೀಡುವಂತೆ ಪಕ್ಷ ಅರ್ಜಿ ಸಲ್ಲಿಸಿದೆ. ಆ ಮೂಲಕ ಕರೂರು ಕಾಲ್ತುಳಿತ ದುರಂತದ ಬಳಿಕ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ರಾಜ್ಯ ಪ್ರವಾಸವನ್ನು ಪುನರಾರಂಭಿಸಲು ವಿಜಯ್ ಮುಂದಾಗಿದ್ದಾರೆ.
ಪಕ್ಷದ ಸೇಲಂ ಜಿಲ್ಲಾ ಕಾರ್ಯದರ್ಶಿ ಪೊಲೀಸ್ ಆಯುಕ್ತರಿಗೆ 3 ಸಂಭಾವ್ಯ ಸ್ಥಳಗಳನ್ನು ಉಲ್ಲೇಖಿಸಿ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಬೋಸ್ ಮೈದಾನ, ಫೋರ್ಟ್ ಮೈದಾನ ಮತ್ತು ಸೀಲನಾಯಕೆನ್ಪಟ್ಟಿಯಲ್ಲಿನ ಖಾಸಗಿ ಸ್ಥಳ-ಇವೇ ಪ್ರಸ್ತಾವಿತ 3 ಸ್ಥಳಗಳು.
ಡಿಸೆಂಬರ್ 4ರಂದು ರ‍್ಯಾಲಿ ನಡೆಸಲು ಅನಮತಿ ಕೋರಿದ ಟಿವಿಕೆ:
TVK seeks approval for Salem rally on December 4 as campaign resumes post-Karur tragedy.
— Pearson abraham/பியர்சன் (@pearsonlenekar) November 20, 2025
In a formal petition on Thursday submitted to Salem City Police Commissioner Anil Kumar Giri, TVK Salem Central District Secretary ‘Tamilan’ Parthiban requested approval for the event,… pic.twitter.com/j7pFm2OCVF
ಇತ್ತ ತಮಿಳುನಾಡು ಸರ್ಕಾರವು ಕರೂರು ಕಾಲ್ತುಳಿತದಂತಹ ದುರಂತಗಳನ್ನು ತಡೆಗಟ್ಟಲು ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸಿ ಕರಡು ರೂಪಿಸಿರುವ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP)ವನ್ನು ನವೆಂಬರ್ 21ರಂದು ಮದ್ರಾಸ್ ಹೈಕೋರ್ಟ್‌ಗೆ ಸಲ್ಲಿಸುವ ನಿರೀಕ್ಷೆಯಿದೆ. ಟಿವಿಕೆ ಈ ಹಿಂದೆ ಪಕ್ಷಗಳ ರ‍್ಯಾಲಿಗಳಿಗೆ ಏಕರೂಪದ ನಿಯಮ ಜಾರಿಗೊಳಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಪೊಲೀಸರು ಟಿವಿಕೆ ಮೇಲೆ ಮಾತ್ರ ಅಪ್ರಾಯೋಗಿಕ ಮತ್ತು ಕಠಿಣ ಷರತ್ತುಗಳನ್ನು ವಿಧಿಸುತ್ತಿದ್ದಾರೆ ಎಂದು ಆರೋಪಿಸಿತ್ತು.
ಪರೀಶೀಲಿಸುತ್ತಿರುವ ಪೊಲೀಸರು
ಸದ್ಯ ಸೇಲಂನ ಪೊಲೀಸರು ಅರ್ಜಿಯನ್ನು ಪರಿಶೀಲಿಸುತ್ತಿದ್ದಾರೆ. ಡಿಸೆಂಬರ್ 4ರಂದೇ ತಿರುವಣ್ಣಾಮಲೈ ಜಿಲ್ಲೆಯ ತಿರುವಣ್ಣಾಮಲೈ ದೇವಾಲಯದಲ್ಲಿ ಪ್ರಮುಖ ಉತ್ಸವದ ನಡೆಯಲಿದ್ದು, ಸಾವಿರಾರು ಮಂದಿ ಭೇಟಿ ನೀಡುವ ಸಾಧ್ಯತೆ ಹಿನ್ನಲೆಯಲ್ಲಿ ಹಲವು ಜಿಲ್ಲೆಗಳ ಪೊಲೀಸ್ ಪಡೆಗಳನ್ನು ಅಲ್ಲಿ ನಿಯೋಜಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಟಿವಿಕೆಯ ಪ್ರಸ್ತಾವಿತ ದಿನಾಂಕವು ಬಾಬರಿ ಮಸೀದಿ ಧ್ವಂಸದ ವಾರ್ಷಿಕೋತ್ಸವಕ್ಕೆ ಹತ್ತಿರದಲ್ಲಿದೆ. ಈ ದಿನಗಳಲ್ಲಿ ಸಾಮಾನ್ಯವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕಾದ ಅನಿವಾರ್ಯತೆ ಇರುತ್ತದೆ. ಹೀಗಾಗಿ ಪೊಲೀಸರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವ ಕುತೂಹಲ ಮೂಡಿದೆ.
Karur Stampede Tragedy: ಇನ್ನೂ ಆರಿಲ್ಲ ಕಾಲ್ತುಳಿತದ ಕಿಚ್ಚು; ವಿಜಯ್ ಮನೆಗೆ ಮತ್ತೆ ಬಾಂಬ್ ಬೆದರಿಕೆ
ಸದ್ಯ ಕರೂರು ದುರಂತವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕಾಲ್ತುಳಿತಕ್ಕೆ ಕಾರಣ ಪರಿಶೀಲಿಸಲಾಗುತ್ತಿದೆ. ಈ ಹಿಂದೆ ತಮಿಳುನಾಡು ಪೊಲೀಸರು ದುರಂತಕ್ಕೆ ಟಿವಿಕೆಯತ್ತ ಬೆಟ್ಟು ಮಾಡಿದ್ದರು. ಕಾರ್ಯಕ್ರಮದ ಸ್ಥಳಕ್ಕೆ ಬರಲು ವಿಜಯ್ ತಡ ಮಾಡಿದ್ದರಿಂದ ಜನ ಸಂದಣಿಯಲ್ಲಿ ಗೊಂದಲ ಉಂಟಾಗಿತ್ತು. ಅಲ್ಲದೆ ಅನೇಕರು ಗುಂಪಿನ ಮಧ್ಯೆ ಹಸಿವು, ಬಾಯಾರಿಕೆಯಿಂದ ಬಳಲುತ್ತಿದ್ದರು. ಇವರಿಗೆ ಸೂಕ್ತ ವ್ಯವಸ್ಥೆ ಇರಲಿಲ್ಲ ಎಂದು ಹೇಳಿದ್ದರು. ಅದಾಗ್ಯೂ ಟಿವಿಕೆ ಈ ಆರೋಪವನ್ನು ತಳ್ಳಿ ಹಾಕಿತ್ತು. ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದರು. ಇದು ಆಡಳಿತರೂಢ ಡಿಎಂಕೆಯ ಪಿತೂರಿ ಎಂದು ಹೇಳಿತ್ತು. ಕರೂರು ಕಾಲ್ತುಳಿತದಲ್ಲಿ ಸುಮಾರು 41 ಮಂದಿ ಮೃತಪಟ್ಟಿದ್ದರು.